Advertisement

ಪುಣೆ ನಾಯಕತ್ವದಿಂದ ಧೋನಿ ವಜಾ

03:45 AM Feb 20, 2017 | Harsha Rao |

ಕೋಲ್ಕತಾ: ಮಹೇಂದ್ರ ಸಿಂಗ್‌ ಧೋನಿ ಅವರನ್ನು ಐಪಿಎಲ್‌ ಫ್ರಾಂಚೈಸಿ ರೈಸಿಂಗ್‌ ಪುಣೆ ಸೂಪರ್‌ಜಯಂಟ್ಸ್‌ ತಂಡದ ನಾಯಕತ್ವದಿಂದ ವಜಾಗೊಳಿಸಲಾಗಿದೆ ಮತ್ತು ಆಸ್ಟ್ರೇಲಿಯದ ಸ್ಟೀವನ್‌ ಸ್ಮಿತ್‌ ಅವರನ್ನು ನಾಯಕರಾಗಿ ನೇಮಕ ಮಾಡಲಾಗಿದೆ. ಇದರಿಂದಾಗಿ ಧೋನಿ ಅವರ ಅಂತಾರಾಷ್ಟ್ರೀಯ ಮತ್ತು ಫ್ರಾಂಚೈಸಿ ಕ್ರಿಕೆಟ್‌ನ ನಾಯಕ ಹುದ್ದೆಯ ಇನ್ನಿಂಗ್ಸ್‌ ಅಂತ್ಯಗೊಂಡಿದೆ. ಧೋನಿ ಅವರು ಈ ಹಿಂದಿನ 9 ಐಪಿಎಲ್‌ ಆವೃತ್ತಿಗಳಲ್ಲಿ ನಾಯಕತ್ವ ವಹಿಸಿದ ಏಕೈಕ ನಾಯಕನೆಂಬ ಹೆಗ್ಗಳಿಕೆ ಗಳಿಸಿದ್ದರು.

Advertisement

ಈ ವರ್ಷದ ಆರಂಭದಲ್ಲಿ ಏಕದಿನ ತಂಡದ ನಾಯಕತ್ವದಿಂದ ಹಿಂದೆ ಸರಿದಿದ್ದ ಧೋನಿ ಅವರು ಆಟಗಾರರಾಗಿ ಪುಣೆ ಫ್ರಾಂಚೈಸಿಯಲ್ಲಿ ಆಡುವುದನ್ನು ಮುಂದುವರಿಸಲಿದ್ದಾರೆ.

ಧೋನಿ ಅವರು ಕೆಳಗಿಳಿಯಲಿಲ್ಲ. ನಾವು ಮುಂಬರುವ ಋತುವಿಗೆ ಸ್ಟೀವನ್‌ ಸ್ಮಿತ್‌ ಅವರನ್ನು ನಾಯಕರಾಗಿ ನೇಮಕ ಮಾಡಿದ್ದೇವೆ. ನಿಜವಾಗಿ ಹೇಳಬೇಕೆಂದರೆ ಕಳೆದ ಋತುವಿನಲ್ಲಿ ನಮ್ಮ ನಿರ್ವಹಣೆ ಉತ್ತಮವಾಗಿರಲಿಲ್ಲ ಮತ್ತುಯುವ ಆಟಗಾರನೋರ್ವ ತಂಡವನವ್ನು ಮುನ್ನಡೆಸುವುದನ್ನು ನಾವು ಬಯಸಿದ್ದೇವೆ. ಹಾಗಾಗಿ ಮುಂಬರುವ ಋತುವಿನ ಮೊದಲು ಈ ಬದಲಾವಣೆ ಮಾಡಲಾಗಿದೆ ಎಂದು ಪುಣೆ ಫ್ರಾಂಚೈಸಿಯ ಮಾಲಕ ಸಂಜೀವ್‌ ಗೋಯೆಂಕಾ ತಿಳಿಸಿದ್ದಾರೆ.

ನಾಯಕನಾಗಿ ಮತ್ತು ವ್ಯಕ್ತಿಯಾಗಿ ಧೋನಿ ಅವರ ಮೇಲೆ ನನಗೆ ಅಪಾರ ಗೌರವವಿದೆ. ಅವರು ನಮ್ಮ ತಂಡದ ಅವಿಭಾಜ್ಯ ಸದಸ್ಯರಾಗಿ ಮುಂದುವರಿಯಲಿದ್ದಾರೆ. ಫ್ರಾಂಚೈಸಿಯ ಬೆಳವಣಿಗೆಗೆ ಅವರ ಸಲಹೆ ಸೂಚನೆಗಳನ್ನು ಇನ್ನು ಮುಂದೆಯೂ ಪಡೆಯಲಿದ್ದೇವೆ ಎಂದು ಗೋಯೆಂಕಾ ಹೇಳಿದರು.

2008ರಲ್ಲಿ ಐಪಿಎಲ್‌ ಆರಂಭವಾದ ಬಳಿಕ ಧೋನಿ ಅವರು ಈ ಕೂಟದ ಅತ್ಯಂತ ದುಬಾರಿ ಆಟಗಾರರಾಗಿ ಕಾಣಿಸಿಕೊಂಡಿದ್ದರು ಮತ್ತು ಭಾರೀ ಯಶಸ್ಸು ಸಾಧಿಸಿದ್ದರು. 2008ರಿಂದ 2015ರ ವರೆಗೆ ಧೋನಿ ಅವರು ಸದ್ಯ ಅಮಾನತುಗೊಂಡಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ಫ್ರಾಂಚೈಸಿಯ ನಾಯಕರಾಗಿದ್ದರು ಮತ್ತು 2010 ಮತ್ತು 2011ರಲ್ಲಿ ಸತತ ಎರಡು ಬಾರಿ ಪ್ರಶಸ್ತಿ ಗೆಲ್ಲಲು ನೆರವಾಗಿದ್ದರು. ಇಷ್ಟು ಮಾತ್ರವಲ್ಲದೇ ಚೆನ್ನೈ ತಂಡ 2010 ಮತ್ತು 2014ರಲ್ಲಿ ಚಾಂಪಿಯನ್ಸ್‌ ಲೀಗ್‌ ಟ್ವೆಂಟಿ-20 ಟ್ರೋಫಿ ಗೆಲ್ಲಲು ನೆರವಾಗಿದ್ದರು. 

Advertisement

ಚೆನ್ನೈ ಮತ್ತು ರಾಜಸ್ಥಾನ್‌ ರಾಯಲ್ಸ್‌ ತಂಡಗಳನ್ನು ಎರಡು ವರ್ಷಗಳ ಅವಧಿಗೆ ಅಮಾನತುಗೊಳಿಸಿದ ಬಳಿಕ 2015ರ ಡಿಸೆಂಬರ್‌ನಲ್ಲಿ ಅವರನ್ನು ಪುಣೆ ತಂಡಕ್ಕೆ ಮೊದಲಾಗಿ ಆಯ್ಕೆ ಮಾಡಲಾಗಿತ್ತು. ಇದೀಗ ಧೋನಿ ಬದಲು 27ರ ಹರೆಯದ ಸ್ಮಿತ್‌ ಪುಣೆ ತಂಡವನ್ನು ಮುನ್ನಡೆಸಲಿದ್ದಾರೆ. ಸ್ಮಿತ್‌ ಆಸ್ಟ್ರೇಲಿಯ ತಂಡದ ನಾಯಕರಾಗಿದ್ದಾರೆ.

ಧೋನಿ ಕೆಳಗಿಳಿಸಲು ಹಲವು ಕಾರಣಗಳು!
ಧೋನಿಯನ್ನು ನಾಯಕ ಸ್ಥಾನದಿಂದ ಕೆಳಗಿಳಿಸುವುದಕ್ಕೆ ಹಲವು ಕಾರಣಗಳಿವೆ. ಕಳೆದ ಬಾರಿ ತಂಡ ಪ್ರದರ್ಶನ ಉತ್ತಮ ನೀಡುವಲ್ಲಿ ವಿಫ‌ಲವಾಗಿದ್ದರೂ ಅದಕ್ಕಿಂತ ಮಹತ್ವದ ಕೆಲವು ಕಾರಣಗಳಿವೆ. 

ಕಳೆದ ಬಾರಿ ಪುಣೆ ತಂಡದಲ್ಲಿ ಖ್ಯಾತ ಸ್ಪಿನ್ನರ್‌ ರವಿಚಂದ್ರನ್‌ ಅಶ್ವಿ‌ನ್‌ ಆಡಿದ್ದರು. ಆದರೆ ಇಡೀ ಕೂಟದಲ್ಲಿ ಧೋನಿ ಅವರಿಗೆ ಅತಿ ಕಡಿಮೆ ಓವರ್‌ಗಳ ಬೌಲಿಂಗ್‌ ಮಾತ್ರ ನೀಡಿದ್ದರು. ಅವರ ಬದಲು ಹೊಸ ಬೌಲರ್‌ ಮುರುಗನ್‌ ಅಶ್ವಿ‌ನ್‌ಗೆ ಬೇಕಾದಷ್ಟು ಓವರ್‌ಗಳನ್ನು ನೀಡಿದ್ದರು. ಇದು ಅಶ್ವಿ‌ನ್‌ ಅಸಮಾ ಧಾನಕ್ಕೆ ಕಾರಣವಾಗಿತ್ತು. ಹಾಗೆಯೇ ಅಭಿ ಮಾನಿಗಳಿಗೂ ಧೋನಿಯ ಈ ನಡೆ ಅಚ್ಚರಿ ಮೂಡಿಸಿತ್ತು. 2016ರ ಟಿ20 ವಿಶ್ವಕಪ್‌ನಲ್ಲಿ ಈ ಇಬ್ಬರ ನಡುವೆ ಉಂಟಾದ ಮನಸ್ತಾಪಕ್ಕೆ ಧೋನಿ ಸೇಡು ತೀರಿಸಿಕೊಂಡಿದ್ದಾರೆ ಎಂದು ವಿಶ್ಲೇಷಿಸಲಾಗಿತ್ತು. ಇಂತಹ ಹಲವು ಕಾರಣಗಳೂ ಧೋನಿಯನ್ನು ಕೆಳಗಿಳಿಸಲು ಕಾರಣವಾಗಿದೆ ಎಂದು ಊಹಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next