Advertisement

ಪುಂಜಾಲಕಟ್ಟೆ: ಶಂಕಿತ ರೇಬಿಸ್ ಗೆ ಯುವಕ ಮೃತ್ಯು

06:12 PM Apr 03, 2023 | Team Udayavani |

ಪುಂಜಾಲಕಟ್ಟೆ: ಶಂಕಿತ ರೇಬಿಸ್‌ಗೆ ಯುವಕನೋರ್ವ ಬಲಿಯಾದ ಘಟನೆ ಬಂಟ್ವಾಳ ತಾಲೂಕಿನ ಪಿಲಾತಬೆಟ್ಟು ಗ್ರಾಮದ ಪುಂಜಾಲಕಟ್ಟೆಯಲ್ಲಿ ಸೋಮವಾರ ಸಂಭವಿಸಿದೆ .

Advertisement

ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿಯ ನಿವಾಸಿ ಅಶೋಕ ಹೆಗ್ಡೆ ಅವರ ಪುತ್ರ ಪ್ರಶಾಂತ ಹೆಗ್ಡೆ(31)ಅವರು ಮೃತ ಪಟ್ಟ ದುರ್ದೈವಿಯಾಗಿದ್ದಾರೆ.

ಕಳೆದ ಮೂರು ತಿಂಗಳ ಹಿಂದೆ ಪ್ರಶಾಂತ್ ಅವರಿಗೆ ಅವರ ಮನೆಯ ನಾಯಿಮರಿ ಕಡಿದಿದ್ದು, ಬಳಿಕ ನಾಯಿ ಮೃತ ಪಟ್ಟಿತ್ತು. ಆದರೆ ಪ್ರಶಾಂತ್ ಅವರು ನಾಯಿ ಕಡಿದಿರುವುಕ್ಕೆ ಸೂಕ್ತ ಚಿಕಿತ್ಸೆ ಪಡೆದಿರಲಿಲ್ಲ ಎನ್ನಲಾಗಿದೆ. ಕಳೆದೆರಡು ದಿನಗಳಿಂದ ಅವರು ತೀವ್ರ ಸಂಕಟ, ಜ್ವರದಿಂದ ಒದ್ದಾಡಿದ್ದು, ಪುಂಜಾಲಕಟ್ಟೆ ಪ್ರಾ. ಆ.ಕೇಂದ್ರದಲ್ಲಿ ಚಿಕಿತ್ಸೆಗಾಗಿ ತೆರಳಿದ್ದಾರೆ. ಜ್ವರ ತಪಾಸಣೆ ನಡೆಸಿದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್‌ಲಾಕ್ ಸರಕಾರಿ ಆಸ್ಪತ್ರೆಗೆ ಕಳುಹಿಸಿದ್ದರು. ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಪ್ರಶಾಂತ್ ಮೃತಪಟ್ಟಿದ್ದಾರೆ.

ಪ್ರಶಾಂತ್ ಅವರ ಕ್ಲಿನಿಕಲ್ ಪರೀಕ್ಷೆ ವರದಿಗಳು ರೇಬಿಸ್ ಲಕ್ಷಣ ಹೊಂದಿದ್ದವು. ಆದರೆ ಅವರು ಯಾವ ಕಾರಣದಿಂದ ಮೃತರಾಗಿದ್ದಾರೆಂದು ನಿಖರವಾಗಿ ತಿಳಿದು ಬಂದಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಿಶೋರ್ ಅವರು ತಿಳಿಸಿದ್ದಾರೆ. ಇಂಥ ಸಂದರ್ಭದಲ್ಲಿ ಹೆಚ್ಚಿನ ನಿಗಾ ವಹಿಸುವುದು, ತಕ್ಷಣ ಚಿಕಿತ್ಸೆ ಕೊಡಿಸುವುದು ಅಗತ್ಯ ಎಂದು ಅವರು ತಿಳಿಸಿದ್ದಾರೆ. ನಾಯಿ ಕಡಿದ ಬಳಿಕ ಶೀಘ್ರ ಚಿಕಿತ್ಸೆ ಪಡೆದಿದ್ದರೆ ಅವರು ಬದುಕುಳಿಯುತ್ತಿದ್ದರು. ಆದರೆ, ಅದಾಗಲೇ ರೇಬಿಸ್ ಲಕ್ಷಣಗಳು ಉಲ್ಬಣಗೊಂಡಿರಬಹುದು ಎಂದು ಅವರು ತಿಳಿಸಿದ್ದಾರೆ.

ಪ್ರಶಾಂತ್ ಅವರು ಇಬ್ಬರು ಪುತ್ರರಲ್ಲಿ ಹಿರಿಯವರಾಗಿದ್ದು, ಅವಿವಾಹಿತರಾಗಿದ್ದರು. ಜಿಯೋ ಸಂಸ್ಥೆಯಲ್ಲಿ ಒಪ್ಪಂದದ ಮೇರೆಗೆ ಉದ್ಯೋಗಿಯಾಗಿದ್ದು, ಮನೆಗೆ ಆಧಾರವಾಗಿದ್ದರು. ಅವರು ಪುಂಜಾಲಕಟ್ಟೆ ಶ್ರೀ ರಾಮ ಭಜನ ಮಂದಿರದಲ್ಲಿ ಪೂಜಾ ಕಾರ್ಯಗಳಿಗೆ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಬಿಜೆಪಿ ಪಕ್ಷದ ಪಿಲಾತಬೆಟ್ಟು ಬೂತ್ ಅಧ್ಯಕ್ಷರಾಗಿದ್ದರು. ಸ್ಥಳೀಯವಾಗಿ ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದ ಅವರು ಹವ್ಯಾಸಿ ನಾಟಕ ಕಲಾವಿದರಾಗಿದ್ದರು.

Advertisement

ಇದನ್ನೂ ಓದಿ: ವಿಮಾನ ಕೆಳಗೆ ಬೀಳುತ್ತದೆ ಎಂದು ಟ್ವೀಟ್ : ಪಿಯುಸಿ ವಿದ್ಯಾರ್ಥಿ ಅರೆಸ್ಟ್ !

Advertisement

Udayavani is now on Telegram. Click here to join our channel and stay updated with the latest news.

Next