Advertisement

ಪಿಎಸ್‌ಐ ಪರೀಕ್ಷೆ ಬಗೆದಷ್ಟು ಅಕ್ರಮ

05:13 PM Apr 23, 2022 | Team Udayavani |

ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮ  ಎಲ್ಲರ ನಿದ್ದೆಗೆಡಿಸಿದೆ. ಬಂಧನದ ಸರದಿಯೂ ಜೋರಾಗಿದೆ. ಸಿಐಡಿ ಅಧಿಕಾರಿಗಳು ಬಗೆದಷ್ಟು ಆಳ ಗೋಚರಿಸುತ್ತಿದೆ. ಕಾಂಗ್ರೆಸ್‌-ಬಿಜೆಪಿ ಎರಡೂ ಪಕ್ಷಗಳಿಗೆ ಉರುಳಾಗುವ ಸಾಧ್ಯತೆ ಇದೆ. ಅಕ್ರಮ ನಡೆದಿದ್ದು ಹೇಗೆ, ಭಾಗಿಯಾಗಿದ್ದು ಯಾರು, ತನಿಖೆ ಹಾದಿ ಹೇಗೆ ಸಾಗಿದೆ ಎಂಬುದರ ಮಾಹಿತಿ ಇಲ್ಲಿದೆ.

Advertisement

ಅಕ್ರಮಕ್ಕೆ ಕಲಬುರಗಿಯೇ ಮೂಲ!
2014ರಲ್ಲೂ ಪೊಲೀಸ್‌ ಪೇದೆ ನೇಮಕಾತಿ ಪರೀಕ್ಷೆ ಪ್ರಶ್ನೆ ಪತ್ರಿಕೆ ಬಹಿರಂಗಗೊಂಡಾಗ ಕೇಂದ್ರ ಸ್ಥಾನ ಕಲಬುರಗಿಯೇ ಆಗಿತ್ತು. ಆಗ ಇಡೀ ಪರೀಕ್ಷೆಯೇ ರದ್ದಾಗಿ ತನಿಖೆ ನಡೆಯಿತು. ಬಿಜೆಪಿ ಮುಖಂಡ ಮಲ್ಕೇಂದ್ರಗೌಡ, ಹೈಕೋರ್ಟ್‌ ನ್ಯಾಯವಾದಿ ಸಿಂದಗಿಯ ಎನ್‌.ಎಸ್‌.ಹಿರೇಮಠ, ಧಾರವಾಡದ ಶಿಕ್ಷಕ ಅಶೋಕ ವಡ್ಡರ್‌ ಸೇರಿ 20 ಜನರ ಬಂಧನವಾಗಿತ್ತು. 2021ರ ಅಕ್ಟೋಬರ್‌ನಲ್ಲಿ ನಡೆದ 545 ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮ ಕೂಡ ಕಲಬುರಗಿ ನಗರದ ಜ್ಞಾನಜ್ಯೋತಿ ಆಂಗ್ಲ ಶಾಲೆ ಪರೀಕ್ಷಾ ಕೇಂದ್ರದಲ್ಲೇ ನಡೆದಿದೆ.

ಬಯಲಿಗೆ ಬಂದದ್ದು ಹೇಗೆ?
ಪಿಎಸ್‌ಐ ಪರೀಕ್ಷೆ ಅಕ್ರಮ ಬಯಲಿಗೆ ಬಂದಿದ್ದೇ ರೋಚಕ. ಈ ಹಿಂದೆ ನಡೆದಿದೆ ಎನ್ನಲಾದ ಪರೀಕ್ಷೆಗಳಲ್ಲಿ ಒಎಂಆರ್‌ ಶೀಟ್‌ ಹಾಗೂ ಟಿಕ್‌ ಹಾಕಲಾಗಿದ್ದ ಪೆನ್ನನ್ನು ಅಕ್ರಮ ನಡೆಸುವರು ಅಭ್ಯರ್ಥಿಗಳಿಂದ ಪಡೆಯುತ್ತಿದ್ದರು. ಹೀಗಾಗಿ ಎಲ್ಲೂ ಬಯಲಿಗೆ ಬರಲು ಅವಕಾಶವೇ ಇರುತ್ತಿರಲಿಲ್ಲ. ಅಭ್ಯರ್ಥಿಗಳು ಪರೀಕ್ಷೆ ಬರೆದು ಒಎಂಆರ್‌ ಶೀಟ್‌ ಮೇಲ್ವಿಚಾರಕರ ಕೈಗೆ ಕೊಟ್ಟು ಹೋಗುವಾಗ ಅವರ ಬಳಿ ಒಂದು ಕಾರ್ಬನ್‌ ಪ್ರತಿ ಇರುತ್ತದೆ. ಅಭ್ಯರ್ಥಿಗಳು ಹೋದ ಅನಂತರ ಮೇಲ್ವಿ ಚಾರಕರು ಉಳಿದ ಉತ್ತರಗಳನ್ನು ಟಿಕ್‌ ಮಾಡುತ್ತಾರೆ. ಆದರೆ ಅದು ಅಭ್ಯರ್ಥಿ ಬಳಿ ಇರುವ ಒಎಂಆರ್‌ ಶೀಟ್‌ನಲ್ಲಿ ಗೋಚರ ವಾಗುವುದಿಲ್ಲ. ಈ ವ್ಯತ್ಯಾಸ ಹೊರ ಜಗತ್ತಿಗೆ ಗೊತ್ತಾಗ ಬಾರದೆಂದೇ ಅಕ್ರಮದ ರೂವಾರಿಗಳು ಅಭ್ಯರ್ಥಿ ಬಳಿಯ ಕಾರ್ಬನ್‌ ಶೀಟ್‌ನ್ನು ಪರೀಕ್ಷೆ ಮುಗಿಯು ತ್ತಿದ್ದಂತೆಯೇ ಕಸಿದುಕೊಂಡು ತಮ್ಮ ಬಳಿಯೇ ಇಟ್ಟು ಕೊಳ್ಳುತ್ತಾರೆ. ಆದರೆ ಸೇಡಂನ ವೀರೇಶ ಎನ್ನುವ ಅಭ್ಯರ್ಥಿ ಫಿಸಿಕಲ್‌ ಟೆಸ್ಟಿಂಗ್‌ ಸಮಯದಲ್ಲಿ ಈ ಒಎಂಆರ್‌ ಶೀಟ್‌ನ ಕಾರ್ಬನ್‌ ಪ್ರತಿ ತೆಗೆದುಕೊಂಡು ಬಂದಿದ್ದ. ಇದನ್ನು ಗಮನಿಸಿದ ಅಭ್ಯರ್ಥಿಯೊಬ್ಬರು, ಅದರ ಫೋಟೋ ತೆಗೆದುಕೊಂಡು ಕೇವಲ ಇಪ್ಪತ್ತೇ ಪ್ರಶ್ನೆಗೆ ಉತ್ತರಿಸಿದ ವ್ಯಕ್ತಿ ಅದು ಹೇಗೆ ಆಯ್ಕೆ ಆದ ಎಂದುಕೊಂಡು ಗೃಹ ಸಚಿವರನ್ನು ಭೇಟಿಯಾಗಿ ದೂರು ಸಲ್ಲಿಸಿದ್ದರು. ಆಗ ಅಕ್ರಮ ಬಯಲಿಗೆ ಬಂದಿದೆ.

ಅಕ್ರಮ ನಡೆಯುತ್ತಿದ್ದದ್ದು ಹೇಗೆ?
ಅಭ್ಯರ್ಥಿಗಳು ತಮಗೆ ಗೊತ್ತಿದ್ದ ಪ್ರಶ್ನೆಗಳಿಗೆ ಮಾತ್ರ ಟಿಕ್‌ ಮಾಡುತ್ತಿದ್ದರು. ಎಲ್ಲ ಅಭ್ಯರ್ಥಿಗಳು ಒಎಂಆರ್‌ ಶೀಟ್‌ ಕೊಟ್ಟು ಹೋದ ಅನಂತರ ಹಣ ಕೊಟ್ಟ ನಿರ್ದಿಷ್ಟ ಅಭ್ಯರ್ಥಿಗಳ ಒಎಂಆರ್‌ ಶೀಟ್‌ಗಳಲ್ಲಿ ಸರಿ ಉತ್ತರಗಳನ್ನು ಪರೀಕ್ಷಾ ಮೇಲ್ವಿಚಾರಕರೇ ಆಯ್ಕೆ ಮಾಡುತ್ತಿದ್ದರು. ಈ ರೀತಿ ಸರಿಯಾದ ಉತ್ತರ ಬರೆಯುವುದಕ್ಕಾಗಿ ಅಲ್ಲೂ ವ್ಯವಸ್ಥಿತ ಅಕ್ರಮ ನಡೆಸಿದ್ದು, ಪರೀಕ್ಷೆ ಆರಂಭಕ್ಕೆ 15 ನಿಮಿಷ ಮೊದಲೇ ಉತ್ತರದ ಚೀಟಿ ಪರೀಕ್ಷಾ ಮೇಲ್ವಿಚಾರಕರ ಕೈಸೇರುತ್ತಿತ್ತು. ಅದರ ಪ್ರಕಾರ ಒಎಂಆರ್‌ ಶೀಟ್‌ನಲ್ಲಿ ಉತ್ತರಗಳನ್ನು ಮೇಲ್ವಿಚಾರಕರೇ ಆಯ್ಕೆ ಮಾಡುತ್ತಿದ್ದರು. ಅಂದರೆ ಇಲ್ಲಿ ಪ್ರಶ್ನೆ ಪತ್ರಿಕೆ ಅರ್ಧ ಗಂಟೆ ಮುಂಚೆ ಒಡೆದು, ಅದರ ಪ್ರಶ್ನೆಗಳನ್ನು ನುರಿತರೊಬ್ಬರಿಗೆ ಕಳುಹಿಸಿ 15 ನಿಮಿಷದಲ್ಲಿ ಎಲ್ಲ ಪ್ರಶ್ನೆಗಳಿಗೆ ಉತ್ತರ ಪಡೆಯುವ ತಂತ್ರಗಾರಿಕೆ ರೂಪಿಸಲಾಗುತ್ತಿತ್ತು. ಒಟ್ಟಾರೆ ಈ ಅಕ್ರಮದಲ್ಲಿ ಪರೀಕ್ಷಾ ಕೇಂದ್ರದ ಮುಖ್ಯಸ್ಥರು, ಮೇಲ್ವಿಚಾರಕರು ಹಾಗೂ ಇತರರ ಸಹಾಯದಿಂದ ಅಚ್ಚುಕಟ್ಟಾಗಿ ನಡೆದಿತ್ತು ಎನ್ನಲಾಗಿದೆ.

ಗೆಳೆಯ ಕೊಟ್ಟ ಸುಳಿವೇನು?
ವೀರೇಶ ಎನ್ನುವ ಅಭ್ಯರ್ಥಿಗೆ ಆತನ ಗೆಳೆಯನೇ ಪರೀಕ್ಷೆ ಅಕ್ರಮ ನಡೆಯುವ ಕುರಿತಾಗಿ ಕಿಂಗ್‌ಪಿನ್‌ ಅನ್ನು ಭೇಟಿ ಮಾಡಿಸಿ ವ್ಯಾಪಾರ ಕುದುರಿಸಿದ್ದ. ಆದರೆ ಈ ನಡುವೆ ಗೆಳೆಯಾ, ನಾನು ಹೇಳಿದ್ದಕ್ಕೆ ನೀನು ನೌಕರಿ ಪಡೆದಿದ್ದೀಯಾ. ಹೀಗಾಗಿ ನನಗೂ ಐದು ಲಕ್ಷ ರೂ. ಕೊಡು ಎಂದು ಕೇಳಿದ್ದ. ಅದಕ್ಕೆ ವೀರೇಶ ಹಣ ಕೊಡಲಿಕ್ಕಾಗುವುದಿಲ್ಲ ಎಂದು ತಿಳಿಸಿದ್ದ. ಇದರಿಂದ ಆತನ ಗೆಳೆಯ, ಹೀಗಾ ದರೆ ಸರಿಯಾಗುವುದಿಲ್ಲ. ಇದಕ್ಕೆ ಒಂದು ಗತಿ ಕಾಣಿಸಬೇಕೆಂದು ತಿಳಿದು, ಒಎಂಆರ್‌ ಶೀಟ್‌ನ ಫೋಟೋ ತೆಗೆದು ಬೇರೆಯವರಿಗೆ ಕಳುಹಿಸಿದ್ದ. ಇದು ಒಬ್ಬ ಅಭ್ಯರ್ಥಿಯಿಂದ ಮತ್ತೂಂದು ಅಭ್ಯರ್ಥಿಗೆ ತಲುಪಿ, ಕೊನೆಗೆ ಗೃಹ ಸಚಿವರಿಗೆ ಸಲ್ಲಿಸಲಾಗಿತ್ತು.

Advertisement

ಮೂರು ಹಂತಗಳಲ್ಲಿ ಅಕ್ರಮ!
ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮ ಮೂರು ಹಂತಗಳಲ್ಲಿ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಮೊದಲನೆಯದಾಗಿ ಒಎಂಆರ್‌ ಶೀಟ್‌ನಲ್ಲಿ ಟಿಕ್‌ ಹಾಕುವುದು, ಎರಡನೆಯದ್ದು ಬ್ಲೂಟೂತ್‌ ಮೂಲಕ ಉತ್ತರಿಸಿರುವುದು ಹಾಗೂ ಪರೀಕ್ಷಾ ನಿರ್ವಹಣ ಘಟಕದಲ್ಲಿ ಆಯ್ಕೆ ಪಟ್ಟಿಯಲ್ಲಿ ಬರುವಂತೆ ಮಾಡುವುದು. ಮೂರು ಹಂತಗಳಲ್ಲಿ ತಲಾ ಶೇ.10ರಷ್ಟು ಅಕ್ರಮಗಳು ನಡೆಯುತ್ತವೆ ಎನ್ನಲಾಗಿದೆ. ಕಲಬುರಗಿಯ ಜ್ಞಾನಜ್ಯೋತಿ ಶಾಲೆ ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ನಡೆದಿರುವಂತೆ ಬೆಂಗಳೂರಿನ ಎರಡು ಪರೀಕ್ಷಾ ಕೇಂದ್ರಗಳಲ್ಲೂ ಅಕ್ರಮ ನಡೆದಿದೆ ಎನ್ನಲಾಗುತ್ತಿದೆ. ಕಲಬುರಗಿಯ ಜ್ಞಾನ ಜ್ಯೋತಿ ಪರೀûಾ ಕೇಂದ್ರದಲ್ಲಿ ಅಕ್ರಮ ನಡೆಸಲು ತಲಾ ಅಭ್ಯರ್ಥಿಯಿಂದ 40ರಿಂದ 60 ಲಕ್ಷ ರೂ. ವಸೂಲಿ ಮಾಡಲಾಗಿದೆ ಎಂಬ ಆರೋಪ ಇದೆ.

ಮಲ್ಲಿಕಾರ್ಜುನ ಖರ್ಗೆ
ಅತ್ಯಾಪ್ತನೂ ಭಾಗಿ?
ಪರೀಕ್ಷೆ ಅಕ್ರಮದಲ್ಲಿ ಕಾಂಗ್ರೆಸ್‌-ಬಿಜೆಪಿ ಮುಖಂಡರೇ ಭಾಗಿಯಾಗಿರುವುದು ಮೇಲ್ನೋಟಕ್ಕೆ ಗೋಚರಿಸುತ್ತಿದೆ. ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ತಲೆಮರೆಸಿಕೊಂಡಿದ್ದು, ಕಾಂಗ್ರೆಸ್‌ ಶಾಸಕ ಎಂ.ವೈ.ಪಾಟೀಲ್‌ ಅವರ ಗನ್‌ಮ್ಯಾನ್‌, ಮಲ್ಲಿಕಾರ್ಜುನ ಖರ್ಗೆ ಅತ್ಯಾಪ್ತನೊಬ್ಬನನ್ನು ಬಂಧಿಸಿರುವುದು ಕಾಂಗ್ರೆಸ್‌ ಸುತ್ತ ಅಕ್ರಮ ಸುಳಿದಾಡತೊಡಗಿದೆ. ಪ್ರತೀದಿನವೂ ಬಂಧಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದಲ್ಲದೇ ನೀರಾವರಿ ಇಲಾಖೆ ಎಂಜಿನಿಯರ್‌ವೊಬ್ಬರು ಅಕ್ರಮಕ್ಕೆ ಕೈ ಜೋಡಿಸಿದ್ದು ಅಧಿಕಾರಿ ಗಳು ಸಹ ಇದರಲ್ಲಿ ಭಾಗಿಯಾಗಿರುವುದು ಪುಷ್ಟಿ ನೀಡಿದೆ. ಕಲಬುರಗಿ ಜಿಲ್ಲೆಯಲ್ಲೇ ಕಾಂಗ್ರೆಸ್‌ ಮುಖಂಡನೊಬ್ಬ ಕಳೆದ ನಾಲ್ಕೈದು ವರ್ಷಗಳಿಂದ ಪರೀಕ್ಷೆ ಗಳಲ್ಲಿ ಅಕ್ರಮ ನಡೆಸಿ ಕನಿಷ್ಠ 200 ಕ್ಕೂ ಹೆಚ್ಚು ಗ್ರೇಡ್‌-1 ಅಧಿಕಾರಿಗಳಿಂದ ಹಿಡಿದು ಎಫ್ಡಿಸಿ, ಶಿಕ್ಷಕ, ಪೇದೆ ಹೀಗೆ ಎಲ್ಲ ಹಂತದ ನೌಕರಿಗಳನ್ನು ಮಾಡಿಸಿದ್ದಾನೆ ಎನ್ನುವ ಆರೋಪವೂ ಇದೆ.

ಬಿಜೆಪಿ ನಾಯಕಿ ದಿವ್ಯಾ ಪಾತ್ರವೇನು?
ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣ ನಡೆದ ಕಲಬುರಗಿಯ ಜ್ಞಾನ ಜ್ಯೋತಿ ಶಾಲಾ ಪರೀûಾ ಕೇಂದ್ರ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಒಡೆತನದ್ದು. ಪರೀಕ್ಷೆ ನಡೆದ ದಿನ ಶಾಲಾ ಕೇಂದ್ರದಲ್ಲಿದ್ದು, ಎಲ್ಲವನ್ನು ಮುಂದೆ ನಿಂತು ನಿಭಾಯಿಸಿದ್ದಾರೆ ಎನ್ನುವ ಆರೋಪವಿದೆ. ಇದೇ ಕಾರಣಕ್ಕೆ ಶಾಲೆಯ ಮೂವರು ಪರೀûಾ ಮೇಲ್ವಿಚಾರಕರನ್ನು ಸಿಐಡಿ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಆದರೆ ಶಾಲೆ ಅಧ್ಯಕ್ಷೆ ದಿವ್ಯಾ ಹಾಗರಗಿ ನಾಪತ್ತೆಯಾಗಿದ್ದಾರೆ. ಅವರ ಮೊಬೈಲ್‌ ಕೂಡ ಸ್ವಿಚ್‌xಆಫ್‌ ಆಗಿದ್ದು ಮತ್ತಷ್ಟು ಅನುಮಾನಗಳಿಗೆ ಕಾರಣವಾಗಿದೆ. ದಿವ್ಯಾ ಹಾಗರಗಿ ಮಾತ್ರವಲ್ಲದೇ ಜ್ಞಾನ ಜ್ಯೋತಿ ಶಾಲೆಯ ಮುಖ್ಯೋಪಾಧ್ಯಾಯ, ಇಬ್ಬರು ಶಿಕ್ಷಕಿಯರೂ ಸಹ ನಾಪತ್ತೆಯಾಗಿದ್ದಾರೆ. ಜತೆಗೆ ನೀರಾವರಿ ಇಲಾಖೆ ಎಂಜಿನಿಯರೊಬ್ಬರು ಕೂಡ ಅಕ್ರಮದಲ್ಲಿ ಭಾಗಿಯಾಗಿದ್ದು, ಅವರು ಸಹ ನಾಪತ್ತೆಯಾಗಿದ್ದಾರೆ.

ಪರೀಕ್ಷೆ ಪದ್ದತಿ ಬದಲಿಗೆ ಕೂಗು
545 ಪಿಎಸ್‌ಐ ಹುದ್ದೆಗಳ ನೇಮಕಾತಿಗೆ ಬರೆದ ಅಭ್ಯರ್ಥಿಗಳೆಲ್ಲರದೂ ಪರೀಕ್ಷೆ ಬರೆಯುವ ಪದ್ಧತಿ ಬದಲಾಗಲಿ ಹಾಗೂ ಮರು ಪರೀಕ್ಷೆ ನಡೆಯಲಿ ಎಂಬುದೇ ಒಕ್ಕೊರಲಿನ ಆಗ್ರಹ. ಎಲ್ಲೂ ಅಕ್ರಮ ಮಾಡಿರುವ ನಿಟ್ಟಿನಲ್ಲಿ ಅಂದರೆ ಕಂಪ್ಯೂಟರೀಕರಣ ಹಾಗೂ ಆನ್‌ಲೈನ್‌ ಪರೀಕ್ಷೆ ನಡೆಯುವಂತೆ ಆಗಬೇಕೆಂದಿ ದ್ದಾರೆ. ಪಿಎಸ್‌ಐ ಹುದ್ದೆಗಳ ಪರೀಕ್ಷೆ ಬರೆದ ಅಭ್ಯರ್ಥಿಗಳು ತಾವೇ ವೆಬ್‌ ಚಾನೆಲ್‌ ರೂಪಿಸಿದ್ದು, ಎಲ್ಲವನ್ನು ದಾಖಲಿಸಿ ಸರಕಾರವನ್ನುಬಡಿದೆ ಬ್ಬಿಸುತ್ತಿ ದ್ದಾರೆ.

ತನಿಖೆಗೆ ಪ್ರಭು ಚವ್ಹಾಣ್‌ ಪತ್ರ ಬರೆದಿದ್ದರು
ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್‌ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಕುರಿತಾಗಿ ದೂರು ಬಂದಿವೆ. ಹೀಗಾಗಿ ತನಿಖೆ ನಡೆಸುವಂತೆ ಸಿಎಂ ಹಾಗೂ ಗೃಹ ಸಚಿವರಿಗೆ ಪತ್ರ ಬರೆದಿರುವುದು ಕೂಡ ಸಂಚಲನ ಮೂಡಿಸಿತ್ತು. ಆಡಳಿತಾರೂಢ ಸಚಿವರೇ ಸರಕಾರಕ್ಕೆ ಪತ್ರ ಬರೆದಿರುವುದು ಎಷ್ಟರ ಮಟ್ಟಿಗೆ ಸಮಂಜಸ ಎಂಬ ಚರ್ಚೆ ಸಹ ಜೋರಾಗಿ ನಡೆದಿತ್ತು.

ಪೊಲೀಸ್‌ ಸಂಬಂಧಿಕರೇ ಹೆಚ್ಚು
ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ಪಾಲ್ಗೊಂಡ ಹೆಚ್ಚಿನ ಅಭ್ಯರ್ಥಿಗಳು ಪೊಲೀಸರ ಮಕ್ಕಳು ಹಾಗೂ ಸಂಬಂಧಿಕರೇ ಎಂಬುದು ಗಮನಾರ್ಹ. ಈ ರೀತಿ ಈ ಅಕ್ರಮದಲ್ಲಿ ಮೊದಲು ಸಿಕ್ಕವನೇ ಸೇಡಂನ ವೀರೇಶ. ಈತ ಕಲಬುರಗಿಯ ಎಎಸ್‌ಐನ ಪುತ್ರನಾಗಿದ್ದಾನೆ. ಇವನಷ್ಟೇ ಅಲ್ಲ, ಈ ಅಕ್ರಮದಲ್ಲಿ ಭಾಗಿಯಾದ ಅಭ್ಯರ್ಥಿಗಳಲ್ಲಿ ಹೆಚ್ಚಿನವರು ಪೊಲೀಸರ ಸಂಬಂಧಿ ಕರೇ ಆಗಿದ್ದಾರೆ.

ಎಂಜಿನಿಯರ್‌-
ಎಫ್ ಡಿಸಿಯಲ್ಲೂ ಅಕ್ರಮ?
ಈಚೆಗೆ ನಡೆದ ಲೋಕೋಪಯೋಗಿ, ವಿವಿಧ ಇಲಾಖೆಗಳಲ್ಲಿನ ಎಂಜಿನಿಯರ್‌ ನೇಮಕಾತಿ ಹಾಗೂ ಎಫ್ ಡಿಸಿ ನೇಮಕಾತಿ ಸೇರಿದಂತೆ ಇತರ ನೇಮಕಾತಿಗಳ ಪರೀಕ್ಷೆಯಲ್ಲೂ ಅಕ್ರಮದ ವಾಸನೆ ಕಂಡು ಬಂದಿದೆ. ಇದಕ್ಕೆ ಒಂದೇ ತಾಲೂಕಿನ ಅನೇಕರು ನೇಮಕ ಹೊಂದಿರುವುದು ಜತೆಗೆ ನೌಕರರ ಮಕ್ಕಳೇ ಆಯ್ಕೆಯಾಗಿರುವುದು ಪುಷ್ಟಿ ನೀಡುವಂತಿದೆ. ಎರಡು ವರ್ಷದ ಹಿಂದೆ ನಡೆದ ತಹಶೀಲ್ದಾರ್‌-ಡಿಎಸ್ಪಿ ಹುದ್ದೆಗಳ ನೇಮಕಾತಿಯಲ್ಲೂ ಅಕ್ರಮ ನಡೆದಿರುವ ಆರೋಪ ಕೇಳಿ ಬಂದಿದೆ.

ಹಣಮಂತರಾವ ಭೈರಾಮಡಗಿ

Advertisement

Udayavani is now on Telegram. Click here to join our channel and stay updated with the latest news.

Next