ಅಮೃತಸರ: ಖಲಿಸ್ತಾನಿ ನಾಯಕ ಅಮೃತಪಾಲ್ ಸಿಂಗ್ ಅವರ ಸಹಾಯಕನನ್ನು ದೇಶದಿಂದ ಪಲಾಯನ ಮಾಡಲು ಯತ್ನಿಸುತ್ತಿದ್ದಾಗ ಪಂಜಾಬ್ ಪೊಲೀಸರು ಅಮೃತಸರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಗುರುವಾರ ಬಂಧಿಸಿದ್ದಾರೆ.
ವಾರಿಸ್ ಪಂಜಾಬ್ ಡಿ ಮುಖ್ಯಸ್ಥ ಅಮೃತಪಾಲ್ ಸಿಂಗ್ ನ ಸಹಾಯಕ ಗುರಿಂದರ್ ಸಿಂಗ್ ನನ್ನು ಅಮೃತಸರದ ಶ್ರೀ ಗುರು ರಾಮ್ ದಾಸ್ ಜೀ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ವಿಮಾನದ ಮೂಲಕ ಲಂಡನ್‌ಗೆ ಪ್ರಯಾಣಿಸಲು ಪ್ರಯತ್ನಿಸುತ್ತಿದ್ದಾಗ ಬಂಧಿಸಲಾಯಿತು.
ಈ ಹಿಂದೆ ಪೊಲೀಸರು ಗುರಿಂದರ್ ಸಿಂಗ್ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದರು. ಜಲಂಧರ್ ಮೂಲದ ಗುರಿಂದರ್ ಸಿಂಗ್ ಅಮೃತಪಾಲ್ ನ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿರ್ವಹಿಸುತ್ತಿದ್ದ.
ಖಲಿಸ್ತಾನಿ ನಾಯಕ ಅಮೃತಪಾಲ್ ಸಿಂಗ್ ಮತ್ತು ಅವರ ಬೆಂಬಲಿಗರು, ಕತ್ತಿ ಮತ್ತು ಬಂದೂಕುಗಳನ್ನು ಝಳಪಿಸುತ್ತಾ, ಬ್ಯಾರಿಕೇಡ್‌ಗಳನ್ನು ಭೇದಿಸಿ ಫೆಬ್ರವರಿ 24 ರಂದು ಅಮೃತಸರ ನಗರದ ಹೊರವಲಯದಲ್ಲಿರುವ ಅಜ್ನಾಲಾದಲ್ಲಿ ಪೊಲೀಸ್ ಠಾಣೆಗೆ ನುಗ್ಗಿದ್ದರು. ಅಪಹರಣ ಪ್ರಕರಣದ ಆರೋಪಿ ಲವ್‌ಪ್ರೀತ್ ಸಿಂಗ್ ತೂಫಾನ್‌ನನ್ನು ಬಿಡುಗಡೆ ಮಾಡಲಾಗುವುದು ಎಂದು ಅವರು ಪೊಲೀಸರಿಂದ ಭರವಸೆ ಪಡೆದಿದ್ದರು. ಘರ್ಷಣೆಯಲ್ಲಿ ಆರು ಪೊಲೀಸರು ಗಾಯಗೊಂಡಿದ್ದರು.