Advertisement
ಚಿನ್ನದ ಚಮಚವನ್ನೇ ಬಾಯಲ್ಲಿ ಇಟ್ಟುಕೊಂಡು ಹುಟ್ಟಿದ್ದವರು ಪುನೀತ್. ವರನಟ ರಾಜ್ ಕುಮಾರ್ ಅವರ ಸುಪುತ್ರ ಎಂಬ ಹಿರಿಮೆ ಮತ್ತು ಹಿನ್ನೆಲೆ ಅವರಿಗಿತ್ತು. ಬೆಳ್ಳಿತೆರೆಯಲ್ಲಿ ಆರಂಭಿಸಿದ ಎರಡೂ ಇನ್ನಿಂಗ್ಸ್‌ಗಳಲ್ಲಿ ದೊಡ್ಡ ಮಟ್ಟದ ಯಶಸ್ಸು ಕೈ ಹಿಡಿದಿತ್ತು. ರಾಜ್ಯ ಪ್ರಶಸ್ತಿ, ರಾಷ್ಟ್ರ ಪ್ರಶಸ್ತಿಗಳು ಹುಡುಕಿಕೊಂಡು ಬಂದವು. ನೋಡನೋಡುತ್ತಲೇ ಅಭಿಮಾನಿಗಳ ಹಿಂಡೂ ಬೆಳೆಯಿತು. ಸಾಮಾನ್ಯವಾಗಿ, ಗೆಲುವು ಮತ್ತು ಶ್ರೀಮಂತಿಕೆಯನ್ನೇ ಉಸಿರಾಡಿ ಕೊಂಡು ಬೆಳೆಯುವ ಮಕ್ಕಳು ಉಡಾಫೆಯಿಂದ ಮಾತನಾಡುವುದನ್ನು ಕಲಿತುಬಿಡುತ್ತಾರೆ. ಸಾಮಾನ್ಯ ಜನರಿಂದ ಆದಷ್ಟೂ ದೂರವೇ ಉಳಿಯುತ್ತಾರೆ. ಈ ಮಾತಿಗೆ ಅಪವಾದವಾಗಿದ್ದುದು ಪುನೀತ್ ಅವರ ಹೆಚ್ಚುಗಾರಿಕೆ. ಯಾವ ಸಂದರ್ಭದಲ್ಲಿಯೂ ಅವರು ಮೈಮರೆಯಲಿಲ್ಲ.
Related Articles
Advertisement
ಚಿತ್ರನಟ ಅಂದಮೇಲೆ ಆಗೊಮ್ಮೆ ಈಗೊಮ್ಮೆ ವಿವಾದಗಳಿಗೆ ಆಹಾರವಾಗ ಬೇಕು ಎನ್ನುವುದು ಚಿತ್ರರಂಗದಲ್ಲಿಯೇ ಚಾಲ್ತಿಯಲ್ಲಿರುವ ನಂಬಿಕೆ. ಆದರೆ ಈ ನಂಬಿಕೆಯನ್ನೂ ಸುಳ್ಳು ಮಾಡಿದ್ದರು ಪುನೀತ್. ವಿವಾದಗಳಿಲ್ಲದೆ ಶ್ರದ್ಧೆಯಿಂದ ತನ್ನ ವೃತ್ತಿಯನ್ನು ನಿರ್ವಹಿಸಿದ ಪುನೀತ್ ಕನ್ನಡ ಚಿತ್ರರಂಗದ ಅಜಾತಶತ್ರು ಎಂದರೆ ಖಂಡಿತ ಅತಿಶಯೋಕ್ತಿಯಲ್ಲ. ನಿಜ ಹೇಳಬೇಕೆಂದರೆ, ಈತನಿಗೆ ವಿರೋ ಧಿಗಳೇ ಇರಲಿಲ್ಲ. ಬೆರಗಿನ ನೃತ್ಯ, ಭಾವಪೂರ್ಣ ಅಭಿನಯ, ಮಧುರ ಗಾಯನ ಮತ್ತು ಮಗುವಿನಂಥ ನಗೆಯ ಈ ದೊಡ್ಮನೆ ಹುಡುಗ, ತನಗೆ ಗೊತ್ತಿಲ್ಲದಂತೆಯೇ ಎಲ್ಲರ ಮನೆ ಮತ್ತು ಮನಸ್ಸಿನಲ್ಲಿ ಜಾಗ ಪಡೆದುಕೊಂಡಿದ್ದ. ಅಪ್ಪು ಇನ್ನಿಲ್ಲ ಎಂಬ ಸುದ್ದಿ ಕೇಳಿದಾಕ್ಷಣ ಅವರ ಅಭಿನಯದ ಸಿನೆ ಮಾಗಳನ್ನು ನೋಡದ ಜನರೂ ಭಾವುಕರಾಗಿ ಕಂಬನಿ ಮಿಡಿಯುತ್ತಿರುವುದು ಈ ಕಾರಣಕ್ಕೇ.
ಕುಟುಂಬದ ಜನರೆಲ್ಲ ಒಟ್ಟಾಗಿ ಕೂತು ನೋಡುವಂಥ ಚಿತ್ರಗಳಲ್ಲಿ ನಟಿಸಬೇಕು, ಅಂಥ ಚಿತ್ರಗಳನ್ನು ನಿರ್ಮಿಸಬೇಕು, ಆ ಮೂಲಕ ಒಂದು ಬದಲಾವಣೆಗೆ ಕಾರಣನಾಗಬೇಕು ಎಂದು ಆಸೆಪಡುತ್ತಿದ್ದ ಪುನೀತ್, ಹಲವು ಬಗೆಯ ಸಾಮಾಜಿಕ ಕಾರ್ಯಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರು. ಅವರ ದಿಢೀರ್ ನಿರ್ಗಮನದ ನೋವು ಕನ್ನಡ ಚಿತ್ರರಂಗ ಮತ್ತು ಚಿತ್ರಪ್ರೇಮಿಗಳನ್ನು ದೀರ್ಘ ಅವಧಿಯವರೆಗೆ ಕಾಡಲಿದೆ.