Advertisement
ತುಳು ಸಿನೆಮಾದ ಬೆಳವಣಿಗೆ ಹಾಗೂ ಕಲಾವಿದರ ಬಗ್ಗೆ ವಿಶೇಷ ಗೌರವ ಹೊಂದಿದ್ದ ಅವರು, ತುಳುನಾಡಿನಿಂದ ಸ್ಯಾಂಡಲ್‌ವುಡ್‌ಗೆ ಹೆಜ್ಜೆ ಇಟ್ಟ ನೂರಾರು ಕಲಾವಿದರಿಗೆ ನೆರವಾಗಿ ಆಸರೆ ಯಾಗಿದ್ದರು !
Related Articles
ಮಂಗಳೂರು ಸೌಂಡ್ ಆ್ಯಂಡ್ ಲೈಟ್ ಓನರ್ ಅಸೋಸಿಯೇಶನ್ ವತಿಯಿಂದ ಮಂಗಳೂರು ಪುರಭವನದಲ್ಲಿ ಶುಕ್ರವಾರ ಸಂಜೆ ಅಜಯ್ ವಾರಿಯರ್ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪುನೀತ್ ರಾಜ್‌ಕುಮಾರ್ ನಿಧನದ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ.
Advertisement
ಕಂಬಳ ಪ್ರೇಮಿ ಪುನೀತ್!ಕಂಬಳದ ಬಗ್ಗೆ ಪುನೀತ್ ವಿಶೇಷ ಆಸಕ್ತಿ ಹೊಂದಿದ್ದರು. ಕಂಬಳಕ್ಕೆ ನಿಷೇಧದ ತೂಗುಕತ್ತಿ ಎದುರಾಗಿದ್ದ ಸಂದರ್ಭ ಕಂಬಳ ಉಳಿಸುವ ನಿಟ್ಟಿನಲ್ಲಿ ಕರಾವಳಿಯ ಕಂಬಳ ಪ್ರೇಮಿಗಳ ಜತೆಗೆ ನಿಂತು ಸ್ವರ ಸೇರಿಸಿದ್ದರು. ಕಂಬಳ ಕ್ರೀಡೆ ಮುಂದುವರಿಯುವಂತೆ ಸರಕಾರಕ್ಕೆ ಮನವಿಯನ್ನೂ ಮಾಡಿದ್ದರು. ಯಕ್ಷಗಾನ ಮೆಚ್ಚಿದ ಪವರ್‌ಸ್ಟಾರ್!
ದುಬಾೖಯಲ್ಲಿ ನಡೆದ ಪಟ್ಲ ಫೌಂಡೇಶನ್ ಕಾರ್ಯ ಕ್ರಮ ದಲ್ಲಿ, ಯಕ್ಷಗಾನ ಶ್ರೇಷ್ಠ ಕಲೆ ಎಂದು ಕೊಂಡಾಡಿ ತುಳುವಿನಲ್ಲಿ ಮಾತನಾಡಿದ್ದರು. “ತುಳು ಸಿನೆಮಾ ಬಗ್ಗೆ ವಿಶೇಷ ಒಲವು ಹೊಂದಿದ್ದ ಪುನೀತ್ ತುಳುನಾಡಿನವರ ಹಲವು ಸಿನೆಮಾಗಳಿಗೆ ಬೆಂಬಲ, ಪ್ರೋತ್ಸಾಹ ನೀಡಿದ್ದರು ಎಂದು ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್‌ಬೈಲ್ ಹೇಳಿದ್ದಾರೆ. “ರಾವೊಂದು ರಾವೊಂದು ಬತ್ತ್ಂಡ್ ಉಮಿಲ್’!
“ಉಮಿಲ್’ ಸಿನೆಮಾದ ಟೈಟಲ್ ಸಾಂಗ್ ಬಗ್ಗೆ ನೆನೆಪು ಮಾಡಿದ ನಿರ್ದೇಶಕ ರಂಜಿತ್ ಸುವರ್ಣ ಅವರು “ಅಧ್ಯಕ್ಷ ಸಿನೆಮಾದ ಟೈಟಲ್ ಹಾಡಿನ ಸ್ವರೂಪದಲ್ಲಿಯೇ “ಉಮಿಲ್’ ಸಿನೆಮಾಕ್ಕೆ ಟೈಟಲ್ ಸಾಂಗ್ ಮಾಡಲು ಸಂಗೀತ ನಿರ್ದೇಶಕ ರವಿ ಬಸ್ರೂರು ನಿರ್ಧರಿಸಿ ಪುನೀತ್ ಅವರನ್ನು ಕೋರಲಾಗಿತ್ತು. ಇದರಂತೆ ಟ್ಯೂನ್ ಸಿದ್ಧಪಡಿಸಿ ಕೀರ್ತನ್ ಭಂಡಾರಿ ಅವರು ಬರೆದ “ರಾವೊಂದು ರಾವೊಂದು ಬತ್ತ್ಂಡ್ ಉಮಿಲ್’ ಸಾಹಿತ್ಯವನ್ನು ಮೊಬೈಲ್ ಮೂಲಕ ಪುನೀತ್ ಅವರಿಗೆ ಕಳುಹಿಸಿದ್ದೆವು. “ನಟ ಸಾರ್ವಭೌಮ’ ಸಿನೆಮಾ ಶೂಟಿಂಗ್‌ನ ಮಧ್ಯೆ ಬಿಡುವು ಮಾಡಿ ನಮ್ಮ ಟೈಟಲ್ ಸಾಂಗ್‌ನ ಸಾಹಿತ್ಯವನ್ನು ಅಭ್ಯಾಸ ಮಾಡಿದ್ದಾರೆ. ಬಳಿಕ ಹಾಡಿನ ರೆಕಾರ್ಡಿಂಗ್ ಮಾಡಿಕೊಟ್ಟಿದ್ದರು. ವಿಶೇಷವೆಂದರೆ, ತುಳು ಭಾಷೆಯ ಮೇಲಿನ ಪ್ರೀತಿಯಿಂದ ಈ ಹಾಡಿಗೆ ಅವರು ಗೌರವಧನವನ್ನೂ ಸ್ವೀಕರಿಸಲಿಲ್ಲ. ಜತೆಗೆ ಅವರ ಮನೆಗೆ ನಮ್ಮನ್ನು ಕರೆದುಕೊಂಡು ಆಡಿಯೋ ರಿಲೀಸ್ ಕೂಡ ಮಾಡಿದ್ದರು’ ಎಂದು ನೆನಪು ಮಾಡುತ್ತಾರೆ ಅವರು. ಕಲಾವಿದರನ್ನು ಗೌರವಿಸುವ ಗುಣ ಅಪೂರ್ವ: ಬೋಳಾರ್
ಚಿತ್ರ ಕಲಾವಿದ ಅರವಿಂದ ಬೋಳಾರ್ ಅವರು “ಉದಯವಾಣಿ’ ಜತೆಗೆ ಮಾತನಾಡಿ, “ತುಳು ಭಾಷೆಯ ಕಲಾವಿದರ ಬಗ್ಗೆ ಹಾಗೂ ಸಿನೆಮಾ ಬಗ್ಗೆ ಹೆಚ್ಚು ಅಕ್ಕರೆ ಹೊಂದಿದವರು ಪುನೀತ್. ನನ್ನನ್ನು ಅವರ ಅಭಿನಯದ ಕನ್ನಡ ಸಿನೆಮಾದಲ್ಲಿ ಅಭಿನಯಿಸಲು ಕೂಡ ಕೋರಿದ್ದರು. ಹಲವು ಬಾರಿ ನಾವು ಜತೆಯಾಗಿದ್ದೇವೆ. ದುಬೈಯಲ್ಲಿ ನಡೆದ ಪಟ್ಲ ಫೌಂಡೇಶನ್‌ನ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದ್ದು ಅವಿಸ್ಮರಣೀಯ ಕ್ಷಣ. ಬೆಂಗಳೂರಿನಲ್ಲಿ ಅವರ “ಮಾಯಾಬಜಾರ್’ ಸಿನೆಮಾ ವೇಳೆ ನನ್ನ ಜತೆಗೆ ಹಲವು ಸಮಯ ಜತೆಗಿದ್ದರು. ಸಣ್ಣ ಕಲಾವಿದರನ್ನು ಕೂಡ ಗೌರವಿಸುವ ಅವರ ಗುಣ ಅತ್ಯಪೂರ್ವ’ ಎನ್ನುತ್ತಾರೆ. ಪುನೀತ್ ಹೃದಯವಂತ ಕಲಾವಿದ: ಪಡೀಲ್
ಚಿತ್ರ ಕಲಾವಿದ ನವೀನ್ ಡಿ.ಪಡೀಲ್ “ಉದಯವಾಣಿ’ ಜತೆಗೆ ಮಾತನಾಡಿ, “ಪುನೀತ್ ಅವರಿಗೆ ತುಳು ಸಿನೆಮಾ ಕಲಾವಿದರ ಬಗ್ಗೆ ವಿಶೇಷ ಪ್ರೀತಿ. ಹೃದಯವಂತ ಕಲಾವಿದ ಅವರು. ತುಳು ಭಾಷೆಯ ಹಲವು ಸಿನೆಮಾಗಳಿಗೆ ಶುಭಕೋರಿ ಅವರು ವಿಡಿಯೋ ಮೂಲಕ ಹಾರೈಕೆ ಮಾಡುತ್ತಿದ್ದರು. ಮಜಾ ಟಾಕೀಸ್‌ನಲ್ಲಿ ಅವರು ಭಾಗವಹಿಸಿದ್ದರು. ಹಲವು ವರ್ಷದ ಹಿಂದೆ ಜಾಹೀರಾತಿನಲ್ಲಿ ನಾನು ಅವರ ಜತೆಗೆ ಅಭಿನಯಿಸಿದ್ದೆನು’ ಎಂದರು. ಇದನ್ನೂ ಓದಿ:ಅಪ್ಪು ಅಂತಿಮ ನಮನ : ಕಂಠೀರವ ಸ್ಟೇಡಿಯಂ ಬಳಿ ನೂಕು ನುಗ್ಗಲು ಕುಂದಾಪುರದ ಕಾಣೆ ಮೀನು ಇಷ್ಟ
ಕುಂದಾಪುರ: ಪುನೀತ್ ಅವರಿಗೆ ಕುಂದಾಪುರದೊಂದಿಗೆ ನಂಟಿದ್ದು, ಇಲ್ಲಿಗೆ ಹಲವು ಬಾರಿ ಭೇಟಿ ನೀಡಿದ್ದಲ್ಲದೆ, ಇಲ್ಲಿನ ಕಾಣೆ ಮೀನನ್ನು ಬಹುವಾಗಿ ಇಷ್ಟಪಟ್ಟಿದ್ದರು. ಕೊಲ್ಲೂರು, ಆನೆಗುಡ್ಡೆ ದೇವಸ್ಥಾನಕ್ಕೆ ಆಗಾಗ್ಗೆ ಭೇಟಿ ನೀಡುತ್ತಿದ್ದರು. ಇಲ್ಲಿಯ ಜನ ಸಜ್ಜನರು. ಕುಂದಾಪುರ ಚಿಕನ್, ಮೀನು ಫ್ತೈ, ನೀರ್ದೋಸೆ ನನಗಿಷ್ಟ. ಇಲ್ಲಿನ ಪರಿಸರ ಕೂಡ ಅದ್ಭುತ ಎನ್ನುವುದಾಗಿ 2017 ರಲ್ಲಿ ಕುಂದಾಪುರಕ್ಕೆ ಬಂದಿದ್ದಾಗ ಅಭಿಮಾನ ವ್ಯಕ್ತಪಡಿಸಿದ್ದರು. ಇದಲ್ಲದೆ ಕನ್ನಡದ ಕೋಟ್ಯಧಿಪತಿ ಟಿವಿ ರಿಯಾಲಿಟಿ ಶೋವೊಂದರಲ್ಲಿ ಕುಂದಾಪುರದ ಕಾಣೆ ಮೀನು ಅಂದ್ರೆ ನನಗೆ ಇಷ್ಟ. ಇಲ್ಲಿನ ಶೆಟ್ಟಿ ಲಂಚ್ ಹೋಂನಲ್ಲಿ ತಿನ್ನುತ್ತಿದ್ದೆ ಎಂದಿದ್ದರು.ಹಾಡು ಹಾಡಿದ್ದರು.. ಸಂಗೀತ ನಿರ್ದೇಶಕ ರವಿ ಬಸ್ರೂರು ಅವರ ನಿರ್ದೇಶನದ ಬಿಲಿಂಡರ್ ಚಿತ್ರದ “ಶೋಕಿ ಗಂಡ್ ನಾನಲ್ಲ’ ಎನ್ನುವ ಕುಂದಾಪ್ರ ಕನ್ನಡ ಹಾಡನ್ನು ಸಹ ಹಾಡಿದ್ದರು. ಪ್ರಮೋದ್ ಮರವಂತೆ ಸಾಹಿತ್ಯ, ರವಿ ಬಸ್ರೂರು ಅವರ ಸಂಗೀತ ನಿರ್ದೇಶನದ ಅಂಜನಿಪುತ್ರ ಸಿನೆಮಾದ “ಚೆಂದ ಚೆಂದ ನನ್ ಹೆಂಡ್ತಿ’ ಎಂಬ ಕುಂದಾಪ್ರ ಶೈಲಿಯ ಕನ್ನಡ ಹಾಡಿಗೆ ಪುನೀತ್ ಅವರು ಹೆಜ್ಜೆ ಹಾಕಿದ್ದರು. ಉಡುಪಿಗೆ 3 ಬಾರಿ ಭೇಟಿ
ಉಡುಪಿ: ಶುಕ್ರವಾರ ನಮ್ಮನ್ನಗಲಿದ ಚಿತ್ರನಟ ಪುನೀತ್ ರಾಜಕುಮಾರ್ ಮತ್ತು ಉಡುಪಿಗೆ ಇದ್ದ ಸಂಬಂಧ ಇನ್ನು ನೆನಪು ಮಾತ್ರ. ತಂದೆ ಡಾ| ರಾಜಕುಮಾರ್ ಅವರಿಂದಾಗಿ ಕರಾವಳಿಯ ಜತೆ ಪುನೀತರಿಗೂ ಉತ್ತಮ ಸಂಬಂಧವಿತ್ತು. ತಂದೆ ಡಾ| ರಾಜಕುಮಾರ್ ಜತೆ ಎರಡು ಮತ್ತು ಮೂರು ವರ್ಷಗಳ ಹಿಂದೆ ತಾವೇ ನಟನಾಗಿ ಪುನೀತ್ ಒಟ್ಟು ಮೂರು ಉಡುಪಿಗೆ ಆಗಮಿಸಿದ್ದರು. ಸುಮಾರು 30 ವರ್ಷ ಹಿಂದೆ “ಒಂದು ಮುತ್ತಿನ ಕಥೆ’ ಚಲನಚಿತ್ರದ ಚಿತ್ರೀಕರಣಕ್ಕೆ ಡಾ| ರಾಜಕುಮಾರ್ ಬಂದಿದ್ದರು. ಆಗ ಹೂಡೆಯಲ್ಲಿ ಚಿತ್ರೀಕರಣ ನಡೆದಿತ್ತು. ಉಡುಪಿಯ ಲಾಡ್ಜ್ ಒಂದರಲ್ಲಿ ಡಾ| ರಾಜ್ ಉಳಿದುಕೊಂಡಿದ್ದರು. ಆ ಸಂದರ್ಭ ತಂದೆ ಮತ್ತು ತಾಯಿ ಪಾರ್ವತಮ್ಮ ರಾಜಕುಮಾರ್ ಜತೆ ಹುಡುಗ ಪುನೀತ್ ಬಂದಿದ್ದರು. ರಾತ್ರಿ ದೋಣಿಯಲ್ಲಿ ಡಾ| ರಾಜಕುಮಾರ್ ಹೋಗುವಾಗ ಚಿತ್ರೀಕರಣ ನಡೆದದ್ದು, ಆಗ ಪುನೀತ್ ಉಸುಕಿನ ರಾಶಿ, ಕಡಲಿನಲ್ಲಿ ಆಟವಾಡುತ್ತಿದ್ದದ್ದನ್ನು ಸ್ಥಳೀಯರು ನೆನಪಿಸಿಕೊಳ್ಳುತ್ತಾರೆ. 2019ರ ಫೆಬ್ರವರಿ 19ರಂದು “ಯುವರತ್ನ’ ಚಲನಚಿತ್ರದ ಹೀರೋ ಆಗಿ ಪುನೀತ್ ಆಗಮಿಸಿದ್ದರು. ತೊಟ್ಟಂ ಬೀಚ್‌ನಲ್ಲಿ ಚಿತ್ರೀಕರಣ ನಡೆದಿತ್ತು. ಅದೇ ಸಂದರ್ಭ ಪುನೀತ್ ಅವರು ಶ್ರೀಕೃಷ್ಣ ಮಠಕ್ಕೆ ಆಗಮಿಸಿ ದೇವರ ದರ್ಶನ ಪಡೆದು ಆಗ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥರು ಆಯೋಜಿಸಿದ್ದ ಚಿನ್ನದ ಗೋಪುರದ ನಿಧಿ ಸಂಗ್ರಹದ ಹುಂಡಿಯನ್ನು ಉದ್ಘಾಟಿಸಿದ್ದರು. 6 ವರ್ಷದ ಪುನೀತ್ ಉಡುಪಿಗೆ ಬಂದಾಗ…
ಉಡುಪಿ: ಸುಮಾರು ನಾಲ್ಕು ದಶಕಗಳ ಹಿಂದೆ ವರನಟ ರಾಜಕುಮಾರ್ ಅವರು ಸಕುಟುಂಬಿಕರಾಗಿ ಉಡುಪಿಗೆ ಬಂದ ಸಂದರ್ಭ ಅವರ ಜತೆ ಆರು ವರ್ಷ ಪ್ರಾಯದ ಪುನೀತ್ ರಾಜಕುಮಾರ್ ಕೂಡ ಆಗಮಿಸಿದ್ದರು. ರಾಜಕುಮಾರ್, ಪಾರ್ವತಮ್ಮ ರಾಜಕುಮಾರ್, ಪುನೀತ್ ಅವರು ಅದಮಾರು ಮಠದ ಶ್ರೀವಿಬುಧೇಶತೀರ್ಥ ಶ್ರೀಪಾದರನ್ನು ಭೇಟಿ ಮಾಡಲು 1981ರಲ್ಲಿ ಪೂರ್ಣಪ್ರಜ್ಞ ಕಾಲೇಜಿಗೆ ಬಂದಿದ್ದರು. ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾಗಿದ್ದ ಪ್ರೊ| ಸದಾಶಿವ ರಾವ್, ಪಿಪಿಸಿ ಪ್ರಾಧ್ಯಾಪಕ ಪ್ರೊ|ಡಿ.ಜಿ.ಹೆಗಡೆ ಮೊದಲಾದವರು ಇದ್ದರು. ಕನ್ನಡಿಗರ ಕಣ್ಮಣಿ: ನಳಿನ್‌ಕುಮಾರ್ ಕಟೀಲು
ಮಂಗಳೂರು: ಚಿತ್ರ ನಟ ಪುನೀತ್ ರಾಜ್‌ಕುಮಾರ್ ನಿಧನಕ್ಕೆ ಸಂಸದ ಹಾಗೂ ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ತೀವ್ರ ಸಂತಾಪ ಸೂಚಿಸಿದ್ದಾರೆ. “ಅಪ್ಪು’ ಎಂದೇ ಖ್ಯಾತಿ ಪಡೆದಿರುವ ಅವರು ಕನ್ನಡಿಗರ ಕಣ್ಮಣಿ ಎನಿಸಿದ್ದರು. ಬಾಲ್ಯದಲ್ಲೇ ಚಿತ್ರರಂಗ ಪ್ರವೇಶಿಸಿದ್ದ ಅವರ ನಿಧನ ನಾಡಿನ ಸಮಸ್ತ ಕನ್ನಡಿಗರಿಗೆ ಆಘಾತವನ್ನು ತಂದಿದೆ ಎಂದವರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಜನರು ಶಾಂತಿ- ಸಂಯಮದಿಂದ ವರ್ತಿಸುವಂತೆ ಮನವಿ ಮಾಡಿದ್ದಾರೆ. ಗಣ್ಯರ ಸಂತಾಪ
ಸಚಿವ ಕೋಟ ಶ್ರೀನಿವಾಸ ಪೂಜಾರಿ, ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಸ್ವಾಮೀಜಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಶಾಸಕ ಲಾಲಾಜಿ ಆರ್. ಮೆಂಡನ್, ದ.ಕ. ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ , ಜಿಲ್ಲಾ ಬಿಜೆಪಿ ಅಧ್ಯಕ್ಷ ಸುರೇಶ ನಾಯಕ್ ಮುಂತಾದವರು ಶೋಕ ವ್ಯಕ್ತಪಡಿಸಿದ್ದಾರೆ. ಡಾ| ಹೆಗ್ಗಡೆ ಸಂತಾಪ
ಬೆಳ್ತಂಗಡಿ: ಪುನೀತ್ ರಾಜ್‌ಕುಮಾರ್ ನಿಧನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ತೀವ್ರ ಸಂತಾಪ ಸೂಚಿಸಿದ್ದಾರೆ. ಪುನೀತ್ ಅವರ ನೇರ ನಡೆ-ನುಡಿ, ಸಜ್ಜನಿಕೆ ಮತ್ತು ಸರಳ ವ್ಯಕ್ತಿತ್ವವನ್ನು ಮೆಚ್ಚಿಕೊಂಡಿದ್ದೇನೆ. ಭಾವಪೂರ್ಣ ನಟನೆಯಿಂದ ಕನ್ನಡಿಗರ ವಿಶೇಷ ಅಭಿಮಾನ ಮತ್ತು ಗೌರವಕ್ಕೆ ಪಾತ್ರರಾಗಿದ್ದ ಅವರು ವಿಧಿವಶರಾಗಿರುವುದು ತೀವ್ರ ದುಃಖವನ್ನುಂಟು ಮಾಡಿದೆ. ಅವರು ಧರ್ಮಸ್ಥಳದ ಒಂದೆರಡು ಕಾರ್ಯಕ್ರಮಗಳಲ್ಲಿ ಭಾಗವಹಿಸಿರುತ್ತಾರೆ. ನಾನು ಶ್ರೀ ಮಂಜುನಾಥ ಸ್ವಾಮಿಯಲ್ಲಿ ಪ್ರಾರ್ಥಿಸಿ ಅವರ ಆತ್ಮಕ್ಕೆ ಚಿರಶಾಂತಿ ಕೋರುತ್ತಾ ಕುಟುಂಬ ವರ್ಗದವರಿಗೆ ಮತ್ತು ಅಭಿಮಾನಿಗಳಿಗೆ ದುಃಖವನ್ನು ಸಹಿಸುವ ಶಕ್ತಿ-ತಾಳ್ಮೆಯನ್ನಿತ್ತು ಹರಸಲೆಂದು ಪ್ರಾರ್ಥಿಸುತ್ತೇನೆ ಎಂದು ಹೆಗ್ಗಡೆ ಅವರು ಸಂತಾಪ ಸೂಚನೆಯಲ್ಲಿ ತಿಳಿಸಿದ್ದಾರೆ. ವಕ್ವಾಡಿ ಜತೆಗೆ ಅವಿನಾಭಾವ ಸಂಬಂಧ
ಕೋಟೇಶ್ವರ: ಪುನೀತ್ ಅವರು ವಕ್ವಾಡಿ, ಕೋಟೇಶ್ವರದ ನಿಕಟ ಸಂಬಂಧ ಹೊಂದಿದ್ದು, ಇದೀಗ ಅವರ ನಿಧನದಿಂದ ಗ್ರಾಮಸ್ಥರು ದಿಗ್ಭ್ರಮೆಗೊಂಡಿದ್ದಾರೆ. ವಕ್ವಾಡಿ ಮೂಲದ ಬೆಂಗಳೂರಿನ ಉದ್ಯಮಿ ಹಾಗೂ ಸಿನೆಮಾ ನಿರ್ಮಾಪಕ ದಿ| ವಿ.ಕೆ. ಮೋಹನ್ ಅವರ ಮನೆಯಲ್ಲಿ ಪ್ರತೀ ವರ್ಷ ನಡೆಯುತ್ತಿದ್ದ ಮಕರ ಸಂಕ್ರಮಣದ ಅಯ್ಯಪ್ಪ ಸ್ವಾಮಿಯ ವಿಶೇಷ ಪೂಜೆಯಲ್ಲಿ ಪುನೀತ್ ಅವರು ತಂದೆ ದಿ| ಡಾ| ರಾಜ್‌ಕುಮಾರ್ ಹಾಗೂ ಸಹೋದರ ಶಿವರಾಜ್ ಕುಮಾರ್ ಅವರೊಂದಿಗೆ ಪ್ರತೀವರ್ಷ ಪಾಲ್ಗೊಳ್ಳುತ್ತಿದ್ದರು. ರಾಜ್‌ಕುಮಾರ್ ಅವರ ನಿಧನಾನಂತರವೂ ಪುನೀತ್ ಸೇರಿದಂತೆ ರಾಜ್ ಕುಟುಂಬ ಇಲ್ಲಿಗೆ ಬರುತ್ತಿತ್ತು. ಪುನೀತ್ ಅಭಿಮಾನಿ ಆಸ್ಪತ್ರೆಗೆ
ಕೋಟ: ಪುನೀತ್ ರಾಜ್‌ಕುಮಾರ್ ಸಾವಿನ ಹಿನ್ನೆಲೆಯಲ್ಲಿ ಬೇಸತ್ತ ಅವರ ಅಭಿಮಾನಿ ಸಾಲಿಗ್ರಾಮದ ಆಟೋ ರಿಕ್ಷಾ ಚಾಲಕ ಸತೀಶ್, ಅವರದ್ದೇ ರಿಕ್ಷಾದ ಹಿಂದಿನ ಗಾಜಿಗೆ ಕೈಯನ್ನು ಚಚ್ಚಿಕೊಂಡು ಪೆಟ್ಟು ಮಾಡಿಕೊಂಡಿದ್ದಾರೆ. ಅವರು ಕೋಟೇಶ್ವರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ