Advertisement
ವಿಜ್ಞಾನ ವಿಭಾಗದಲ್ಲಿ ಮಂಗಳೂರಿನ ಎಕ್ಸ್‌ಪರ್ಟ್ ಪಿಯು ಕಾಲೇಜಿನ ಎನ್.ಸೃಜನಾ ಮತ್ತು ಉಡುಪಿ ಜಿಲ್ಲೆಯ ಗಂಗೊಳ್ಳಿಯ ಎಸ್.ವಿ.ಪಿಯು ಕಾಲೇಜಿನ ಎನ್. ರಾಧಿಕಾ ಪೈ ತಲಾ 596 ಅಂಕ ಗಳಿಸುವ ಮೂಲಕ ಪ್ರಥಮ ಸ್ಥಾನ ಹಂಚಿಕೊಂಡಿದ್ದಾರೆ. ಅದೇ ರೀತಿ ವಾಣಿಜ್ಯ ವಿಭಾಗದಲ್ಲಿ ಬೆಂಗಳೂರಿನ ವಿಜಯನಗರದ ಆರ್‌ಎನ್‌ಎಸ್ ಪಿಯು ಕಾಲೇಜಿನ ಪಿ.ಜಿ. ಶ್ರೀನಿಧಿ ಮತ್ತು ಅಳಿಕೆಯ ಸತ್ಯಸಾಯಿ ಲೋಕಸೇವಾ ಪಿಯು ಕಾಲೇಜಿನ ಸಾಯಿ ಸಮರ್ಥ್ ತಲಾ 595 ಅಂಕ ಪಡೆಯುವ ಮೂಲಕ ಇವರೂ ಮೊದಲ ಸ್ಥಾನ ಹಂಚಿಕೊಂಡಿದ್ದಾರೆ. ಕಲಾ ವಿಭಾಗದಲ್ಲಿ ಬಳ್ಳಾರಿ ಜಿಲ್ಲೆಯ ಕೊಟ್ಟೂರಿನ ಇಂದು ಪಿಯು ಕಾಲೇಜಿನ ಬಿ. ಚೈತ್ರಾ ಅವರು 589 ಅಂಕ ಗಳಿಸಿ ರಾಜ್ಯಕ್ಕೇ ಮೊದಲಿಗರಾಗಿದ್ದಾರೆ. ಪರೀಕ್ಷೆಗೆ ಹಾಜರಾದ ಒಟ್ಟು ವಿದ್ಯಾರ್ಥಿಗಳಲ್ಲಿ ಶೇ.44.74ರಷ್ಟು ಬಾಲಕರು ಹಾಗೂ ಶೇ.60.28ರಷ್ಟು ಬಾಲಕಿಯರು ಉತ್ತೀರ್ಣರಾಗಿದ್ದಾರೆ. ಬಾಲಕಿಯರ ತೇರ್ಗಡೆ ಫಲಿತಾಂಶ ಹುಡುಗರಿಗೆ ಹೋಲಿಸಿದರೆ ಶೇ. 15.54ರಷ್ಟು ಹೆಚ್ಚಿದೆ. ಮಲ್ಲೇಶ್ವರದ ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಫಲಿತಾಂಶ ಘೋಷಿಸಿದರು. ಎನ್‌ಸಿಆರ್‌ಟಿ ಪಠ್ಯಕ್ರಮದಿಂದ ಏನೂ ಸಮಸ್ಯೆಯಾಗಿಲ್ಲ. ಕರ್ನಾಟಕ ಸೆಕ್ಯೂರ್ ಎಕ್ಸಾಮಿನೇಷನ್ ಸಿಸ್ಟಮ್ ಜಾರಿ ಮಾಡಿದ ಅನಂತರ ಪರೀಕ್ಷಾ ಅಕ್ರಮ ಕಡಿಮೆಯಾಗಿದೆ ಎಂದರು.
ಕರಾವಳಿ ಜಿಲ್ಲೆಯ ಸಾಧನೆ
ಪ್ರತಿ ವರ್ಷದಂತೆ ಈ ವರ್ಷವೂ ಕರಾವಳಿಯ ಎರಡು ಜಿಲ್ಲೆಗಳು ಪಿಯುಸಿ ಫಲಿತಾಂಶದಲ್ಲಿ ಅಗ್ರಸ್ಥಾನದಲ್ಲಿವೆ. 2016ರ ಪಿಯುಸಿ ಫಲಿತಾಂಶದಲ್ಲಿ 2ನೇ ಸ್ಥಾನದಲ್ಲಿದ್ದ ಉಡುಪಿ ಈ ವರ್ಷ ಮೊದಲ ಸ್ಥಾನಕ್ಕೇರಿದೆ. ಹಾಗೆಯೇ ಮೊದಲ ಸ್ಥಾನದಲ್ಲಿದ್ದ ದಕ್ಷಿಣ ಕನ್ನಡ 2ನೇ ಸ್ಥಾನಕ್ಕೆ ಇಳಿದಿದೆ. ಕೊಡಗು ಮೂರನೇ ಸ್ಥಾನ ಉಳಿಸಿಕೊಂಡಿದೆ. ಉತ್ತರ ಕನ್ನಡ 4ನೇ ಸ್ಥಾನ ಉಳಿಸಿಕೊಂಡಿದೆ. ಚಿಕ್ಕಮಗಳೂರು 8ರಿಂದ ಐದಕ್ಕೆ ಏರಿದೆ. ಬೀದರ್ 27ರಿಂದ 31ನೇ ಸ್ಥಾನಕ್ಕೆ ಇಳಿದಿದೆ. ಮರು ಪರೀಕ್ಷೆ
ದ್ವಿತೀಯ ಪಿಯುಸಿಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆಯನ್ನು ಜೂನ್ 28ರಿಂದ ಜುಲೈ 8ರ ತನಕ ನಡೆಸಲಾಗುತ್ತದೆ. ಪರೀಕ್ಷಾ ಶುಲ್ಕ ಪಾವತಿಸಲು ಮೇ 23 ಕೊನೆಯ ದಿನವಾಗಿರುತ್ತದೆ. ಅಂಕಗಳ ಮರು ಎಣಿಕೆಗೆ ಅರ್ಜಿ ಸಲ್ಲಿಸಲು ಮೇ 24ರ ತನಕ ಕಾಲಾವಕಾಶವಿದ್ದು, ಇದಕ್ಕೆ ಯಾವುದೇ ಶುಲ್ಕ ಇರುವುದಿಲ್ಲ. ಇದರ ಫಲಿತಾಂಶವನ್ನು ಆಯಾ ದಿನವೇ ಪಿಯು ಇಲಾಖೆ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ.