Advertisement

ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಗೆ ಸಿದ್ಧತೆ: ಫ‌ಲಿತಾಂಶ ಸುಧಾರಣೆಗೆ ಅಗತ್ಯ ಕ್ರಮ

10:33 AM Oct 25, 2022 | Team Udayavani |

ಉಡುಪಿ : ಪದವಿ ಪೂರ್ವ ಶಿಕ್ಷಣ ಇಲಾಖೆಯು ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯನ್ನು 2023ರ ಮಾರ್ಚ್‌ 10ರಿಂದ ಆರಂಭಿಸಿ, ಮಾ.29ರ ವರೆಗೂ ನಡೆಸುವುದಾಗಿ ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಇದಕ್ಕೆ ಪೂರಕವಾಗಿ ಉಡುಪಿ ಜಿಲ್ಲೆಯಲ್ಲೂ ವಿದ್ಯಾರ್ಥಿಗಳ ಫ‌ಲಿತಾಂಶ ಸುಧಾರಣೆಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

Advertisement

ಪ್ರಸಕ್ತ ಸಾಲಿನಲ್ಲಿ ಪೂರ್ಣ ಪ್ರಮಾಣದಲ್ಲಿ ಲ್ಯಾಬ್‌ ಸಹಿತ ಭೌತಿಕ ತರಗತಿಯೇ ನಡೆದಿರುವುದರಿಂದ ಪರೀಕ್ಷೆಗೆ ಸಿದ್ಧತೆಯನ್ನು ಆರಂಭದ ದಿನದಿಂದಲೇ ಶುರು ಮಾಡಿದ್ದೇವೆ. ಕೊರೊನಾದಿಂದ ಎರಡು ವರ್ಷ ಭೌತಿಕ ತರಗತಿ ಸರಿಯಾಗಿ ನಡೆದಿರಲಿಲ್ಲ. ಆನ್‌ಲೈನ್‌ ಹಾಗೂ ಭೌತಿಕ ತರಗತಿ ಎರಡೂ ನಡೆದಿತ್ತು. ವಿದ್ಯಾರ್ಥಿಗಳನ್ನು ಆರಂಭದ ದಿನದಿಂದಲೇ ಪರೀಕ್ಷೆಗೆ ಸಜ್ಜುಗೊಳಿಸುವ ನಿಟ್ಟಿನಲ್ಲಿ ವಿಷಯ ತಜ್ಞರಿಗೆ ಸ್ಪಷ್ಟ ನಿರ್ದೇಶನವನ್ನು ನೀಡಿದ್ದೇವೆ. ವಿಷಯ ತಜ್ಞರಿಗೆ ತರಬೇತಿಯನ್ನು ನೀಡಲಾಗಿದೆ. ಆಯಾ ಕಾಲೇಜುಗಳಲ್ಲಿ ಇರುವ ವಿಷಯ ತಜ್ಞರ ವಿಶೇಷ ತರಗತಿಗಳನ್ನು ನಡೆಸಲಾಗುತ್ತಿದೆ. ವಿದ್ಯಾರ್ಥಿಗಳ ವೈಯಕ್ತಿಕ ಫ‌ಲಿತಾಂಶ ಹೆಚ್ಚಳದ ಜತೆಗೆ ಕಾಲೇಜಿನ ಫ‌ಲಿತಾಂಶವನ್ನು ಹೆಚ್ಚಿಸಿ, ಆ ಮೂಲಕ ಜಿಲ್ಲೆಯ ಫ‌ಲಿತಾಂಶ ಹೆಚ್ಚಿಸಲು ಕ್ರಮ ವಹಿಸುತ್ತಿದ್ದೇವೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಅರ್ಧವಾರ್ಷಿಕ ಪರೀಕ್ಷೆ
ದ್ವಿತೀಯ ಪಿಯು ಅರ್ಧವಾರ್ಷಿಕ ಪರೀಕ್ಷೆ ಈಗ ನಡೆಯುತ್ತಿದ್ದು, ಅ.29ಕ್ಕೆ ಪೂರ್ಣಗೊಳ್ಳಲಿದೆ. ಪ್ರತಿ ವರ್ಷ ಮಧ್ಯವಾರ್ಷಿಕ ಪರೀಕ್ಷೆಯನ್ನು ಕಾಲೇಜಿನಿಂದಲೇ ಅಥವಾ ಪ್ರಾಂಶುಪಾಲರ ಸಂಘದ ಮೂಲಕ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿ ನೀಡಲಾಗುತ್ತಿತ್ತು. ಈ ವರ್ಷ ಮೊದಲ ಬಾರಿಗೆ ಅರ್ಧವಾರ್ಷಿಕ ಪರೀಕ್ಷೆಗೆ ಪ್ರಶ್ನೆ ಪತ್ರಿಕೆಯನ್ನು ಜಿಲ್ಲಾಮಟ್ಟದಲ್ಲಿ ಸಿದ್ಧಪಡಿಸಿ ನೀಡಲಾಗಿದೆ. ಅರ್ಧವಾರ್ಷಿಕ ಪರೀಕ್ಷೆಗೆ ಜಿಲ್ಲೆಯ ಎಲ್ಲ ವಿದ್ಯಾರ್ಥಿಗಳಿಗೂ ಏಕರೂಪದ ಪ್ರಶ್ನೆ ಪತ್ರಿಕೆ ನೀಡಲಾಗಿದೆ. ಇಲಾಖೆಯ ಸೂಚನೆಯಂತೆ ಜಿಲ್ಲಾ ಉಪನಿರ್ದೇಶಕ ಹಂತದಿಂದಲೇ ಇದು ನಡೆದಿದೆ. ಹಾಗೆಯೇ ವಿದ್ಯಾರ್ಥಿಗಳ ಪೂರ್ವ ಸಿದ್ಧತಾ ಪರೀಕ್ಷೆಗೂ ಜಿಲ್ಲಾಮಟ್ಟದಿಂದಲೇ ಪ್ರಶ್ನೆ ಪತ್ರಿಕೆ ನೀಡಲಾಗುತ್ತದೆ. ಇದರಿಂದ ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆಗೆ ಸಜ್ಜಾಗಲು ಅನುಕೂಲವಾಗಲಿದೆ ಎಂದು ಉಡುಪಿಯ ಡಿಡಿಪಿಯು ಮಾರುತಿ ಅವರು ಮಾಹಿತಿ ನೀಡಿದರು.

ಇದನ್ನೂ ಓದಿ : ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ನಿತ್ಯ ಹಾಲು ಉತ್ಪಾದನೆಯಲ್ಲಿ ಲಕ್ಷ ಲೀ. ಇಳಿಕೆ

ಕಾರ್ಯಭಾರ ಹೊಂದಾಣಿಕೆ
ದ್ವಿತೀಯ ಪಿಯು ವಿದ್ಯಾರ್ಥಿಗಳ ಅಧ್ಯಯನಕ್ಕೆ ಅನುಕೂಲ ಆಗುವಂತೆ ಬೋಧನೆಗೆ ಯಾವುದೇ ಸಮಸ್ಯೆಯಾಗಬಾರದು ಎಂಬ ಉದ್ದೇಶದಿಂದ ವಿಷಯವಾರು ಉಪನ್ಯಾಸಕರ ಕಾರ್ಯಭಾರ ಹೊಂದಾಣಿಕೆ ಮಾಡಿದ್ದೇವೆ. ಉಪನ್ಯಾಸಕರ ಕೊರತೆ ಇರುವ ಕಡೆ ಅತಿಥಿ ಉಪನ್ಯಾಸಕರ ನೇಮಕಾತಿಯನ್ನು ಮಾಡಿದ್ದೇವೆ. ಹೀಗಾಗಿ ಪರೀಕ್ಷೆಯ ಸಿದ್ಧತೆಗೆ ಏನೆಲ್ಲ ಕ್ರಮ ಬೇಕು
ಎಲ್ಲವನ್ನು ತೆಗೆದುಕೊಂಡಿದ್ದೇವೆ ಎಂದು ವಿವರಿಸಿದರು.

Advertisement

ಪಠ್ಯ ಕಡಿತ: ಮಾಹಿತಿ ಬಂದಿಲ್ಲ
ಕೊರೊನಾದಿಂದ ಕಳೆದ ವರ್ಷ ಕೆಲವೊಂದು ಪಠ್ಯ ಕಡಿತ ಮಾಡಲಾಗಿತ್ತು. ಇದೇ ಮಾದರಿಯಲ್ಲಿ ಪರೀಕ್ಷೆಗೂ ಕೆಲವೊಂದು ವಿಷಯಗಳನ್ನು ಕೈಬಿಡಲಾಗಿತ್ತು. ಈ ಬಾರಿ ಪಠ್ಯಕಡಿತದ ಯಾವುದೇ ಮಾಹಿತಿ ಬಂದಿಲ್ಲ. ಅಲ್ಲದೆ ಪೂರ್ಣ ಪ್ರಮಾಣದಲ್ಲಿ ಭೌತಿಕ ತರಗತಿಗಳು ನಡೆದಿರುವುದರಿಂದ ಪಠ್ಯ ಕಡಿತ ಮಾಡುವುದು ಸಾಧ್ಯತೆ ಇರುವುದಿಲ್ಲ. ಎಲ್ಲವನ್ನು ವಿದ್ಯಾರ್ಥಿಗಳು ಸಮಗ್ರವಾಗಿ ಓದಬೇಕಾಗುತ್ತದೆ. ಅದೇ ರೀತಿಯಲ್ಲಿ ಉಪನ್ಯಾಸಕರಿಗೆ ನಿರ್ದೇಶನವನ್ನು ನೀಡಿದ್ದೇವೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next