Advertisement

ಪುಲ್ವಾಮಾ ಎನ್‌ಕೌಂಟರ್‌: 11 ಸಾವು

06:00 AM Dec 16, 2018 | Team Udayavani |

ಶ್ರೀನಗರ: ದಕ್ಷಿಣ ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಮಹತ್ವದ ಎನ್‌ಕೌಂಟರ್‌ವೊಂದರಲ್ಲಿ ಮೂವರು ಉಗ್ರರನ್ನು ಭದ್ರತಾ ಪಡೆ ಶನಿವಾರ ಹತ್ಯೆಗೈದಿದೆ. ಆದರೆ, ಎನ್‌ಕೌಂಟರ್‌ನ ಸ್ಥಳದಲ್ಲಿ ಜಮಾಯಿಸಿದ ಸ್ಥಳೀಯರು ಭದ್ರತಾ ಪಡೆಯೊಂದಿಗೆ ಘರ್ಷಣೆಗಿಳಿದಿದ್ದು, ಈ ವೇಳೆ ನಡೆದ ಗೋಲಿಬಾರ್‌ಗೆ 7 ಮಂದಿ ನಾಗರಿಕರು ಬಲಿಯಾಗಿದ್ದಾರೆ. ಕಾರ್ಯಾಚರಣೆ ವೇಳೆ ಯೋಧರೊಬ್ಬರು ಹುತಾತ್ಮರಾಗಿದ್ದಾರೆ. ಒಟ್ಟಾರೆ, ಶನಿವಾರದ ಬೆಳವಣಿಗೆಯಲ್ಲಿ 11 ಮಂದಿ ಪ್ರಾಣ ಕಳೆದುಕೊಂಡಿದ್ದು, ಇದು ಭಾರೀ ಚರ್ಚೆಗೆ ಗ್ರಾಸವಾಗಿದೆ.

Advertisement

ನಾಗರಿಕರ ಮೇಲೆ ಗುಂಡಿನ ದಾಳಿ ಆಗಿರುವುದರ ಕುರಿತು ವಿವಿಧ ರಾಜಕೀಯ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ. ರಾಜ್ಯಪಾಲ ಸತ್ಯಪಾಲ್‌ ಮಲಿಕ್‌ ನೇತೃತ್ವದ ಆಡಳಿತವು ಜನರ ಜೀವ ಉಳಿಸುವಲ್ಲಿ ವೈಫ‌ಲ್ಯವಾಗಿದೆ ಎಂದು ಆರೋಪಿಸಿವೆ. ಮತ್ತೂಂದೆಡೆ, ಹತ್ಯೆ ಖಂಡಿಸಿ ಕಾಶ್ಮೀರದ ಪ್ರತ್ಯೇಕತಾವಾದಿಗಳು 3 ದಿನಗಳ ಕಾಲ ಪ್ರತಿಭಟನೆಗೆ ಕರೆ ನೀಡಿದ್ದಾರೆ. ಹೀಗಾಗಿ, ಕಣಿವೆ ರಾಜ್ಯದಲ್ಲಿ ಆತಂಕದ ಸ್ಥಿತಿ ನಿರ್ಮಾಣವಾಗಿದ್ದು, ಶ್ರೀನಗರ ಸೇರಿದಂತೆ ಹಲವು ಭಾಗಗಳಲ್ಲಿ ಮೊಬೈಲ್‌ ಇಂಟರ್ನೆಟ್‌ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.

ಆಗಿದ್ದೇನು: ಪುಲ್ವಾಮಾ ಜಿಲ್ಲೆಯ ಸಿರ್ನೂ ಎಂಬ ಗ್ರಾಮದಲ್ಲಿ ಮೂವರು ಉಗ್ರರು ಅವಿತಿದ್ದಾರೆ ಎಂದು ಗುಪ್ತಚರ ಮೂಲಗಳು ಮಾಹಿತಿ ನೀಡಿದ್ದವು. ಇದರ ಆಧಾರದಲ್ಲಿ ಭದ್ರತಾ ಪಡೆಯು ಶೋಧ ಕಾರ್ಯ ಆರಂಭಿಸಿತ್ತು. ಕಳೆದ ವರ್ಷದ ಜುಲೈನಲ್ಲಿ ಬಾರಾಮುಲ್ಲಾ ಜಿಲ್ಲೆಯ ಸೇನಾ ಘಟಕದಿಂದ ನಾಪತ್ತೆಯಾಗಿ, ನಂತರ ಉಗ್ರ ಸಂಘಟನೆಗೆ ಸೇರ್ಪಡೆಯಾಗಿದ್ದ ಮಾಜಿ ಯೋಧ ಝಹೂರ್‌ ಥೋಕರ್‌ ಕೂಡ ಈ ಮೂವರು ಉಗ್ರರ ಪೈಕಿ ಒಬ್ಬನಾಗಿದ್ದ. ಭದ್ರತಾ ಪಡೆ ಮತ್ತು ಉಗ್ರರ ನಡುವೆ ಸುಮಾರು 25 ನಿಮಿಷಗಳ ಕಾಲ ಗುಂಡಿನ ಚಕಮಕಿ ನಡೆದು, ಕೊನೆಗೆ ಥೋಕರ್‌ ಸೇರಿದಂತೆ ಮೂವರು ಉಗ್ರರನ್ನೂ ಹೊಡೆದುರುಳಿಸುವಲ್ಲಿ ಭದ್ರತಾ ಪಡೆ ಯಶಸ್ವಿಯಾಯಿತು. 

ಆದರೆ, ಎನ್‌ಕೌಂಟರ್‌ ಇನ್ನೇನು ಮುಗಿಯುತ್ತದೆ ಎನ್ನುವಷ್ಟರಲ್ಲಿ ಅಲ್ಲಿಗೆ ಧಾವಿಸಿದ ಜನರು, ಏಕಾಏಕಿ ಸೇನಾ ವಾಹನಗಳ ಮೇಲೆ ಹತ್ತಿ ದಾಂದಲೆ ಉಂಟುಮಾಡಿದರು. ಇದರಿಂದ ಯೋಧರು ತೀವ್ರ ಗೊಂದಲಕ್ಕೆ ಒಳಗಾದರು. ಕೂಡಲೇ ಎನ್‌ಕೌಂಟರ್‌ ಸ್ಥಳ ಬಿಟ್ಟು ತೆರಳುವಂತೆ ಅಲ್ಲಿದ್ದ ನಾಗರಿಕರಿಗೆ ಎಚ್ಚರಿಕೆ ನೀಡಿದರು. ಆದರೂ, ಬಗ್ಗದ ಪ್ರತಿಭಟನಾಕಾರರು ಘರ್ಷಣೆಗಿಳಿದರು. ಈ ವೇಳೆ, ಭದ್ರತಾ ಪಡೆ ಸಿಬ್ಬಂದಿಯು ಸ್ಥಳೀಯರನ್ನು ಚದುರಿಸಲೆಂದು ಗೋಲಿಬಾರ್‌ ನಡೆಸಿದ್ದು, ಗುಂಡಿನ ದಾಳಿಗೆ 7 ಮಂದಿ ನಾಗರಿಕರು ಸ್ಥಳದಲ್ಲೇ ಅಸುನೀಗಿದರು. 12ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಒಬ್ಬನ ಸ್ಥಿತಿ ಚಿಂತಾಜನಕವಾಗಿದೆ ಎಂದು ಮೂಲಗಳು ತಿಳಿಸಿವೆ.

ಯೋಧ ಹುತಾತ್ಮ:
ಕಾರ್ಯಾಚರಣೆ ವೇಳೆ ಯೋಧರೊಬ್ಬರು ಹುತಾತ್ಮರಾಗಿದ್ದು, ಗಾಯಗೊಂಡಿರುವ ಇಬ್ಬರು ಸೈನಿಕರ ಸ್ಥಿತಿ ಗಂಭೀರವಾಗಿದೆ ಎಂದು ಸೇನಾ ಮೂಲಗಳು ಹೇಳಿವೆ. 

Advertisement

ಕಳೆದ 6 ತಿಂಗಳಿಂದಲೂ ದಕ್ಷಿಣ ಕಾಶ್ಮೀರವು ಆತಂಕದಲ್ಲೇ ದಿನ ದೂಡುತ್ತಿದೆ. ರಾಜ್ಯಪಾಲರ ಆಡಳಿತದಿಂದ ನಾವು ನಿರೀಕ್ಷಿಸಿದ್ದು ಇದನ್ನೇನಾ? ಇನ್ನು ಏನೇ ತನಿಖೆ ನಡೆಸಿದರೂ ಮೃತಪಟ್ಟಿರುವ ಅಮಾಯಕರ ಜೀವವನ್ನು ಮರಳಿಸಲು ಸಾಧ್ಯವೇ? ತನ್ನದೇ ಜನರನ್ನು ಕೊಲ್ಲುವ ಮೂಲಕ ಯಾವುದೇ ದೇಶವು ಯುದ್ಧ ಗೆಲ್ಲಲು ಸಾಧ್ಯವಿಲ್ಲ.
– ಮೆಹಬೂಬಾ ಮುಫ್ತಿ, ಪಿಡಿಪಿ ಮುಖ್ಯಸ್ಥೆ, ಮಾಜಿ ಸಿಎಂ

ಕಾಶ್ಮೀರದಲ್ಲಿ ಮತ್ತೂಂದು ರಕ್ತಸಿಕ್ತ ವಾರಾಂತ್ಯ. ಅತ್ಯಂತ ಕೆಟ್ಟದಾಗಿ ನಡೆಸಲಾದ ಎನ್‌ಕೌಂಟರ್‌ ಇದು. ಎನ್‌ಕೌಂಟರ್‌ ಸ್ಥಳದಲ್ಲಿನ ಪ್ರತಿಭಟನಾಕಾರರನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ಯಾಕೆ ಯಾರೂ ಕಲಿಯುತ್ತಿಲ್ಲ? 
– ಒಮರ್‌ ಅಬ್ದುಲ್ಲಾ, ಮಾಜಿ ಸಿಎಂ

ಮೂವರು ಉಗ್ರರನ್ನು ಕೊಲ್ಲುವ ಸಲುವಾಗಿ ನೀವು 7 ನಾಗರಿಕರನ್ನು ಹತ್ಯೆಗೈಯ್ಯುತ್ತೀರಿ ಎಂದಾದರೆ, ನಾವು ನಿರ್ಭೀತಿಯ ರಾಜ್ಯವನ್ನು ನೋಡಲು ಸಾಧ್ಯವೇ ಇಲ್ಲ.
– ಸಜ್ಜದ್‌ ಲೋನ್‌, ಮಾಜಿ ಸಚಿವ

ಯಾರೀತ ಥೋಕರ್‌?
ಜಮ್ಮು-ಕಾಶ್ಮೀರದವನೇ ಆದ ಝಹೂರ್‌ ಥೋಕರ್‌ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ. ಬಾರಾಮುಲ್ಲಾ ಜಿಲ್ಲೆಯ ಸೇನಾ ಘಟಕದಲ್ಲಿ ನಿಯೋಜನೆಗೊಂಡಿದ್ದ. ಕಳೆದ ವರ್ಷದ ಜುಲೈನಲ್ಲಿ ಈತ ಏಕಾಏಕಿ ಘಟಕದಿಂದ ನಾಪತ್ತೆಯಾಗಿದ್ದ. ಅಷ್ಟೇ ಅಲ್ಲ, ತನ್ನೊಂದಿಗೆ ಸರ್ವೀಸ್‌ ರೈಫ‌ಲ್‌ ಮತ್ತು ಮೂರು ಮ್ಯಾಗಜಿನ್‌ಗಳನ್ನೂ ಹೊತ್ತೂಯ್ದಿದ್ದ. ನಂತರ ಥೋಕರ್‌ ಉಗ್ರ ಸಂಘಟನೆಗೆ ಸೇರ್ಪಡೆಗೊಂಡ ವಿಚಾರ ಬೆಳಕಿಗೆ ಬಂದಿತ್ತು. ಪುಲ್ವಾಮಾ ಜಿಲ್ಲೆಯಲ್ಲಿ ನಡೆದ ಹಲವು ವಿಧ್ವಂಸಕ ಕೃತ್ಯಗಳಲ್ಲೂ ಈತ ಭಾಗಿಯಾಗಿದ್ದ. ಶನಿವಾರದ ಎನ್‌ಕೌಂಟರ್‌ನಲ್ಲಿ ಥೋಕರ್‌ ಸೇರಿದಂತೆ ಮೂವರು ಉಗ್ರರನ್ನು ಸದೆಬಡಿಯಲಾಗಿದ್ದು, ಇಬ್ಬರು ಗುರುತು ಇನ್ನೂ ಬಹಿರಂಗವಾಗಿಲ್ಲ.

3 ದಿನಗಳ ಪ್ರತಿಭಟನೆ
ಸೈಯದ್‌ ಅಲಿ ಶಾ ಗಿಲಾನಿ, ಮಿರ್ವೇಜ್‌ ಉಮರ್‌ ಫಾರೂಕ್‌ ಮತ್ತು ಮೊಹಮ್ಮದ್‌ ಯಾಸೀನ್‌ ಮಲಿಕ್‌ ಮತ್ತಿತರ ಪ್ರತ್ಯೇಕತಾವಾದಿಗಳ ಒಕ್ಕೂಟವು (ಜಾಯಿಂಟ್‌ ರೆಸಿಸ್ಟೆನ್ಸ್‌ ಲೀಡರ್‌ಶಿಪ್‌) ಶನಿವಾರದ ಘಟನೆ ಖಂಡಿಸಿ 3 ದಿನಗಳ ಕಾಲ ಪ್ರತಿಭಟನೆಗೆ ಕರೆ ನೀಡಿದೆ. ಈ ಕುರಿತು ಟ್ವೀಟ್‌ ಮಾಡಿರುವ ಮಿರ್ವೇಜ್‌, ಭಾರತ ಸರ್ಕಾರವು ಸಶಸ್ತ್ರ ಪಡೆಗಳನ್ನು ಬಳಸಿ ಕಾಶ್ಮೀರಿಗರನ್ನು ಕೊಲ್ಲಲು ನಿರ್ಧರಿಸಿದೆ. ಸೋಮವಾರ ಕಣಿವೆ ರಾಜ್ಯದ ಜನರು ಬಾದಾಮಿ ಬಾಗ್‌ ಸೇನಾ ಕಂಟೋನ್ಮೆಂಟ್‌ಗೆ ಪ್ರತಿಭಟನಾ ಮೆರವಣಿಗೆ ನಡೆಸುತ್ತೇವೆ. ಪ್ರತಿ ದಿನ ನಮ್ಮನ್ನು ಕೊಲ್ಲುವ ಬದಲು, ಒಂದೇ ಬಾರಿಗೆ ನಮ್ಮೆಲ್ಲರನ್ನೂ ಸಾಯಿಸಿಬಿಡಿ ಎಂದು ಕೇಳಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next