ಪುಣೆ: ಜೀವನದಲ್ಲಿ ಕೆಲವೊಮ್ಮೆ ಅದೃಷ್ಟ ಎದುರಾಗುತ್ತದೆ. ಆದರೆ ಈ ಅದೃಷ್ಟದಿಂದಲೇ ಜೀವನದಲ್ಲಿ ಸಂಕಷ್ಟ ಎದುರಾದರೆ ಹೇಗೆ?
ಇಂಥದ್ದೇ ಒಂದು ಘಟನೆ ಪುಣೆಯಲ್ಲಿ ನಡೆದಿದೆ. ಪುಣೆಯ ಸಬ್ ಇನ್ಸ್‌ಪೆಕ್ಟರ್ ಸೋಮನಾಥ್ ಜೆಂಡೆ ಅವರು ಇತ್ತೀಚೆಗೆ ಫ್ಯಾಂಟಸಿ ಗೇಮ್ ಆಗಿರುವ ಡ್ರೀಮ್ 11 ನಲ್ಲಿ ಟೀಮ್ ವೊಂದನ್ನು ಮಾಡಿದ್ದರು. ಅವರ ಅದೃಷ್ಟಕ್ಕೆ ಅವರು ಮಾಡಿದ ತಂಡಕ್ಕೆ ಬಂಪರ್ ಬಂದಿತ್ತು. 1.5 ಕೋಟಿ ರೂಪಾಯಿ ಬಂದಿತ್ತು.
ಪೊಲೀಸ್ ಒಬ್ಬರು ಕೋಟಿ ಗೆದ್ದ ಸುದ್ದಿ ಪುಣೆಯ ಪಿಂಪ್ರಿ-ಚಿಂಚ್ವಾಡ್ ನಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿತ್ತು. ಸೋಮನಾಥ್ ಅವರ ಹಣ ಗೆದ್ದಿರುವ ವಿಚಾರ ಸೋಶಿಯಲ್ ಮೀಡಿಯಾ ಸೇರಿದಂತೆ ಹಲವು ಸ್ಥಳೀಯ ಟವಿಗಳಲ್ಲೂ ಬಂದಿತ್ತು.
ಇದೇ ವಿಚಾರವಾಗಿ ಸೋಮನಾಥ್ ಪೊಲೀಸ್ ಕೆಲಸದಿಂದ ಅಮಾನತು ಆಗಿದ್ದಾರೆ. ಪೊಲೀಸ್ ಇಲಾಖೆಯಲ್ಲಿದ್ದು ಈ ರೀತಿ ಮಾಡಿದ್ದಕ್ಕಾಗಿ ಅವರ ಮೇಲೆ ಕ್ರಮಕೈಗೊಂಡು, ತನಿಖೆಗೆ ಇಲಾಖೆ ಆದೇಶಿಸಿತ್ತು.
ಸೋಮನಾಥ್ ಅವರು ಅನುಮತಿಯಿಲ್ಲದೆ ಆನ್‌ಲೈನ್ ಆಟವನ್ನು ಆಡಿದ್ದರು ಮತ್ತು ಪೊಲೀಸ್ ಸಮವಸ್ತ್ರವನ್ನು ಧರಿಸಿ ಮಾಧ್ಯಮ ಸಂದರ್ಶನಗಳನ್ನು ನೀಡಿದ್ದಾರೆ. ಅವರು ಕರ್ತವ್ಯ ಲೋಪದ ನಿಯಮವನ್ನು ಉಲ್ಲಂಘಿಸಿದ ಪರಿಣಾಮ ಅವರನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ ಎಂದು ತನಿಖೆ ನಡೆಸಿದ ಉಪ ಪೊಲೀಸ್ ಆಯುಕ್ತ, ಸ್ವಪ್ನಾ ಗೋರ್ ಅವರು ಹೇಳಿದ್ದಾರೆ.
ಈ ಕ್ರಮ ಇತರೆ ಪೊಲೀಸರಿಗೆ ಮಾದರಿ ಆಗಬೇಕು. ಇಲಾಖೆಯಲ್ಲಿದ್ದು ಆನ್ ಲೈನ್ ಗೇಮ್ ಗಳನ್ನು ಆಡಬಾರದೆಂದು ಅವರು ಹೇಳಿದ್ದಾರೆ.