ದುಬಾೖ: ಇನ್ನೇನು ಕೈಗೆ ಬಂದ ತುತ್ತು ಬಾಯಿಗೆ ಬೀಳಬೇಕು ಎಂಬ ಹಂತದಲ್ಲಿ ಎಡವಿದ ಪಂಜಾಬ್ ಕಿಂಗ್ಸ್, ಯುಎಇ ಆವೃತ್ತಿಯ ಐಪಿಎಲ್‌ನಲ್ಲಿ ಸೋಲಿನ ಆರಂಭ ಪಡೆದಿದೆ. ತಿರುಗಿ ಬಿದ್ದ ರಾಜಸ್ಥಾನ್ ರಾಯಲ್ಸ್ 2 ರನ್‌ಗಳ ರೋಚಕ ಜಯ ದಾಖಲಿಸಿ ಮೊದಲ ಸುತ್ತಿನ ಸೋಲಿಗೆ ಸೇಡು ತೀರಿಸಿಕೊಂಡಿದೆ.
ಮಂಗಳವಾರ ರಾತ್ರಿಯ ಮುಖಾಮುಖೀಯಲ್ಲಿ ರಾಜ ಸ್ಥಾನ್ 20 ಓವರ್‌ಗಳಲ್ಲಿ 185ಕ್ಕೆ ಆಲೌಟಾದರೆ, ಗೆಲುವಿನ ಲಯದಲ್ಲಿದ್ದ ಪಂಜಾಬ್ 20 ಓವರ್‌ಗಳಲ್ಲಿ 4 ವಿಕೆಟಿಗೆ 183 ರನ್ ಬಾರಿಸಿ ಎಡವಿತು.
ಅಂತಿಮ ಓವರ್‌ನಲ್ಲಿ ಗೆಲುವಿಗೆ ಕೇವಲ 4 ರನ್ ಮಾಡ ಬೇಕಿದ್ದ ಪಂಜಾಬ್‌ಗ ಈ ಗುರಿಯನ್ನು ಸಾಧಿಸಲಾಗಲಿಲ್ಲ. ಕಾರ್ತಿಕ್ ತ್ಯಾಗಿ ಅಮೋಘ ಬೌಲಿಂಗ್ ಮೂಲಕ ಪಂಜಾಬ್ ಕೈಲಿದ್ದ ಗೆಲುವನ್ನು ಕಸಿದರು. ಈ ಓವರ್‌ನಲ್ಲಿ ಪೂರಣ್ ಮತ್ತು ಹೂಡಾ ವಿಕೆಟ್ ಹಾರಿಸುವ ಜತೆಗೆ ಕೇವಲ ಒಂದು ರನ್ ನೀಡಿ ರಾಜಸ್ಥಾನ್ ಗೆಲುವಿನ ಹೀರೋ ಎನಿಸಿಕೊಂಡರು.
ದೊಡ್ಡ ಮೊತ್ತದ ಚೇಸಿಂಗ್ ವೇಳೆ ಕರ್ನಾಟಕದ ಆರಂಭಿಕರಾದ ಮಾಯಾಂಕ್ ಅಗರ್ವಾಲ್ ಮತ್ತು ಕೆ.ಎಲ್. ರಾಹುಲ್ 120 ರನ್ನುಗಳ ಪ್ರಚಂಡ ಜತೆಯಾಟ ನಡೆಸಿ ಭದ್ರ ಬುನಾದಿ ನಿರ್ಮಿಸಿದರು. 11.5 ಓವರ್ ತನಕ ಇವರಿಬ್ಬರ ಆರ್ಭಟ ಮುಂದುವರಿಯಿತು. ಅಗರ್ವಾಲ್ 43 ಎಸೆತಗಳಿಂದ ಸೊಗಸಾದ 67 ರನ್ ಬಾರಿಸಿದರು (7 ಬೌಂಡರಿ, 2 ಸಿಕ್ಸರ್). ನಾಯಕ ರಾಹುಲ್ 33 ಎಸೆತ ಎದುರಿಸಿ 49 ರನ್ ಮಾಡಿದರು (4 ಬೌಂಡರಿ, 2 ಸಿಕ್ಸರ್). ಬಳಿಕ ಮಾರ್ಕ್ ರಮ್ ಮತ್ತು ಪೂರಣ್ (32) ಸೇರಿಕೊಂಡು 57 ರನ್ ಜತೆಯಾಟ ನಿಭಾಯಿಸಿದರೂ ತಂಡವನ್ನು ದಡ ಸೇರಿಸಲು ವಿಫಲರಾದರು.
Related Articles
ರಾಜಸ್ಥಾನ್ ಓಪನರ್ ಎವಿನ್ ಲೆವಿಸ್, ಮಧ್ಯಮ ಕ್ರಮಾಂಕದ ಆಟಗಾರ ಮಹಿಪಾಲ್ ಲೊನ್ರೋರ್ ಸಿಡಿಲಬ್ಬರದ ಪ್ರದರ್ಶನ ನೀಡಿ ದುಬಾೖ ಸ್ಟೇಡಿಯಂನಲ್ಲೂ ಉತ್ತಮ ಮೊತ್ತ ಸಾಧ್ಯ ಎಂಬುದನ್ನು ನಿರೂಪಿಸಿದರು.
ಆದರೆ ಕೊನೆಯ 4 ಓವರ್‌ಗಳಲ್ಲಿ ಅಮೋಘ ನಿಯಂತ್ರಣ ಸಾಧಿಸಿದ ಪಂಜಾಬ್ ತಿರುಗಿ ಬೀಳುವಲ್ಲಿ ಯಶಸ್ವಿಯಾಯಿತು. ಈ ಅವಧಿಯಲ್ಲಿ ರಾಜಸ್ಥಾನ್ ಕೇವಲ 21 ರನ್ ಅಂತರದಲ್ಲಿ 6 ವಿಕೆಟ್ ಕಳೆದುಕೊಂಡಿತು. ಆರ್ಷದೀಪ್ 32ಕ್ಕೆ 5 ವಿಕೆಟ್ ಉಡಾಯಿಸಿ ಮೆರೆದರು. ಶಮಿ 3 ವಿಕೆಟ್ ಕಿತ್ತರು.
ಲೆವಿಸ್-ಜೈಸ್ವಾಲ್ ಅಬ್ಬರದ ಬ್ಯಾಟಿಂಗಿಗೆ ಮುಂದಾದರು. ಈ ಜೋಡಿಯಿಂದ ಹತ್ತರ ಸರಾಸರಿಯಲ್ಲಿ ರನ್ ಹರಿದುಬರತೊಡಗಿದಾಗ ರಾಜಸ್ಥಾನ್ ಬೃಹತ್ ಮೊತ್ತದ ಸೂಚನೆ ನೀಡಿತು. ಪವರ್ ಪ್ಲೇ ಅವಧಿಯಲ್ಲಿ 57 ರನ್, ಮೊದಲ 10 ಓವರ್‌ಗಳಲ್ಲಿ 94 ರನ್ ಒಟ್ಟುಗೂಡಿತು.
ಸ್ಫೋಟಕ ಆಟಕ್ಕೆ ಚಾಲನೆ ನೀಡಿದವರು ಎವಿನ್ ಲೆವಿಸ್. ವಿಂಡೀಸಿನ ಓಪನರ್ 21 ಎಸೆತಗಳಿಂದ 36 ರನ್ ಸಿಡಿಸಿದರು (7 ಫೋರ್, 1 ಸಿಕ್ಸರ್). ಇವರ ಜತೆಗಾರ ಯಶಸ್ವಿ ಜೈಸ್ವಾಲ್ ಕೂಡ ಮುನ್ನುಗ್ಗಿ ಬೀಸತೊಡಗಿದರು. 15ನೇ ಓವರ್ ತನಕ ಕ್ರೀಸ್ ಆಕ್ರಮಿಸಿಕೊಂಡ ಅವರಿಗೆ ಒಂದೇ ರನ್ನಿನಿಂದ ಅರ್ಧ ಶತಕ ತಪ್ಪಿತು (36 ಎಸೆತ, 6 ಬೌಂಡರಿ, 2 ಸಿಕ್ಸರ್).
ಪಂಜಾಬ್ ಎದುರಿನ ಕಳೆದ ಪಂದ್ಯದಲ್ಲಿ ಶತಕ ದಾಖಲಿಸಿದ್ದ ಸಂಜು ಸ್ಯಾಮ್ಸನ್ ಮಾತ್ರ ನಾಲ್ಕೇ ರನ್ನಿಗೆ ಔಟಾದರು. ಲಿವಿಂಗ್‌ಸ್ಟೋನ್ ಆಟವೂ ಬಿರುಸಿನಿಂದ ಕೂಡಿತ್ತು. 17 ಎಸೆತಗಳಿಂದ 25 ರನ್ ಬಾರಿಸಿದರು. ಡೆತ್ ಓವರ್‌ಗಳಲ್ಲಿ ಸಿಡಿಯುವ ಸರದಿ ಮಹಿಪಾಲ್ ಲೊನ್ರೋರ್ ಅವರದಾಯಿತು. ಹೂಡಾ ಪಾಲಾದ 16ನೇ ಓವರ್‌ನಲ್ಲಿ ಅವರು 24 ರನ್ ರಾಶಿ ಹಾಕಿದರು. ಎಡಗೈ ಆಟಗಾರ ಲೊನ್ರೋರ್ ಗಳಿಕೆ 17 ಎಸೆತಗಳಿಂದ 43 ರನ್. ಈ ರಂಜನೀಯ ಆಟದ ವೇಳೆ 4 ಸಿಕ್ಸರ್, 2 ಬೌಂಡರಿ ಸಿಡಿಯಿತು.
ಬರ್ತ್‌ಡೇ ದಿನವೇ ಗೇಲ್‌ಗೆ ವಿಶ್ರಾಂತಿ!:
ಪಂಜಾಬ್ ಕಿಂಗ್ಸ್ ತಂಡದ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಈ ಪಂದ್ಯದಲ್ಲಿ ಆಡಲಿಳಿಯಲಿಲ್ಲ. ಮಂಗಳ ವಾರ ಅವರ ಬರ್ತ್‌ಡೇ ಆಗಿದ್ದು, ಅಂಗಳದಲ್ಲಿ ಅವರಿಗೆ ಈ ಸಂಭ್ರಮ ಆಚರಿಸುವ ಅವಕಾಶ ತಪ್ಪಿತು. ಇವರ ಸ್ಥಾನ ಇನ್‌ಫಾರ್ಮ್ ಆಟಗಾರ ಐಡನ್ ಮಾರ್ಕ್‌ರಮ್ ಪಾಲಾಯಿತು. ಇದು ಮಾರ್ಕ್‌ರಮ್ ಅವರ ಮೊದಲ ಐಪಿಎಲ್ ಪಂದ್ಯ. ಐಪಿಎಲ್ ಕ್ಯಾಪ್ ಧರಿಸಿದ ಇನ್ನಿಬ್ಬರೆಂದರೆ ಆದಿಲ್ ರಶೀದ್ ಮತ್ತು ಇಶಾನ್ ಪೊರೆಲ್.