ಕಾರವಾರ: ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ, ಕಡಲಾಮೆಗಳು ಮೊಟ್ಟೆ ಇಡುವ ತಾಣಗಳಲ್ಲಿ ಒಂದಾದ ಕಾಸರಕೋಡ ಟೊಂಕದ ಕಡಲತೀರದಲ್ಲಿ ನಿಯಮ ಬಾಹಿರವಾಗಿ ಬಲವಂತದಿಂದ ರಸ್ತೆ ಕಾಮಗಾರಿ ನಡೆಸಲಾಗುತ್ತಿದೆ ಎಂದು ರಾಷ್ಟ್ರೀಯ ಮೀನುಗಾರರ ಸಂಘಟನೆ ರಾಜ್ಯ ಕಾರ್ಯದರ್ಶಿ ಚಂದ್ರಕಾಂತ ಕೊಚರೇಕರ ಆರೋಪಿಸಿದರು.
ಇಲ್ಲಿನ ಜಿಲ್ಲಾ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ರಸ್ತೆ ಕೆಲಸ ನಡೆಸುತ್ತಿರುವುದನ್ನು ಪ್ರಶ್ನಿಸಿದ ಕಾಸರಕೋಡ ವಾಣಿಜ್ಯ ಬಂದರು ವಿರೋಧಿ ಹೋರಾಟಗಾರರ ಮೇಲೆ ಮತ್ತು ಸ್ಥಳೀಯರ ಮೇಲೆ ಹಲ್ಲೆಗೆ ಯತ್ನಿಸಿ ದಬ್ಟಾಳಿಕೆ ನಡೆಸುತ್ತಿರುವವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು. ನಿಯಮಬಾಹಿರ ಕಾಮಗಾರಿ ನಡೆಸುವುದನ್ನು ತಡೆಹಿಡಿಯಬೇಕು. ಇಂತಹ ನಿಯಮ ಬಾಹಿರ ಕಾಮಗಾರಿಗೆ ಉತ್ತೇಜನ ನೀಡುವುದನ್ನು ಜಿಲ್ಲಾಡಳಿತ ಮತ್ತು ಸ್ಥಳೀಯ ಆಡಳಿತ ಕೈಬಿಡಬಿಡದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸರ್ಕಾರ ಮತ್ತು ಜನಪ್ರತಿನಿಧಿಗಳು ನಮ್ಮ ಬೇಡಿಕೆಯನ್ನು ಈಡೇರಿಸಲಿಲ್ಲ ಎಂದು ವಿಷಾದಿಸಿದರು. ಸ್ಥಳೀಯರ ತೀವ್ರ ವಿರೋಧದ ನಡುವೆಯೂ, ಉಚ್ಚ ನ್ಯಾಯಾಲಯದ ನಿರ್ದೇಶನಕ್ಕೆ ವಿರುದ್ಧವಾಗಿ ಸಿಆರ್‌ಝೆಡ್ ಮತ್ತು ಪರಿಸರ ಇಲಾಖೆಯ ಪರವಾನಗಿ ಪಡೆಯದೇ ಇಲ್ಲಿನ ಕಡಲತೀರದಲ್ಲಿ ಭಾರಿ ಪ್ರಮಾಣದಲ್ಲಿ ಮಣ್ಣು, ಕೆಂಪು ಕಲ್ಲು, ಜಲ್ಲಿಕಲ್ಲನ್ನು, ಧೂಳು ಮಿಶ್ರಿತ ಜಲ್ಲಿ ಪುಡಿ ಸುರಿದು ಕಚ್ಚಾ ರಸ್ತೆ ದುರಸ್ತಿ ನೆಪದಲ್ಲಿ ಸುಮಾರು 4 ಕಿ.ಮೀ. ಉದ್ದದ ಪಕ್ಕಾರಸ್ತೆ ನಿರ್ಮಿಸಲು ಪ್ರಯತ್ನಿಸುತ್ತಿದ್ದಾರೆ. ಇಲ್ಲಿ ರಸ್ತೆ ಮತ್ತು ರೈಲು ಮಾರ್ಗ ನಿರ್ಮಾಣಕ್ಕೆ ಸಿಆರ್‌ಝೆಡ್ ಪರಿಸರ ಮತ್ತು ವಾಯು ಮಾಲಿನ್ಯ ನಿಯಂತ್ರಣ ಮಂಡಳಿ ಪರವಾನಿಗೆ ದಿ ಹೊನ್ನಾವರ ಪೋರ್ಟ್ ಪ್ರೈವೇಟ್ ಲಿಮಿಟೆಡ್ ಕಂಪನಿಯವರು ಅರ್ಜಿ ಸಲ್ಲಿಸಿದ್ದಾರೆ.
ಆದರೆ ಬಂದರು ನಿರ್ಮಾಣ ಕಂಪನಿಯ ಕೋರಿಕೆಗೆ ಸ್ಥಳೀಯರು ಲಿಖೀತ ಆಕ್ಷೇಪಣೆ ಸಲ್ಲಿಸಿದ್ದು ಸಿಆರ್‌ಝೆಡ್ ವ್ಯಾಪ್ತಿಯ ಕಡಲ ತೀರದಲ್ಲಿ ರಸ್ತೆ ನಿರ್ಮಿಸಲು ಬಂದರು ನಿರ್ಮಾಣ ಕಂಪನಿಗೆ ಈವರೆಗೆ ಯಾವುದೇ ಪರವಾನಗಿ ಸಿಕ್ಕಿರುವುದಿಲ್ಲ. ವಿವಾದಿತ ವಾಣಿಜ್ಯ ಬಂದರು ವಿಚಾರದಲ್ಲಿ ಉಚ್ಚ ನ್ಯಾಯಾಲಯ ನೀಡಿರುವ ನಿರ್ದೇಶನದಂತೆ ಸ್ಥಳೀಯರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅಹವಾಲು ಸರ್ಕಾರದ ಮುಂದೆ ವಿಚಾರಣೆಗೆ ಬಾಕಿ ಇದೆ. ಹೀಗಿರುವಾಗ ವಾಣಿಜ್ಯ ಬಂದರು ನಿರ್ಮಾಣ ಕಂಪನಿಯವರ ಪ್ರಭಾವ ಮತ್ತು ಪ್ರಲೋಭನೆಗೆ ಒಳಗಾಗಿ ಗುತ್ತಿಗೆದಾರರು ಮತ್ತು ಕೆಲವು ಅಧಿಕಾರಿಗಳು ಸೇರಿ ಇಲ್ಲಿನ ಕಡಲತೀರದಲ್ಲಿ ಕಚ್ಚಾ ರಸ್ತೆ ಸುಧಾರಣೆ ಹೆಸರಿನಲ್ಲಿ ಉದ್ದೇಶಿತ ವಾಣಿಜ್ಯ ಬಂದರು ಯೋಜನಾ ಪ್ರದೇಶದವರೆಗೆ ಪಕ್ಕಾ ರಸ್ತೆ ನಿರ್ಮಿಸಲು ಹೊರಟಿರುವ ಕ್ರಮಕ್ಕೆ ಸ್ಥಳೀಯರ ತೀವ್ರ ವಿರೋಧವಿದ್ದು ಪ್ರತಿಭಟನೆ ನಡೆಸಲು ಸ್ಥಳೀಯ ಹೋರಾಟ ಸಮಿತಿ ಸನ್ನದ್ಧವಾಗಿದೆ ಎಂದರು.
ವಾಣಿಜ್ಯ ಬಂದರು ವಿರೋಧ ಹೋರಾಟ ಸಮಿತಿ ಅಧ್ಯಕ್ಷ ಆರ್.ಜಿ. ತಾಂಡೇಲ, ರಾಷ್ಟ್ರೀಯ ಮೀನುಗಾರರ ಸಂಘಟನೆ ರಾಜ್ಯ ಕಾರ್ಯದರ್ಶಿ ಚಂದ್ರಕಾಂತ ಕೊಚರೇಕರ, ಹಸಿಮೀನು ವ್ಯಾಪರಸ್ಥರ ಸಂಘದ ಅಧ್ಯಕ್ಷ ಗಣಪತಿ ಈಶ್ವರ ತಾಂಡೇಲ್, ಕಡಲ ವಿಜ್ಞಾನಿ ಡಾ| ಪ್ರಕಾಶ ಮೇಸ್ತ, ಮೀನುಗಾರರ ಕಾರ್ಮಿಕರ ಸಂಘದ ಕಾರ್ಯದರ್ಶಿ ಆರ್. ತಾಂಡೇಲ ಇದ್ದರು.