Advertisement

ಮಕ್ಕಳಿಲ್ಲವೆಂದು ಮುಚ್ಚಿದ ಕಾರ್ಕಳದ ಪುಲ್ಕೇರಿ ಕಿರಿಯ ಪ್ರಾಥಮಿಕ ಶಾಲೆ

05:23 PM Jun 06, 2017 | Team Udayavani |

ಉಡುಪಿ: ಶೈಕ್ಷಣಿಕ ವರ್ಷ ಆರಂಭವಾಗಿದ್ದು, ಎಲ್ಲ ಕಡೆಗಳಲ್ಲಿ ಶಾಲಾ ಪ್ರಾರಂಭೋತ್ಸವ ಭರ್ಜರಿಯಾಗಿಯೇ ನಡೆಯುತ್ತಿದೆ. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಪುಲ್ಕೇರಿ ಕಿರಿಯ ಪ್ರಾಥಮಿಕ ಕನ್ನಡ ಮಾಧ್ಯಮ ಶಾಲೆಯು ವಿದ್ಯಾರ್ಥಿಗಳೇ ಇಲ್ಲ ಎನ್ನುವ ಕಾರಣಕ್ಕೆ ಮುಚ್ಚಿದ ಪ್ರಸಂಗ ನಡೆದಿದೆ. ಕಳೆದ ವರ್ಷ ಬ್ರಹ್ಮಾವರದಲ್ಲೊಂದು ಶಾಲೆಯನ್ನು ಶಾಶ್ವತವಾಗಿ ಮುಚ್ಚಲಾಗಿತ್ತು.

Advertisement

ಸುಶಿಕ್ಷಿತರ ಜಿಲ್ಲೆಯೆಂದು ಖ್ಯಾತಿ ಪಡೆದ ಉಡುಪಿಯಲ್ಲಿ ಇದೇ ಮೊದಲ ಬಾರಿಗೆ ಮಕ್ಕಳಿಲ್ಲವೆಂದು ಶಾಲೆಯನ್ನು ಮುಚ್ಚಿದ ನಿದರ್ಶನ ನಡೆಯುತ್ತಿದೆ. ಒಂದನೇ ತರಗತಿಯಿಂದ 5 ತರಗತಿಗಳಿರುವ ಈ ಶಾಲೆಯಲ್ಲಿ  ಇಬ್ಬರು ಶಿಕ್ಷಕರಿದ್ದು, 12 ವಿದ್ಯಾರ್ಥಿಗಳಿದ್ದರು. ಆದರೆ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಯಾವುದೇ ದಾಖಲಾತಿ ಆಗದ ಹಿನ್ನೆಲೆಯಲ್ಲಿ ಆ ಶಾಲೆಯನ್ನು ನಿಲ್ಲಿಸುವ ನಿರ್ಧಾರಕ್ಕೆ ಬರಲಾಯಿತು ಎನ್ನುತ್ತಾರೆ ಡಿಡಿಪಿಐ ದಿವಾಕರ್‌ ಶೆಟ್ಟಿ. 

ಶಾಲೆಯ ಪರಿಸ್ಥಿತಿ ಮನಗಂಡು ಈ ಶೈಕ್ಷಣಿಕ ವರ್ಷ ಆರಂಭಕ್ಕೆ ಮುನ್ನವೇ ಅಲ್ಲಿದ್ದ ವಿದ್ಯಾರ್ಥಿಗಳು ದಾಖಲಾತಿ ಪ್ರಮಾಣ ಪತ್ರ ತೆಗೆದುಕೊಂಡು ಬೇರೆ ಬೇರೆ ಶಾಲೆಗಳಿಗೆ ಸೇರ್ಪಡೆಯಾಗಿದ್ದಾರೆ. 

ಶಿಕ್ಷಕರ ಕೊರತೆ
ಸರಕಾರಿ ಶಾಲೆಗಳತ್ತ ನಿರ್ಲಕ್ಷ್ಯ ವಹಿಸಲು ಮತ್ತೂಂದು ಮುಖ್ಯ ಕಾರಣವೆಂದರೆ ಶಿಕ್ಷಕರ ಕೊರತೆ. ಕೆಲವು ಕಡೆಗಳಲ್ಲಿ 100 ವಿದ್ಯಾರ್ಥಿಗಳಿದ್ದರೂ ಕೇವಲ ಇಬ್ಬರೇ ಶಿಕ್ಷಕರಿರುತ್ತಾರೆ. ಇದರಿಂದ ಅವರ ಮೇಲೆ ಹೆಚ್ಚಿನ ಹೊರೆ ಬೀಳುತ್ತಿದ್ದು, ಇದರಿಂದ ಶಿಕ್ಷಣದ ಗುಣಮಟ್ಟವು ಕುಸಿಯುತ್ತಿದೆ. ಆದರೆ ಖಾಸಗಿ ಶಾಲೆಗಳಲ್ಲಿ ಈ ಸಮಸ್ಯೆಯಿಲ್ಲ. ಉಡುಪಿ ಜಿಲ್ಲೆಯಲ್ಲಿ ಸುಮಾರು ಸರಕಾರಿ 4 ಶಾಲೆಗಳಿಗೆ ಶೂನ್ಯ ಶಿಕ್ಷಕರಿದ್ದು, ಅಲ್ಲಿಗೆ ಸದ್ಯ ತಾತ್ಕಾಲಿಕವಾಗಿ ಪಕ್ಕದ ಶಾಲೆಗಳಿಂದ ಬದಲಿ ವ್ಯವಸ್ಥೆ ಮಾಡುವ ಪರಿಸ್ಥಿತಿ ಬಂದಿದೆ. 

ಸಮವಸ್ತ್ರ  ಪೂರೈಕೆ
ಶಾಲಾ ಮಕ್ಕಳಿಗೆ ವಿತರಿಸಲು ಸರಕಾರದಿಂದ ಸಮವಸ್ತ್ರ ಬಂದಿದ್ದು, ಈಗಾಗಲೇ ಜಿಲ್ಲೆಯ ಎಲ್ಲ 5 ವಲಯಗಳಿಗೂ ಪೂರೈಕೆ ಮಾಡಲಾಗಿದೆ. ಶೀಘ್ರದಲ್ಲಿ ವಿದ್ಯಾರ್ಥಿಗಳಿಗೆ ವಿತರಿಸುವ ಪ್ರಕ್ರಿಯೆ ನಡೆಯಲಿದೆ. 
ಬೈಂದೂರು ವಲಯದಲ್ಲಿ ವಿದ್ಯಾರ್ಥಿನಿಯರಿಗೆ ಚೂಡಿದಾರ್‌ ಪೀಸ್‌ ಪೂರೈಕೆ ಬಾಕಿಯಿದೆ. ಮೈಸೂರು ವಲಯದ ಪಟ್ಟಿಯಲ್ಲಿ ಉಡುಪಿ ಸಹಿತ ಕೆಲ ಜಿಲ್ಲೆಗಳು ಇದ್ದುದರಿಂದ ಸಮವಸ್ತ್ರ ವಿತರಣೆಯಲ್ಲಿ ತಡವಾಗಿದೆ. 

Advertisement

953 ಆರ್‌ಟಿಇ ಸೀಟುಗಳು ಭರ್ತಿ 
ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದ ಕುಟುಂಬದ ಮಕ್ಕಳಿಗೆ ಖಾಸಗಿ ಅನುದಾನಿತ ಶಾಲೆಯಲ್ಲಿ  (ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ) ಆರ್‌ಟಿಐ ಕಾಯ್ದೆಯಡಿ ಜಿಲ್ಲೆಗೆ ಮೀಸಲಿರುವ 1,351 ಸೀಟುಗಳಲ್ಲಿ ಪ್ರಥಮ ಹಾಗೂ ದ್ವಿತೀಯ ಹಂತದ ಪ್ರಕ್ರಿಯೆಯಲ್ಲಿ ಈವರೆಗೆ 953 ಸೀಟುಗಳು ಮಾತ್ರ ಹಂಚಿಕೆಯಾಗಿವೆ.  

67 ಅತಿಥಿ ಶಿಕ್ಷಕರಿಗೆ ಬೇಡಿಕೆ
ಉಡುಪಿ ಜಿಲ್ಲೆಯಲ್ಲಿರುವ 605 ಪ್ರಾಥಮಿಕ ಹಾಗೂ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಒಟ್ಟು 67 ಶಿಕ್ಷಕರ ಕೊರತೆಯಿದೆ. ಈ ಹಿನ್ನೆಲೆಯಲ್ಲಿ ಅತಿಥಿ ಶಿಕ್ಷಕರಿಗಾಗಿ ಬೇಡಿಕೆ ಸಲ್ಲಿಸಲಾಗಿದೆ. ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ತತ್‌ಕ್ಷಣಕ್ಕೆ ಬದಲಿ ಶಿಕ್ಷಕರನ್ನು ನಿಯೋಜಿಸಿ ಬದಲಿ ವ್ಯವಸ್ಥೆ ಮಾಡಲಾಗಿದ್ದು, ಕೂಡಲೇ ಈ ಸೀಟುಗಳನ್ನು ಭರ್ತಿ ಮಾಡಲಾಗುವುದು ಎನ್ನುವುದಾಗಿ ಡಿಡಿಪಿಐ ದಿವಾಕರ್‌ ಶೆಟ್ಟಿ ಹೇಳುತ್ತಾರೆ. 

ಇಂಗ್ಲಿಷ್‌ ಮಾಧ್ಯಮದತ್ತ ಒಲವು
ರಾಜ್ಯದ ಅನೇಕ ಕಡೆಗಳಲ್ಲಿ ಹೀಗೆ ಸರಕಾರಿ ಶಾಲೆಗಳು ಒಂದೊಂದಾಗಿ ಮುಚ್ಚಲ್ಪಡುತ್ತಿದ್ದು, ಇದಕ್ಕೆ ಪ್ರಮುಖ ಕಾರಣ ಇಂಗ್ಲಿಷ್‌ ವ್ಯಾಮೋಹ. ಖಾಸಗಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಹೊರತುಪಡಿಸಿಯೂ ಒಂದನೇ ತರಗತಿಯಿಂದಲೇ ಇಂಗ್ಲಿಷ್‌ ಕಲಿಕೆ ಕಡ್ಡಾಯವಾಗಿದ್ದು ಅದು ಸರಕಾರಿ ಶಾಲೆಗಳಲ್ಲಿ ಇಲ್ಲ. ಅದಕ್ಕೆ ಹೆತ್ತವರು ಕಷ್ಟವಾದರೂ ಪರಾÌಗಿಲ್ಲ. ಮನೆ ಪಕ್ಕದಲ್ಲೇ ಸರಕಾರಿ ಶಾಲೆಯಿದ್ದರೂ, ದೂರವಿರುವ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳಿಗೆ ವಾಹನದ ಮೂಲಕವಾದರೂ ಕಳುಹಿಸಿ ಉತ್ತಮ ಶಿಕ್ಷಣ ಕೊಡಿಸುವತ್ತ ಗಮನಹರಿಸುತ್ತಿದ್ದಾರೆ.

ಜಿಲ್ಲೆಯಲ್ಲಿರುವ ಸರಕಾರಿ ಶಾಲೆಗಳ ವಿವರ
ವಿಭಾಗ ಕಿ. ಪ್ರಾ. ಹಿ. ಪ್ರಾ. ಪ್ರೌಢಶಾಲೆ
ಸಂಖ್ಯೆ 242 363 106
Advertisement

Udayavani is now on Telegram. Click here to join our channel and stay updated with the latest news.

Next