Advertisement

ಕಸ ವಿಲೇವಾರಿ ಘಟಕದ ವಿರುದ್ಧ ಜನ ಜಾಗೃತಿ

05:53 PM Apr 02, 2022 | Team Udayavani |

ದೊಡ್ಡಬಳ್ಳಾಪುರ: ಚಿಗರೇನಹಳ್ಳಿಯ ಎಂಎಸ್‌ಜಿಪಿ ಬಿಬಿಎಂಪಿ ಕಸ ವಿಲೇವಾರಿ ಘಟಕದಿಂದ ತೊಂದರೆಗೆ ಒಳಗಾಗಿರುವ ಗ್ರಾಮಗಳಲ್ಲಿ ಗ್ರಾಮಸಭೆ ನಡೆಸಲಾಗುತ್ತಿದೆ. ಜನಾಭಿಪ್ರಾಯ ಸಂಗ್ರಹದ ಆಧಾರದ ಮೇಲೆ ಮುಂದಿನ ಹೋರಾಟದ ರೂಪುರೇಷ ಸಿದ್ಧ ಪಡಿಸಲಾಗುವುದು ಎಂದು ಕೊರಟಗೆರೆ ಎಲೆರಾಂ ಪುರದ ಕುಂಚಿಟಿಗರ ಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ಹನುಮಂತನಾಥ ಸ್ವಾಮೀಜಿ ಹೇಳಿದರು.

Advertisement

ತಾಲೂಕಿನ ಮೂಡ್ಲಕಾಳೇನಹಳ್ಳಿ ಗ್ರಾಮದ ಅರ ಸಮ್ಮದೇವಿ ದೇವಾಲಯದ ಆವರಣದಲ್ಲಿ ನಡೆದ ಗ್ರಾಮ ಸಭೆಯಲ್ಲಿ ಮಾತನಾಡಿ, ಇಲ್ಲಿಯವರೆಗೂ ಹಲವಾರು ಸುತ್ತಿನ ಹೋರಾಟ ನಡೆದಿವೆ. ಆದರೆ, ಅಧಿಕಾರಿಗಳ ಹಾಗೂ ಜನ ಪ್ರತಿನಿಧಿಗಳ ಭರವಸೆಗಳ ನಂಬಿ ಇಲ್ಲಿನ ಜನ ತೊಂದರೆ ಅನುಭವಿಸುವಂತಾಗಿದೆ. ಈಗ ಚಿಗರೇನಹಳ್ಳಿಯಲ್ಲಿನ ಎಂಎಸ್‌ ಜಿಪಿ ಕಸ ವಿಲೇವಾರಿ ಘಟಕದ ವಿರುದ್ಧ ಎಲ್ಲಾ ಜನರ ಅಭಿಪ್ರಾಯದಂತೆ ಹೋರಾಟ ರೂಪಿಸುವ ಮೂಲಕ ಇಲ್ಲಿಗೆ ಮತ್ತೆ ಕಸ ಬಾರದಂತೆ ತಡೆಯಬೇಕಿದೆ.

ಕಸ ವಿಲೇವಾರಿ ಘಟಕದ ಸುತ್ತಲಿನ ಎಲ್ಲ ಗ್ರಾಮಗಳಲ್ಲೂ ಇನ್ನು ಒಂದು ವಾರ ಸಭೆಗಳನ್ನು ನಡೆಸಲಾಗುವುದು. ಗ್ರಾಮಸಭೆ ಮುಕ್ತಾಯವಾದ ನಂತರ ಎಲ್ಲ ಸಂಘಟನೆಗಳು, ರಾಜಕೀಯ ಪಕ್ಷ ಒಳಗೊಂಡ ಹೋರಾಟ ಸಮಿತಿ ರಚಿಸಿಕೊಂಡು ಮುಂದಿನ ಹೋರಾಟವನ್ನು ವ್ಯವಸ್ಥಿತವಾಗಿ ನಡೆಸಲಾಗುವುದು ಎಂದರು.

ಸೂಕ್ತ ಕ್ರಮ ಕೈಗೊಂಡಿಲ್ಲ: ಒಂದು ವರ್ಷದ ಹಿಂದೆ ಎಂಎಸ್‌ಜಿಪಿ ಕಸ ವಿಲೇವಾರಿ ಘಟಕದಲ್ಲಿ ಸೂಕ್ತ ದಾಖಲೆ ಇಲ್ಲದ ಹತ್ತಾರು ಬೈಕ್‌ ಸಿಕ್ಕಿದ್ದವು. ಬಾಂಗ್ಲಾದೇಶ ಸೇರಿ ವಿವಿಧಡೆಗಳಿಂದ ಅಕ್ರಮವಾಗಿ ಬಂದು ಇಲ್ಲಿ ನೆಲೆಸಿದ್ದ ಬಗ್ಗೆ ಜಿಲ್ಲಾಧಿಕಾರಿ, ರಾಜ್ಯ ಸಪಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರು ಭೇಟಿ ನೀಡಿದ್ದ ಸಂದರ್ಭದಲ್ಲಿ ಬೆಳಕಿಗೆ ಬಂದಿದ್ದವು.

ಇಷ್ಟೆಲ್ಲ ಅಕ್ರಮ ಪತ್ತೆಯಾಗಿದ್ದರು. ಇಲ್ಲಿಯವರೆಗೂ ಕಸ ವಿಲೇವಾರಿ ಘಟಕದ ಮಾಲೀಕರ ವಿರುದ್ಧ ಯಾವುದೇ ಕ್ರಮ ಇಲ್ಲ. ಸೂಕ್ತ ರೀತಿಯಲ್ಲಿ ಕಸ ವಿಲೇವಾರಿ ಮಾಡದೇ ಇದ್ದ ಕುರಿತಂತೆ ಎಫ್‌ ಐಆರ್‌ ದಾಖಲಾಗಿದ್ದರೂ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

Advertisement

ಹೋರಾಟ ಅನಿವಾರ್ಯ: ಹಲವರ ಪಾಪದ ಕೂಸಾಗಿ ತಾಲೂಕಿಗೆ ಒಕ್ಕರಿಸಿರುವ ಬಿಬಿಎಂಪಿ ಕಸದ ವಿರುದ್ಧ ಜನ ಜಾಗೃತಿಮೂಡಿಸಿ ಎಲ್ಲರನ್ನು ಒಳಗೊಂಡಂತೆ ಹೋರಾಟ ಮಾಡುವ ತುರ್ತು ಪರಿಸ್ಥಿತಿ ಎಲ್ಲರ ಜವಾಬ್ದಾರಿಯಾಗಿದೆ. ಇಂದು ನಾವು ಒಂದಿಷ್ಟು ಎಚ್ಚರ ತಪ್ಪಿ ಯಾರದೋ ಮುಲಾಜಿಗೆ ಒಳಗಾಗಿ ಕಸ ಕಂಟಕದ ವಿರುದ್ಧ ಧ್ವನಿ ಎತ್ತದೇ ಹೋದರೆ ನಾವು ಮತ್ತು ನಮ್ಮ ಮಕ್ಕಳು ಇಲ್ಲಿ ಆರೋಗ್ಯವಂತ ಜೀವನ ನಡೆಸುವ ವಾತಾವರಣ ಕಣ್ಮರೆಯಾಗಲಿದೆ ಎಂದು ಎಚ್ಚರಿಸಿದರು.

ಜನ ಭಯಪಡುವಂತಹ ಸ್ಥಿತಿ ನಿರ್ಮಾಣ: ಈಗಾಗಲೇ ಕಸ ವಿಲೇವಾರಿ ಘಟಕದ ಸುತ್ತಮುತ್ತಲಿನ ಗ್ರಾಮಗಳಿಂದ ದನ, ಕರು, ಮೇಕೆ, ಕುರಿಗಳಂತಹ ಸಾಕು ಪ್ರಾಣಿ, ಹಣ್ಣು, ತರಕಾರಿ ಖರೀದಿ ಮಾಡಲು ಜನ ಭಯಪಡುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದರು. ಸಿಪಿಐಎಂ ತಾಲೂಕು ಕಾರ್ಯದರ್ಶಿ ರುದ್ರಾ ರಾಧ್ಯ, ಟಿಎಪಿಎಂಸಿಎಸ್‌ ನಿರ್ದೆಶಕ ಡಿ. ಸಿದ್ದರಾಮ ಯ್ಯ, ಜೆಡಿಎಸ್‌ ನಗರ ಘಟಕದ ಅಧ್ಯಕ್ಷ ವಿ.ಎಸ್‌. ರವಿ ಕುಮಾರ್‌, ಕರವೇ ರಾಜ್ಯ ಕಾರ್ಯದರ್ಶಿ ರಾಜ ಘಟ್ಟ ರವಿ, ಕಾಡತಿಪ್ಪೂರು ಗ್ರಾಪಂ ಅಧ್ಯಕ್ಷ ಸಿದ್ದಲಿಂಗಯ್ಯ, ಮುಖಂಡ ರಾಜಣ್ಣ, ಶಿವ ಕುಮಾರ್‌, ಮುತ್ತು ರಾಜ್‌, ರುದ್ರಮೂರ್ತಿ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next