ಮೊಹಾಲಿ : ಇಲ್ಲಿನ ಪಂಜಾಬ್ ಕ್ರಿಕೆಟ್ ಸಂಸ್ಥೆ ಐಎಸ್ ಬಿಂದ್ರಾ ಸ್ಟೇಡಿಯಂನಲ್ಲಿ ಶನಿವಾರ ನಡೆದ ಪ್ರಸಕ್ತ ಐಪಿಎಲ್ ನ ಎರಡನೇ ರೋಚಕ ಪಂದ್ಯಕ್ಕೆ ಮಳೆ ಅಡ್ಡಿಯಾಯಿತು. ರೋಚಕ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ DLS ವಿಧಾನ ದಲ್ಲಿ ಪಂಜಾಬ್ ಕಿಂಗ್ಸ್ 7 ರನ್‌ಗಳಿಂದ ಗೆಲುವು ಸಾಧಿಸಿತು.
ಕೋಲ್ಕತ್ತಾ ನೈಟ್ ರೈಡರ್ಸ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಪಂಜಾಬ್ ಕಿಂಗ್ಸ್ ತಂಡ 5 ವಿಕೆಟ್ ನಷ್ಟಕ್ಕೆ 191 ರನ್ ಗಳನ್ನು ಕಲೆ ಹಾಕಿತು. ಪ್ರಭಾಸಿಮ್ರಾನ್ 23, ನಾಯಕ ಧವನ್ 40, ಅಮೋಘ ಆಟವಾಡಿದ ಬಿ ರಾಜಪಕ್ಸೆ 50 ರನ್ ಕೊಡುಗೆ ನೀಡಿ ಔಟಾದರು. ವಿಕೆಟ್ ಕೀಪರ್ ಜಿತೇಶ್ ಶರ್ಮಾ 21, ರಾಝ 16, ಸ್ಯಾಮ್ ಕರ್ರನ್ ಔಟಾಗದೆ 26 ಮತ್ತು ಶಾರುಖ್ ಖಾನ್ ಔಟಾಗದೆ 11 ರನ್ ಗಳಿಸಿದರು. ಕೆಕೆಆರ್ ಬೌಲಿಂಗ್ ನಲ್ಲಿ ಸೌಥಿ 2, ನರೈನ್, ಉಮೇಶ್ ಯಾದವ್ ಮತ್ತು ವರುಣ್ ಚಕ್ರವರ್ತಿ ತಲಾ ಒಂದು ವಿಕೆಟ್ ಪಡೆದರು.
ಬೃಹತ್ ಗುರಿ ಬೆನ್ನಟ್ಟಿದ ಕೆಕೆಆರ್ 13 ರನ್ ಆಗುವಷ್ಟರಲ್ಲಿ ಮನದೀಪ್ ಸಿಂಗ್ ಅವರ ವಿಕೆಟ್ ಕಳೆದುಕೊಂಡಿತು. ರಹಮಾನುಲ್ಲಾ ಗುರ್ಬಾಜ್ 22 ರನ್ ಗಳಿಸಿ ಔಟಾದರು. ಅನುಕೂಲ್ ರಾಯ್ 4 ರನ್ ಆಗುವಷ್ಟರಲ್ಲಿ ನಿರ್ಗಮಿಸಿದರು. ಆ ಬಳಿಕ ಭರವಸೆ ಮೂಡಿಸಿದ ವೆಂಕಟೇಶ್ ಅಯ್ಯರ್ 34 ಮತ್ತು ನಾಯಕ ನಿತೀಶ್ ರಾಣಾ (ಸಿ) 24 ರನ್ ಮಾಡಿ ಜೊತೆಯಾಟ ಸಂಘಟಿಸಿ ಔಟಾದರು. ರಿಂಕು ಸಿಂಗ್ 4 ರನ್ ಗಳಿಸಿ ಔಟಾದರು.
ಆ ಬಳಿಕ ಬಂದ ಆಂಡ್ರೆ ರಸೆಲ್ ಸ್ಪೋಟಕ ಆಟವಾಡಿದರು.19ಎಸೆತಗಳಲ್ಲಿ 35 ರನ್ ಗಳಿಸಿದ್ದ ವೇಳೆ ಸ್ಯಾಮ್ ಕರ್ರನ್ ಎಸೆದ ಚೆಂಡನ್ನು ರಾಝ ಅವರ ಕೈಗಿತ್ತು ನಿರ್ಗಮಿಸಿದರು. ಶಾರ್ದೂಲ್ ಠಾಕೂರ್ 8 ರನ್ ಮತ್ತು ಸುನಿಲ್ ನರೈನ್ 7 ರನ್ ಗಳಿಸಿ ಆಡುತ್ತಿದ್ದರು. 16 ನೇ ಓವರ್ ಮುಗಿಯುವ ವೇಳೆ 7 ವಿಕೆಟ್ ನಷ್ಟಕ್ಕೆ 146 ರನ್ ಗಳಿಸಿತ್ತು. ಮಳೆ ಅಡ್ಡಿಯಾದ ಕಾರಣ DLS ವಿಧಾನ ದಲ್ಲಿ ಪಂಜಾಬ್ ಕಿಂಗ್ಸ್ ವಿಜೇತ ಎಂದು ಘೋಷಿಸಲಾಯಿತು. 24 ಎಸೆತಗಳಲ್ಲಿ 46 ರನ್ ಗಳಿಸುವ ಅಗತ್ಯ ಕೆಕೆಆರ್ ಗೆ ಇತ್ತು.
ಬೌಲಿಂಗ್ ನಲ್ಲಿ 3 ಓವರ್ ಎಸೆದ ವೇಗಿ ಅರ್ಷದೀಪ್ ಸಿಂಗ್ 3 ವಿಕೆಟ್ ಕಬಳಿಸಿದರು. ಸ್ಯಾಮ್ ಕರ್ರನ್, ನಾಥನ್ ಎಲ್ಲಿಸ್, ರಾಝ ಮತ್ತು ರಾಹುಲ್ ಚಹಾರ್ ತಲಾ ಒಂದು ವಿಕೆಟ್ ಪಡೆದರು.