ಅಬುಧಾಬಿ: ಶುಭ್ ಮನ್ ಗಿಲ್ ಅಮೋಘ ಅರ್ಧಶತಕ ಮತ್ತು ನಾಯಕ ದಿನೇಶ್ ಕಾರ್ತಿಕ್ ಬೊಂಬಾಟ್ ಆಟದ ನೆರವಿನಿಂದ ಕೊಲ್ಕತ್ತಾ ನೈಟ್ ರೈಡರ್ಸ್ 20 ಓವರ್ ಗಳಲ್ಲಿ 164 ರನ್ ಪೇರಿಸಿದೆ. ಆ ಮೂಲಕ ಕಿಂಗ್ಸ್ ಇಲೆವೆನ್ ಪಂಜಾಬ್ ಗೆ 165 ರನ್ ಗಳ ಟಾರ್ಗೇಟ್ ನೀಡಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ನಾಯಕ ದಿನೇಶ್ ಕಾರ್ತಿಕ್ ಲೆಕ್ಕಾಚಾರ ಫಲಪ್ರದವಾಗಲಿಲ್ಲ. ಕಳೆದ ಪಂದ್ಯದ ಹೀರೋ ರಾಹುಲ್ ತ್ರಿಪಾಠಿ(4) 10 ಎಸೆತಗಳಲ್ಲಿ ಕೇವಲ ಒಂದು ಫೋರ್ ಸಿಡಿಸಿ ಶಮಿ ಬೌಲಿಂಗ್ ನಲ್ಲಿ ಕ್ಲೀನ್ ಬೌಲ್ಡ್ ಆದರು. ಶುಭ್ ಮನ್ ಗಿಲ್ ಜೊತೆಗಿನ ಮೊದಲ ವಿಕೆಟ್ ಜೊತೆಯಾಟದಲ್ಲಿ ಕೇವಲ 12 ರನ್ ಹರಿದುಬಂದಿತ್ತು.
ಒನ್ ಡೌನ್ ನಲ್ಲಿ ಕಣಕ್ಕಿಳಿದ ನಿತೀಶ್ ರಾಣಾ ಕೇವಲ 2 ರನ್ ಗಳಿಸಿ ರನೌಟ್ ಆಗಿ ಬಂದ ಹಾದಿಯಲ್ಲೇ ಹಿಂದಿರುಗಿದರು. ನಂತರ ಗಿಲ್ ಜೊತೆ ಕೂಡಿಕೊಂಡ ಇಯಾನ್ ಮೋರ್ಗನ್ ಉತ್ತಮ ರನ್ ಪೇರಿಸಿದರು. 1 ಸಿಕ್ಸ್ ಹಾಗೂ 2 ಫೋರ್ ಸಹಿತ 24 ರನ್ ಸಿಡಿಸಿ ರವಿ ಬಿಸ್ನೋಯ್ ಎಸೆತದಲ್ಲಿ ಮ್ಯಾಕ್ಸ್ ವೆಲ್ ಗೆ ಕ್ಯಾಚಿತ್ತರು.
ನಂತರ ಬ್ಯಾಟಿಂಗ್ ಗೆ ಇಳಿದ ನಾಯಕ ದಿನೇಶ್ ಕಾರ್ತಿಕ್, ಶುಭ್ ಮನ್ ಗಿಲ್ ಗೆ ಉತ್ತಮ ಸಾಥ್ ನೀಡಿದರು. ಈ ಜೋಡಿ ಬೌಂಡರಿ ಸಿಕ್ಸರ್ ಗಳ ಮೂಲಕ ತಂಡದ ಮೊತ್ತವನ್ನು 144ರ ಗಡಿ ದಾಟಿಸಿದರು. ಈ ವೇಳೆ ಉತ್ತಮ ಆಟವಾಡಿ ಅರ್ಧಶತಕದ ಸಂಭ್ರಮದಲ್ಲಿದ್ದ ಗಿಲ್ ರನ್ ಔಟ್ ಗೆ ಬಲಿಯಾದರು. ಗಿಲ್ 47 ಎಸೆತಗಳಲ್ಲಿ 5 ಬೌಂಡರಿಗಳ ಸಹಾಯದಿಂದ 57 ರನ್ ಸಿಡಿಸಿದರು.
ನಂತರ ಬಂದ ಆ್ಯಂಡ್ರೆ ರಸೆಲ್ (5) ಸಿಂಗ್ ಬೌಲಿಂಗ್ ನಲ್ಲಿ ಸಿಮ್ರಾನ್ ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಬೊಂಬಾಟ್ ಬ್ಯಾಟಿಂಗ್ ನಡೆಸಿದ ನಾಯಕ ದಿನೇಶ್ ಕಾರ್ತಿಕ್ 57 ರನ್ ಗಳಿಸಿದ್ದಾಗ ರನೌಟ್ ಆದರು. ಇವರ ಅರ್ಧಶತಕದಲ್ಲಿ 2 ಸಿಕ್ಸ್ ಮತ್ತು 7 ಫೋರ್ ಗಳು ಸೇರಿದ್ದವು. ಪ್ಯಾಟ್ ಕಮಿನ್ಸ್ 5 ರನ್ ಗಳಿಸಿ ನಾಟೌಟ್ ಆಗಿ ಉಳಿದರು. ಅಂತಿಮವಾಗಿ ಕೊಲ್ಕತ್ತಾ 20 ಓವರ್ ಗಳಲ್ಲಿ 6 ವಿಕಟ್ ನಷ್ಟಕ್ಕೆ 164 ರನ್ ಗಳಿಸಿತು.
ಪಂಜಾಬ್ ಪರ ಮೊಹಮ್ಮದ್ ಶಮಿ, ಹರ್ಷ ದೀಪ್ ಸಿಂಗ್, ರವಿಬಿಸ್ನೋಯ್ ತಲಾ 1 ವಿಕಟ್ ಪಡೆದರು.