Advertisement

Siddapura; ವಾರಾಹಿಯಲ್ಲಿ ಪಂಪ್ಡ್ ಸ್ಟೋರೇಜ್‌ ಪ್ಲಾಂಟ್‌: ಸಚಿವ ಕೆ.ಜೆ. ಜಾರ್ಜ್‌

11:32 PM Feb 04, 2024 | Team Udayavani |

ಸಿದ್ದಾಪುರ: ರಾಜ್ಯ ಇಂಧನ ಸಚಿವಾಲಯವು ತೆಹ್ರಿ ಹೈಡ್ರೊ ಡೆವಲಪ್‌ಮೆಂಟ್‌ ಕಾರ್ಪೊರೇಷನ್‌ನೊಂದಿಗೆ (THDCL) ವಿವಿಧ ವಿದ್ಯುತ್‌ ಯೋಜನೆಗಳ ಒಪ್ಪಂದ ಮಾಡಿಕೊಂಡಿದ್ದು, ಅದರಲ್ಲಿ ವಾರಾಹಿ ಪಂಪ್ಡ್ ಸ್ಟೋರೇಜ್‌ ಪ್ಲಾಂಟ್‌ ಕೂಡ ಸೇರಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್‌ ತಿಳಿಸಿದರು.

Advertisement

ಅವರು ರವಿವಾರ ಹೊಸಂಗಡಿ ಗ್ರಾಮದ ವಾರಾಹಿ ಪವರ್‌ ಹೌಸ್‌ಗೆ ಭೇಟಿ ನೀಡಿ ಅಧಿಕಾರಿಗಳ ಸಭೆ ನಡೆಸಿದರು. ಅನಂತರ ಹೊಸದಾಗಿ ನಿರ್ಮಾಣಗೊಳ್ಳಲಿರುವ ವಾರಾಹಿ ಪಂಪ್ಡ್ ಸ್ಟೋರೇಜ್‌ ಪ್ಲಾಂಟ್‌ನ ಯೋಜನೆಯ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ವಾರಾಹಿಯಲ್ಲಿ ಹೊಸದಾಗಿ ಅಣೆಕಟ್ಟು ನಿರ್ಮಿಸಿ ವಿದ್ಯುತ್‌ ಉತ್ಪಾದಿಸುವುದು ಹಾಗೂ ಬಳಿಕ ಹೊರ ಹೋಗುವ ನೀರನ್ನು ಮೇಲೆತ್ತಿ ವಿದ್ಯುತ್‌ ಉತ್ಪಾದನೆಗೆ ಬಳಸಿಕೊಳ್ಳುವ ಯೋಜನೆ ಇದಾಗಿದೆ. ಈ ಯೋಜನೆಯಿಂದ ವಾರಾಹಿ ಮೂಲ ಯೋಜನೆಗೆ ಮತ್ತು ನದಿಯಲ್ಲಿ ನೀರಿನ ಹರಿವಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ. ಇಲ್ಲಿ ನೀರಿನ ಮರುಬಳಕೆ ಆಗುತ್ತದೆ ಎಂದರು.

ಅಧಿಕಾರ ವಹಿಸಿಕೊಂಡ ಮೇಲೆ ಪ್ರತೀ ಜಿಲ್ಲೆಗೆ ಭೇಟಿ ನೀಡಿ, ಅಧಿಕಾರಿಗಳ ಸಭೆ ಮಾಡುತ್ತಿದ್ದೇನೆ. ಅಂತೆಯೇ ಇಲ್ಲಿಗೂ ಭೇಟಿ ನೀಡಿ ವಾರಾಹಿ ಪಂಪ್ಡ್ ಸ್ಟೋರೇಜ್‌ ಪ್ಲಾಂಟ್‌ನ ಸಾಧಕ ಬಾಧಕಗಳನ್ನು ತಿಳಿದುಕೊಂಡಿದ್ದೇನೆ. ವಾರಾಹಿಯಲ್ಲಿ 460 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆಯಾಗುತ್ತಿದೆ. ಈ ಯೋಜನೆಯಿಂದ ಹೊರಹೋಗುವ 0.31 ಟಿಎಂಸಿ ನೀರನ್ನು ಬಳಸಿಕೊಂಡು ವಾರಾಹಿ ಪಂಪ್ಡ್ ಸ್ಟೋರೇಜ್‌ ಪ್ಲಾಂಟ್‌ ಯೋಜನೆ ರೂಪಿಸುತ್ತಿದ್ದೇವೆ.ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುವುದಿಲ್ಲ ಎಂದರು.

ಅಧಿಕಾರಿಗಳ ಸಭೆ
ಅಧಿಕಾರಿಗಳ ಸಭೆಯಲ್ಲಿ ಮಾಣಿ ಅಣೆಕಟ್ಟಿನಲ್ಲಿರುವ ನೀರಿನ ಶೇಖರಣೆ, ಕೆಪಿಸಿಯಲ್ಲಿ ವಿದ್ಯುತ್‌ ಉತ್ಪಾದನೆ, ಅನಂತರ ಹೊರಗೆ ಹರಿಯುವ ನೀರಿನ ಪ್ರಮಾಣ, ಹೊಸದಾಗಿ ನಿರ್ಮಿಸಲಿರುವ ವಾರಾಹಿ ಪಂಪ್ಡ್ ಸ್ಟೋರೇಜ್‌ ಪ್ಲಾಂಟ್‌ನ ಸಾಧಕ ಬಾಧಕಗಳ ಕುರಿತು ಚರ್ಚಿಸಿದರು.

Advertisement

ಭರವಸೆಗಳು
ಜಲಜೀವನ ಮಿಷನ್‌ ಯೋಜನೆಗೆ ವಾರಾಹಿ ನೀರು ಬಳಕೆಯಾಗುತ್ತದೆ. ಆದರೆ ನದಿಯಲ್ಲಿ ಎಲ್ಲಿಂದ ನೀರನ್ನು ತೆಗೆಯುವ ಸ್ಥಳದ ಬಗ್ಗೆ ಇನ್ನೂ ಸೂಚನೆ ಬಂದಿಲ್ಲ. ಕೂಡಲೇ ಸೂಚಿಸುವಂತೆ ಸಚಿವರಿಗೆ ಬೈಂದೂರು ಕ್ಷೇತ್ರದ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಮತ್ತು ವಂಡ್ಸೆ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕೆ. ಪ್ರದೀಪ ಕುಮಾರ ಶೆಟ್ಟಿ ಗುಡಿಬೆಟ್ಟು ಮನವಿ ಮಾಡಿದರು. ಸಚಿವರು ಪ್ರತಿಕ್ರಿಯಿಸಿ, ಆರ್‌ಡಿಪಿ, ನೀರಾವರಿ ಇಲಾಖೆ ಮತ್ತು ಅಧಿಕಾರಿಗಳ ಸಭೆ ಕರೆದು ಸಮಸ್ಯೆಗಳ ಬಗ್ಗೆ ತಿಳಿದುಕೊಂಡು ಕೂಡಲೇ ಶಿಫರಾಸು ಮಾಡುವುದಾಗಿ ತಿಳಿಸಿದರು.

ಕರ್ನಾಟಕ ಇಂಧನ ಸಚಿವಾಲಯವು ತೆಹ್ರಿ ಹೈಡ್ರೊ ಡೆವಲಪ್‌ಮೆಂಟ್‌ ಕಾರ್ಪೊರೇಷನ್‌ ನಿರ್ದೇಶಕ (ತಾಂತ್ರಿಕ) ಭೂಪೇಂದರ್‌ ಗುಪ್ತಾ ಮತ್ತು ರಾಜ್ಯ ಸರಕಾರದ ಇಂಧನ ಸಚಿವಾಲಯದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್‌ ಗುಪ್ತಾ ಅವರು ಒಪ್ಪಂದಕ್ಕೆ ಸಹಿ ಹಾಕಿದರು.

ವಾರಾಹಿ ಕೆಪಿಸಿ ಮುಖ್ಯ ಅಭಿಯಂತರಾದ ಉದಯ ನಾಯಕ್‌ (ವಿದ್ಯುತ್‌), ಮೋಹನ್‌ (ಕಾಮಗಾರಿ), ಅಧೀಕ್ಷಕ ಅಭಿಯಂತರಾದ ಮಹೇಶ್‌ ಬಿ.ಸಿ. (ವಿದ್ಯುತ್‌), ಪ್ರಕಾಶ್‌ (ಕಾಮಗಾರಿ), ಕಾರ್ಯನಿರ್ವಾಹಕ ಅಭಿಯಂತ ಹರೀಶ್‌ ಕೆ., ರವಿಪ್ರಕಾಶ್‌, ಕೆಪಿಟಿಸಿಎಲ್‌ ಎಂಡಿ ಪಂಕಜ್‌ ಪಾಂಡೆ, ಎಸ್‌ಇಇ ರವಿಕಾಂತ್‌ ಕಾಮತ್‌, ಎಇಇ ಪ್ರಶಾಂತ್‌, ಮೆಸ್ಕಾಂ ಕುಂದಾಪುರ ಇಇ ಗುರುಪ್ರಸಾದ್‌ ಭಟ್‌, ಶಂಕರನಾರಾಯಣ ಎಇಇ ಪ್ರವೀಣ್‌ ಆಚಾರ್‌, ಮೆಸ್ಕಾಂ ಮಾಜಿ ನಿರ್ದೇಶಕ ಸಂಪಿಗೇಡಿ ಸಂಜೀವ ಶೆಟ್ಟಿ, ಉಡುಪಿ ಜಿಲ್ಲಾ ಅಲ್ಪಸಂಖ್ಯಾಕ ಘಟಕದ ಉಪಾಧ್ಯಕ್ಷ ಮಹಮ್ಮದ್‌ ಹನೀಫ್‌, ಜಿ.ಪಿ. ಮಹಮ್ಮದ್‌, ಸ್ಥಳೀಯ ಮುಖಂಡರಾದ ತೊಂಬಟ್ಟು ಶ್ರೀನಿವಾಸ ಪೂಜಾರಿ, ಹರ್ಷ ಶೆಟ್ಟಿ ತೊಂಬಟ್ಟು, ಸಂತೋಷ್‌ ಶೆಟ್ಟಿ ಹೊಸಂಗಡಿ, ಮಂಜುನಾಥ ಕುಲಾಲ ಜನ್ಸಾಲೆ, ಸತೀಶಕುಮಾರ ಶೆಟ್ಟಿ ಕಡ್ರಿ ಉಪಸ್ಥಿತರಿದ್ದರು.

ಒಪ್ಪಂದಗಳು
ಕರ್ನಾಟಕ ಇಂಧನ ಸಚಿವಾಲಯವು ತೆಹ್ರಿ ಹೈಡ್ರೊ ಡೆವಲಪ್‌ಮೆಂಟ್‌ ಕಾರ್ಪೊರೇಷನ್‌ನೊಂದಿಗೆ ಮಾಡಿಕೊಂಡಿರುವ‌ ವಿದ್ಯುತ್‌ ಯೋಜನೆಗಳು: ಹೈಡ್ರೋ, ಸೋಲಾರ್‌ ಮತ್ತು ಪಂಪ್ಡ್ ಸ್ಟೋರೇಜ್‌ ಪ್ರಾಜೆಕ್ಟ್ಗಳಿಗೆ 15,000 ಕೋಟಿ ರೂ. ಮೌಲ್ಯದ ಒಪ್ಪಂದಕ್ಕೆ ಸಹಿ ಹಾಕಿದೆ.

ಕದ್ರಾ ಅಣೆಕಟ್ಟಿನ ಜಲಾಶಯದ ಮೈದಾನದಲ್ಲಿ ಸೋಲಾರ್‌ ಪಿವಿ ಸ್ಥಾವರ ಸ್ಥಾಪಿಸುವುದು, ವಾರಾಹಿಯಲ್ಲಿ ಪಂಪ್ಡ್ ಸ್ಟೋರೇಜ್‌ ಪ್ಲಾಂಟ್‌ ಮತ್ತು ಕೆಪಿಸಿಎಲ್‌ ಪ್ಲಾಂಟ್‌ಗಳ ಆವರಣದಲ್ಲಿ ಮೇಲ್ಛಾವಣಿಯ ಸೋಲಾರ್‌ ಪಿವಿ ಪ್ಲಾಂಟ್‌ ಸ್ಥಾಪಿಸುವ ಬಗ್ಗೆ ಒಪ್ಪಂದವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next