ಕಾಸರಗೋಡು(ಕೇರಳ): ಭಾರತದಲ್ಲಿರುವ ಎಲ್ಲಾ ಪರಮಾಣು ಶಸ್ತ್ರಾಸ್ತ್ರಗಳನ್ನು ನಿಷ್ಕ್ರಿಯ(ನಾಶ)ಗೊಳಿಸುವುದಾಗಿ ಸಿಪಿಐ(ಎಂ) ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದು, ಇದರ ಹಿಂದಿನ ಉದ್ದೇಶ ಏನು ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರಶ್ನಿಸಿದ್ದು, ಈ ವಿಚಾರದಲ್ಲಿ ಕಾಂಗ್ರೆಸ್ ನಿಲುವು ಏನು ಎಂಬುದನ್ನು ಸ್ಪಷ್ಟಪಡಿಸಲಿ ಎಂದು ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ:Jr NTR: ಶೂಟಿಂಗ್ ಹಂತದಲ್ಲೇ 400 ಕೋಟಿ ರೂ. ಪ್ರೀ ಬ್ಯುಸಿನೆಸ್ ಮಾಡಿದ ʼದೇವರ ಪಾರ್ಟ್ -1ʼ?
ಭಾರತದ ಪರಮಾಣು ಶಸ್ತ್ರಾಸ್ತ್ರಗಳನ್ನು ನಾಶ ಮಾಡುವುದಾಗಿ ಹೇಳುವ ಸಿಪಿಐಎಂ ರಾಷ್ಟ್ರೀಯ ಭದ್ರತೆಯ ಜೊತೆ ಆಟವಾಡುತ್ತಿದೆ ಎಂದು ಸಿಂಗ್ ಆರೋಪಿಸಿದರು. ಇದೊಂದು ದೇಶವನ್ನು ದುರ್ಬಲಗೊಳಿಸುವ ಬಲವಾದ ಸಂಚು ಇದಾಗಿದೆ ಎಂದು ಹೇಳಿದರು.
ಕಾಸರಗೋಡಿನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಜನಾಥ್ ಸಿಂಗ್, ಪರಮಾಣು ಶಸ್ತ್ರಾಸ್ತ್ರಗಳನ್ನು ಸಂಪೂರ್ಣವಾಗಿ ನಿಷ್ಕ್ರಿಯಗೊಳಿಸುತ್ತೇವೆ ಎಂಬ ಸಿಪಿಐಎಂನ ಪ್ರಣಾಳಿಕೆಯಲ್ಲಿನ ಭರವಸೆಯ ಬಗ್ಗೆ ಕಾಂಗ್ರೆಸ್ ಪಕ್ಷ ನಿಲುವನ್ನು ಸ್ಪಷ್ಟಪಡಿಸಬೇಕು. ದೇಶದಲ್ಲಿ ಪರಮಾಣು ಶಕ್ತಿಗೆ ಚಾಲನೆ ನೀಡಿದ್ದು, ಇಂದಿರಾ ಗಾಂಧಿ ನೇತೃತ್ವದ ಸರ್ಕಾರ ಎಂದು ರಾಜನಾಥ್ ಸಿಂಗ್ ತಿಳಿಸಿದರು.
ಜಗತ್ತಿನ 11 ಪರಮಾಣು ಶಕ್ತಿ ಹೊಂದಿರುವ ದೇಶಗಳಲ್ಲಿ ಒಂದು ಎಂದು ಗುರುತಿಸಿಕೊಳ್ಳಲು ಭಾರತ ಸಾಕಷ್ಟು ಶ್ರಮವಹಿಸಿತ್ತು. ಪರಮಾಣು ಶಸ್ತ್ರಾಸ್ತ್ರಗಳನ್ನು ನಾಶಗೊಳಿಸುವುದು ದೇಶವನ್ನು ದುರ್ಬಲಗೊಳಿಸುವ ಸಂಚಾಗಿದೆ ಎಂದು ಸಿಂಗ್ ದೂರಿದರು.