Advertisement

ಬ್ಯಾಂಕ್‌ನಿಂದ ಮನೆಗೆ ಸಾರ್ವಜನಿಕರ ಅಲೆದಾಟ

12:11 AM Jul 03, 2020 | Sriram |

ಉಡುಪಿ: ಸಾಮಾಜಿಕ ಭದ್ರತಾ ಯೋಜನೆಯಡಿ ಸಿಗುವ ಪಿಂಚಣಿ ನಂಬಿಕೊಂಡು ಜೀವನ ನಡೆಸುತ್ತಿದ್ದ ಫ‌ಲಾನುಭವಿಗಳು ಕಳೆದ ಮೂರು ತಿಂಗಳಿನಿಂದ ಸರಿಯಾಗಿ ಮಾಸಾಶನ ಸಿಗದೆ ಬ್ಯಾಂಕ್‌ನಿಂದ ಸರಕಾರಿ ಕಚೇರಿಗಳಿಗೆ ಅಲೆದಾಟ ನಡೆಸುತ್ತಿದ್ದಾರೆ.

Advertisement

ಪಿಂಚಣಿ ಸಿಗದೆ ಪರದಾಟ
ಬಡತನದಿಂದ ಸಂಕಷ್ಟಕ್ಕೆ ಸಿಲಿಕಿರುವ, ಅನಾರೋಗ್ಯದಿಂದ ಬಳಲಿದವರಿಗೆ ಆರ್ಥಿಕ ರಕ್ಷಣೆ ಹಾಗೂ ಸಾಮಾಜಿಕ ನ್ಯಾಯ ಒದಗಿಸಲು ಸರಕಾರ ಹಲವು ಸಾಮಾಜಿಕ ಭದ್ರತಾ ಯೋಜನೆ ಜಾರಿಗೊಳಿಸಿದೆ. ಆದರೆ ಜಿಲ್ಲೆಯಲ್ಲಿ ಫಲಾನುಭವಿಗಳಿಗೆ ಸರಿಯಾದ ಸಮಯದಲ್ಲಿ ಪಿಂಚಣಿ ಸಿಗದ ಹಿನ್ನೆಲೆಯಲ್ಲಿ ವೃದ್ಧರು, ನಿರ್ಗತಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದು, ಪಿಂಚಣಿ ಹಣಕ್ಕಾಗಿ ನೂರಾರು ರೂ. ಖರ್ಚು ಮಾಡಿಕೊಂಡು ಮಾಸಾಶನ ವಿಚಾರಿಸಿಕೊಂಡು ಬ್ಯಾಂಕ್‌ ಹಾಗೂ ಅಂಚೆ ಕಚೇರಿಗೆ ಹೋಗಬೇಕಾಗಿದೆ.

ತಾಂತ್ರಿಕ ಕಾರಣ
ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಯಡಿಯಲ್ಲಿ ನಿರಂತರ ಬದಲಾವಣೆಯಾಗುತ್ತಿದೆ. ಸರಕಾರ ತಂತ್ರಾಂಶ ಖಜಾನೆ 1ರಿಂದ ಖಜಾನೆ 2ಕ್ಕೆ ಪರಿವರ್ತಿಸುವ ಸಂದರ್ಭದಲ್ಲಿ ಕೆಲ ಅರ್ಜಿಗಳು ಬಿಟ್ಟು ಹೋಗಿವೆ. ಇದರಿಂದಾಗಿ ಫ‌ಲಾನುಭವಿಗಳಿಗೆ ಪಿಂಚಣಿ ದೊರಕುತ್ತಿಲ್ಲ. ಜತೆಗೆ ಕೆಲವು ಅರ್ಜಿಗಳನ್ನು ಆಧಾರ್‌ ಹಾಗೂ ಇತರೆ ಕಾರಣಗಳಿಂದ ರದ್ದು ಮಾಡಲಾಗಿದೆ.

ಪರಿಹಾರವೇನು?
ನಿರಂತರವಾಗಿ ಬರುತ್ತಿದ್ದ ಪಿಂಚಣಿ ನಿಲುಗಡೆ ಯಾದರೆ ಅರ್ಜಿದಾರರು ಸಿಒಪಿ ಸಂಖ್ಯೆ( ಪಿಂಚಣಿ ಮಂಜೂರು ಪತ್ರದಲ್ಲಿರುವ ಸಂಖ್ಯೆ), ಆಧಾರ್‌ ಕಾರ್ಡ್‌, ಬ್ಯಾಂಕ್‌ ಪಾಸ್‌ ಬುಕ್‌ನೊಂದಿಗೆ ಸಮೀಪದ ತಾಲೂಕು ಕಚೇರಿಯನ್ನು ಸಂಪರ್ಕಿಸಿ. ಫ‌ಲಾನುಭವಿಗಳ ಅರ್ಜಿ ಅಮಾನುತುಗೊಂಡರೆ ಕೂಡಲೇ ಅಲ್ಲಿನ ಸಿಬಂದಿ ಸರಿ ಮಾಡಿಸಿಕೊಡುತ್ತಾರೆ. ಒಂದು ವೇಳೆ ಅರ್ಜಿ ರದ್ದಾಗಿದ್ದಾರೆ ಇನ್ನೊಮ್ಮೆ ಅರ್ಜಿ ಸಲ್ಲಿಸಬೇಕಾಗಿದೆ.

3 ತಿಂಗಳ ಮಾಸಾಶನ ಬಾಕಿ!
ಸಾಮಾಜಿಕ ಭದ್ರತಾ ಯೋಜನೆ ಅನ್ವಯ ವೃದ್ಧಾಪ್ಯ, ವಿಧವಾವೇತನ, ವಿಶೇಷಚೇತನ, ಸಂಧ್ಯಾಸುರಕ್ಷಾ ಸೇರಿದಂತೆ ಇತರೆ ಸಾಮಾಜಿಕ ಭದ್ರತಾ ಯೋಜನೆಯ ಮಾಸಾಶನ ಕೆಲವು ಫಲಾನುಭವಿಗಳಿಗೆ ಮಾರ್ಚ್‌ನಿಂದ ಬಾಕಿಯಿದೆ. ಉಡುಪಿ ಜಿಲ್ಲೆಯಲ್ಲಿ ವೃದ್ಧಾಪ್ಯ ವೇತನ 10,436, ಅಂಗವಿಕಲರು 12,035, ವಿಧವಾ ವೇತನ 38,579, ಸಂಧ್ಯಾ ಸುರಕ್ಷ 63,524, ಮನಸ್ವಿನಿ 3,869, ಮೈತ್ರಿ 27 ಫ‌ಲಾನುಭವಿಗಳು ಸೇರಿದಂತೆ 1,28,470 ಮಂದಿ ಪಿಂಚಣಿ ಪಡೆಯುತ್ತಿದ್ದಾರೆ.

Advertisement

ವಿ.ಎ. ಭೇಟಿಯಾಗಿ
ಪಿಂಚಣಿ ಸಿಗದೆ ಇರುವ ಫಲಾನುಭವಿಗಳು ಸಮೀಪದ ಸ್ಥಳೀಯಾಡಳಿತದ ಗ್ರಾಮ ಲೆಕ್ಕಾಧಿಕಾರಿಯನ್ನು ಭೇಟಿ ಮಾಡಿ ಸಮಸ್ಯೆ ಪರಿಹರಿಸಿಕೊಳ್ಳಬಹುದು.
-ಪ್ರದೀಪ ಕುರ್ಡೇಕರ್ ‌, ತಹಶೀಲ್ದಾರ್‌,
ಉಡುಪಿ ತಾಲೂಕು.

Advertisement

Udayavani is now on Telegram. Click here to join our channel and stay updated with the latest news.

Next