ಮುಂಬೈ: 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಗೆ ಭರ್ಜರಿ ತಯಾರಿ ನಡೆಯುತ್ತಿದೆ. ಈ ನಡುವೆ ಪಂಜಾಬ್ ಕಿಂಗ್ಸ್ ತಂಡವು ತನ್ನ ನೂತನ ನಾಯಕನನ್ನು ಹೆಸರಿಸಿದೆ. ಕರ್ನಾಟಕದ ಆಟಗಾರ ಮಯಾಂಕ್ ಅಗರ್ವಾಲ್ ಅವರು ಈ ಬಾರಿ ಪಂಜಾಬ್ ತಂಡವನ್ನು ಮುನ್ನಡೆಸಲಿದ್ದಾರೆ.
2018 ರಿಂದ ಪಂಜಾಬ್ ಕಿಂಗ್ಸ್ ತಂಡದಲ್ಲಿರುವ ಮಯಾಂಕ್ ಕಳೆದ ಋತುವಿನಲ್ಲಿ ರಾಹುಲ್ ಅನುಪಸ್ಥಿತಿಯಲ್ಲಿ ತಂಡದ ನಾಯಕರಾಗಿದ್ದರು. ಈ ಬಾರಿ ಪೂರ್ಣ ಪ್ರಮಾಣದ ನಾಯಕನಾಗಿ ಆಯ್ಕೆಯಾಗಿದ್ದಾರೆ.
ಕಳೆದೆರಡು ಸೀಸನ್ ನಲ್ಲಿ ಕನ್ನಡಿಗ ಕೆ.ಎಲ್.ರಾಹುಲ್ ಅವರು ಪಂಜಾಬ್ ಕಿಂಗ್ಸ್ ತಂಡವನ್ನು ಮುನ್ನಡೆಸಿದ್ದರು. ಆದರೆ ಈ ಬಾರಿ ರಾಹುಲ್ ಪಂಜಾಬ್ ಫ್ರಾಂಚೈಸಿ ತೊರೆದು ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಕೂಡಿಕೊಂಡಿದ್ದಾರೆ. ಹೀಗಾಗಿ ರಾಹುಲ್ ಗೆಳೆಯ ಮಯಾಂಕ್ ಗೆ ನಾಯಕತ್ವದ ಅವಕಾಶ ಸಿಕ್ಕಿದೆ.
ಬೆಂಗಳೂರಿನಲ್ಲಿ 2022 ರ ಐಪಿಎಲ್ ಮೆಗಾ ಹರಾಜಿನ ಮೊದಲು ಮಯಾಂಕ್ ಅಗರವಾಲ್ ಮತ್ತು ಎಡಗೈ ಸೀಮರ್ ಅರ್ಶ್‌ದೀಪ್ ಸಿಂಗ್ ಅವರನ್ನು ಫ್ರಾಂಚೈಸಿ ಉಳಿಸಿಕೊಂಡಿತ್ತು.
ಇದನ್ನೂ ಓದಿ:ದುಃಖ ಮಿಶ್ರಿತ ರಾಷ್ಟ್ರಪ್ರೇಮ!-ವೀಡಿಯೋ ವೈರಲ್
ಈ ಅದ್ಭುತ ತಂಡವನ್ನು ಪ್ರತಿನಿಧಿಸುವಲ್ಲಿ ನಾನು ಬಹಳಷ್ಟು ಹೆಮ್ಮೆಪಡುತ್ತೇನೆ. ತಂಡವನ್ನು ಮುನ್ನಡೆಸುವ ಅವಕಾಶ ಸಿಕ್ಕಿರುವುದಕ್ಕೆ ಸಂತಸವಾಗುತ್ತಿದೆ. ನಾನು ಈ ಜವಾಬ್ದಾರಿಯನ್ನು ಅತ್ಯಂತ ಪ್ರಾಮಾಣಿಕತೆಯಿಂದ ವಹಿಸಿಕೊಳ್ಳುತ್ತೇನೆ. ಈ ಋತುವಿನಲ್ಲಿ ಪಂಜಾಬ್ ಕಿಂಗ್ಸ್ ತಂಡದಲ್ಲಿ ನಾವು ಹೊಂದಿರುವ ಹೊಸ ಪ್ರತಿಭೆಗಳಿಂದ ನಾಯಕನಾಗಿ ನನ್ನ ಕೆಲಸ ಸುಲಭವಾಗುತ್ತದೆ ಎಂದು ನಾನು ನಂಬುತ್ತೇನೆ” ಎಂದು ಪಂಜಾಬ್ ಕಿಂಗ್ಸ್ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಮಯಾಂಕ್ ಅಗರ್ವಾಲ್ ಹೇಳಿದ್ದಾರೆ.
ಪಂಜಾಬ್ ಕಿಂಗ್ಸ್ ತಂಡವು ಈ ಬಾರಿ ಹರಾಜಿನಲ್ಲಿ ಹಿರಿಯ ಆಟಗಾರ ಶಿಖರ್ ಧವನ್ ಅವನ್ನು ಖರೀದಿ ಮಾಡಿತ್ತು. ಹೀಗಾಗಿ ನಾಯಕತ್ವದ ರೇಸ್ ನಲ್ಲಿ ಶಿಖರ್ ಹೆಸರು ಕೂಡಾ ಕೇಳಿಬಂದಿತ್ತು.
ಮಾರ್ಚ್ 26ರಂದು ಐಪಿಎಲ್ ಆರಂಭವಾಗಲಿದೆ. ಮೊದಲ ಪಂದ್ಯವು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ನಡೆಯಲಿದೆ.