ಬೆಂಗಳೂರು : ಪಿಎಸ್ ಐ ನೇಮಕ ಹಗರಣ ಈಗ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಚುನಾವಣೆ ಹತ್ತಿರವಾಗುತ್ತಿದ್ದಂತೆ ಬಿಜೆಪಿ- ಕಾಂಗ್ರೆಸ್ ಮಧ್ಯೆ ತೀವ್ರ ಹಣಾಹಣಿಗೆ ಅವಕಾಶ ನೀಡುವ ಸಾಧ್ಯತೆ ಇದೆ.
ರಾಜ್ಯದಲ್ಲಿ ಈ ಹಿಂದೆ ಬಿಜೆಪಿ ಸರಕಾರ ಅಧಿಕಾರದಲ್ಲಿ ಇದ್ದಾಗ ಅಕ್ರಮ ಗಣಿಗಾರಿಕೆ ಪ್ರಕರಣ ಸರಕಾರದ ವಿರುದ್ಧ ಹೋರಾಟ ನಡೆಸುವುದಕ್ಜೆ ಕಾಂಗ್ರೆಸ್ ಗೆ ಮಹತ್ವದ ಅಸ್ತ್ರವಾಗಿ ಸಿಕ್ಕಿತ್ತು. ಆದರೆ ಈಗ ಅಂಥ ವಾತಾವರಣವಿಲ್ಲ. ಕಾಂಗ್ರೆಸ್ ನ ಓಲೈಕೆ ನೀತಿ ವಿರುದ್ಧ ಬಿಜೆಪಿ ದಿನಕ್ಕೊಂದು ಅಸ್ತ್ರ ಪ್ರಯೋಗ ಮಾಡುತ್ತಿದೆ. ಇದರಿಂದ ಕಂಗಾಲಾಗಿದ್ದ ಕಾಂಗ್ರೆಸ್ ಗೆ 40 % ಕಮಿಷನ್ ವಿವಾದ ತುಸು ಆಸರೆ ನೀಡಿತ್ತು.
ಈ ನಡುವದ ಬಹಿರಂಗಗೊಂಡ ಪಿಎಸ್ಐ ನೇಮಕ ಹಗರಣ ಕಾಂಗ್ರೆಸ್ ಗೆ ಇನ್ನೊಂದು ಅಸ್ತ್ರ ನೀಡಿತ್ತಾದರೂ ಕಾಂಗ್ರೆಸ್ ನ ಕೆಲ ಮುಖಂಡರಿಗೆ ಹಗರಣದ ಕಿಂಗ್ ಪಿನ್ ಗಳ ಜತೆ ನಂಟು ಇರುವುದು ಈಗ ಇರಿಸುಮುರಿಸು ಉಂಟು ಮಾಡಿದೆ.
ಈ ಹಗರಣದ ಬಗ್ಗೆ ಗಟ್ಟಿ ಧ್ವನಿಯಿಂದ ಮಾತನಾಡಿದ್ದು ಕಾಂಗ್ರೆಸ್ ಶಾಸಕ ಮಾಜಿ ಸಚಿವ ಪ್ರಿಯಾಂಕ ಖರ್ಗೆ. ಹಗರಣದ ಆಳ ಅಗಲದ ಬಗ್ಗೆ ದಿನಕ್ಕೊಂದು ಮಾಹಿತಿ ನೀಡಿದ್ದರು. ಆದರೆ ಈ ಹಗರಣದ ಕಿಂಗ್ ಪಿನ್ ಎನ್ನಲಾದ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಾನಂದ ಪಾಟೀಲ್ ಹಾಗೂ ಅವರ ಸೋದರ ಆರ್ ಡಿ ಪಾಟೀಲ್ ಖರ್ಗೆ ಆಪ್ತರು ಎಂದು ಬಿಜೆಪಿ ಆರೋಪಿಸುತ್ತಿದೆ. ಈ ಕಾರಣಕ್ಕಾಗಿ ಪ್ರಿಯಾಂಕ ಖರ್ಗೆ ಅವರನ್ನು ವಿಚಾರಣೆಗೆ ಒಳಪಡಿಸುವಂತೆ ಸಚಿವ ಸುನೀಲ್ ಕುಮಾರ್ ಸೇರಿದಂತೆ ಬಿಜೆಪಿ ನಾಯಕರು ಹೇರಿದ ಒತ್ತಡದ ಫಲವಾಗಿ ಈಗ ಖರ್ಗೆ ಅವರಿಗೆ ನೋಟಿಸ್ ನೀಡಲಾಗಿದೆ.
ಹಗರಣವನ್ನು ಬಯಲು ಮಾಡಿದರವನ್ನೇ ವಿಚಾರಣೆಗೆ ಒಳಪಡಿಸುವುದು ಎಷ್ಟು ಸರಿ ಎಂಬುದು ಕಾಂಗ್ರೆಸ್ ಪ್ರಶ್ನೆಯಾಗಿದ್ದು, ಈಗ ದಿನಕ್ಕೊಂದು ತಿರುವು ಸಿಗುತ್ತಿದೆ.