ರಾಮನಗರ: ಮೊಬೈಲ್ ಕದ್ದ ಬಾಲಕನನ್ನು ಹಲವು ಗಂಟೆಗಳ ಕಾಲ ಮಾಲಕ ಕೂಡಿ ಹಾಕಿದ ಘಟನೆ ರಾಮನಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯಾರಬ್ ನಗರದಲ್ಲಿ ನಡೆದಿದೆ.
ದರ್ಗಾ ಉರುಸು ಪ್ರಯುಕ್ತ ಜೋಕಾಲಿಗಳನ್ನು ಹಾಕಲಾಗಿತ್ತು. ಈ ವೇಳೆ ಬಾಲಕ ಅಲ್ಲಿಗೆ ಬಂದಿದ್ದ. ಗೇಮ್ ಆಡುವುದನ್ನೇ ಚಟ ಮಾಡಿಕೊಂಡಿದ್ದ ಬಾಲಕ, ಜೋಕಾಲಿ ಮಾಲಕನ ಮೊಬೈಲ್ ಕದ್ದು ಪರಾರಿ ಆಗಲು ಯತ್ನಿಸಿದ್ದ.
ಅದೇ ವೇಳೆಗೆ ಮಾಲಕ ಮೊಬೈಲ್ ಎಲ್ಲಿ ಎಂದು ಹುಡುಕಾಡಿದಾಗ, ಬಾಲಕನ ಜೇಬಿನಲ್ಲಿ ಮೊಬೈಲ್ ರಿಂಗಣಿಸಿ ಸಿಕ್ಕಿಬಿದ್ದ. ಮೊಬೈಲ್ ಕದ್ದಿದ್ದಕ್ಕೆ ಮಾಲಕ ಬಾಲಕನ್ನು ಬಿಲ್ ಕೊಡೊವ ಜಾಗದಲ್ಲಿ ಕೂಡಿ ಹಾಕಿದ್ದು, ಬಿಲ್ ಕೊಠಡಿಗೆ ಚಿಲಕ ಹಾಕಿ, ಮೇಲೆ ಸರಪಳಿಯಿಂದ ಲಾಕ್ ಮಾಡಿದ್ದು ಮಾತ್ರವಲ್ಲದೇ ಅನ್ನ, ನೀರು, ಕೊಡದೇ ಕೂಡಿ ಹಾಕಿ ಬಾಲಕನಿಗೆ ಶಿಕ್ಷೆ ನೀಡಿದ್ದಾನೆ.
ಈ ವಿಚಾರ ತಿಳಿದು ಸ್ಥಳಕ್ಕೆ ಬಂದ ಸ್ಥಳೀಯರು, ಬಾಲಕನ ತಪ್ಪಿಗೆ ಕ್ಷಮಿಸುವಂತೆ ಕೋರಿ ಬಿಟ್ಟು ಕಳುಹಿಸಲು ಮನವಿ ಮಾಡಿದರು. ಬಳಿಕ ಮಾಲಕ ಸ್ಥಳೀಯರ ಮನವಿಗೆ ಓಗೊಟ್ಟು ಬಾಲಕನನ್ನು ಬಿಟ್ಟು ಕಳುಹಿಸಿದ ಘಟನೆ ನಡೆಯಿತು.
ಬಾಲಕನಿಗೆ ಬುದ್ಧಿವಾದ ಹೇಳೋದು ಬಿಟ್ಟು ಕೂಡಿ ಹಾಕಿದ್ದು ಎಷ್ಟು ಸರಿ ಎಂಬುದು ಈಗ ಸಾರ್ವಜನಿಕ ವಲಯದಲ್ಲಿ ಚರ್ಚೆ ಪ್ರಾರಂಭವಾಗಿದೆ.