ಶಿರಾ: ಸರ್ಕಾರಿ ಶಾಲೆಗಳ ಅಭಿವೃದ್ಧಿ ಹಾಗೂ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಉನ್ನತಿಗೆ ಬಜೆಟ್‌ನಲ್ಲಿ ಹೆಚ್ಚು ಅನುದಾನ ಮೀಸಲಿಡಲು ಸರ್ಕಾರದ ಮೇಲೆ ಒತ್ತಡ ಹಾಕಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಚಿದಾನಂದ.ಎಂ.
ಗೌಡ ಹೇಳಿದರು. ತಾಲೂಕು ಮೇಲ್ಕುಂಟೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿ, ಸಮಾಜದ ಎಲ್ಲಾ ಸಮಸ್ಯೆಗಳಿಗೂ ಶಿಕ್ಷಣವೇ ಪರಿಹಾರವಾಗಿದೆ.
ಇಂದಿನ ಸಮಾಜದಲ್ಲಿ ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಮೌಲ್ಯಯುತ ಶಿಕ್ಷಣ ನೀಡಬೇಕಿದೆ. ಮಕ್ಕಳ ಕಲಿಕೆಯಲ್ಲಿ ಪ್ರಾಥಮಿಕ ಶಾಲೆ ಶಿಕ್ಷಕರ ಪಾತ್ರ ಮುಖ್ಯವಾಗಿದೆ. ಅಗತ್ಯ ಕಟ್ಟಡ, ಬೋಧನಾ ಪರಿಕರ, ಮೂಲ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಮುಂಬರುವ ಬಜೆಟ್‌ನಲ್ಲಿ ಆದ್ಯತೆ ನೀಡಲಾಗುವುದು ಎಂದು ಹೆಳಿದರು.
ಶಿಕ್ಷಣಕ್ಕೆ ಹೆಚ್ಚು ಆದ್ಯತೆ: ವಿಧಾನಪರಿಷತ್ ಸದಸ್ಯ ಪ್ರದೇಶಾಭಿವೃದ್ಧಿ ಅನುದಾನ ಬಳಸಿಕೊಂಡು ಶಾಲೆಗಳ ಅಭಿವೃದ್ಧಿ ಮೂಲಕ ಶಿಕ್ಷಣಕ್ಕೆ ಆದ್ಯತೆ ನೀಡಲಾಗುವುದು. ಸರ್ಕಾರ ಜಾರಿಗೆ ತಂದಿರುವ ಅಮೃತ್ ಯೋಜನೆಯಲ್ಲಿ ಶಿರಾ ತಾಲೂಕಿನ ಹಲವು ಶಾಲೆಗಳ ಅಭಿವೃದ್ಧಿಗೆ ಅನುದಾನ ನೀಡಲಾಗಿದೆ. ಅಲ್ಲದೆ, ಗ್ರಾಮೀಣ ಪ್ರದೇಶದ ರಸ್ತೆಗಳು ಅಭಿವೃದ್ಧಿಗೂ ಆದ್ಯತೆ ನೀಡಿದ್ದೇವೆ.
ಹಳ್ಳಿಗಳ ಸಂಪರ್ಕ ಕಲ್ಪಿಸುವ ರಸ್ತೆಗಳ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದರು. ಮದಲೂರು ಗ್ರಾಪಂ ಅಧ್ಯಕ್ಷ ಈರಣ್ಣ, ಎಸ್.ಡಿ.ಎಂ.ಸಿ ಅಧ್ಯಕ್ಷ ಲಕ್ಷ್ಮಣ, ಕ್ಷೇತ್ರ ಶಿಕ್ಷಣಾಧಿಕಾರಿ ಶಂಕರಪ್ಪ, ಗೊಲ್ಲಹಳ್ಳಿ ಶಾಲೆ ಮುಖ್ಯೋಪಾಧ್ಯಾಯ ರಾಮಚಂದ್ರಪ್ಪ, ಮುಖ್ಯ ಶಿಕ್ಷಕಿ ಶಶಿಕಲಾ ಬಾನು, ಅರ್ಚಕ ರಂಗಾಚಾರ್ಯ, ಹೇಮಂತರಾಜು, ಗ್ರಾಪಂ ಸದಸ್ಯ ಶಿವಲಿಂಗಯ್ಯ, ರಂಗನಾಥ್, ರತ್ನಸಂದ್ರ ಬಸವರಾಜ್, ವೆಂಕಟೇಶ್, ಭೂತೇಶ್, ಗುಂಡಪ್ಪ ಸೇರಿದಂತೆ ಮುಖಂಡರು ಹಾಜರಿದ್ದರು.