ಬೆಂಗಳೂರು: ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಮತ್ತೂಮ್ಮೆ ವಿಚಾರಣೆಗೆ ಹಾಜರಾಗಬೇಕಿದ್ದ ಎಡಿಜಿಪಿ ಅಮೃತ್‌ಪೌಲ್ ಗೈರಾಗಿದ್ದಾರೆ.
ಗುರುವಾರ ಸುಮಾರು ಐದು ಗಂಟೆಗಳ ವಿಚಾರಣೆ ನಡೆಸಿದ್ದ ಸಿಐಡಿ ಶುಕ್ರವಾರಮತ್ತೂಮ್ಮೆ ವಿಚಾರಣೆಗೆ ಹಾಜರಾಗಲು ಸೂಚಿಸಿತ್ತು. ಆದರೆ, ವೈಯಕ್ತಿಕ ಕಾರಣ ನೀಡಿ ಅಮೃತ್‌ಪೌಲ್ ವಿಚಾರಣೆಗೆ ಹಾಜರಾಗಿದ್ದಾರೆ.
ಹೀಗಾಗಿ ಸೋಮವಾರ ಮತ್ತೂಮ್ಮೆ ವಿಚಾರಣೆಗೆ ಹಾಜರಾಗಬೇಕು ಎಂದು ಸಿಐಡಿ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಅಮೃತ್‌ಪೌಲ್‌ಗೆ ಬಂಧನ ಭೀತಿ ಎದುರಾಗಿದೆ ಎಂದು ಹೇಳಲಾಗಿದೆ.
ಮುಳುವಾದ ಶಾಂತಕುಮಾರ್ ಹೇಳಿಕೆ
ಪ್ರಕರಣದ ಕಿಂಗ್‌ಪಿನ್ ನೇಮಕಾತಿ ವಿಭಾಗದ ಡಿವೈಎಸ್ಪಿ ಶಾಂತಕುಮಾರ್ ವಿಚಾರಣೆ ಸಂದರ್ಭದಲ್ಲಿ ತನ್ನ ಅಕ್ರಮದ ಹಣದಲ್ಲಿ ಅಮೃತ್‌ಪೌಲ್‌ಗೂ ಪಾಲು ನೀಡುತ್ತಿದ್ದೆ. ಜತೆಗೆ ನೇಮಕಾತಿ ಅಕ್ರಮದ ಪ್ರತಿಯೊಂದು ಮಾಹಿತಿಯನ್ನು ನೀಡಲಾಗಿತ್ತು. ಅವರ ಸೂಚನೆ, ಸಲಹೆ ಮೇರೆಗೆ ಎಲ್ಲವೂ ನಡೆಯುತ್ತಿತ್ತು. ಇದೇ ವೇಳೆ ಅಮೃತ್‌ಪೌಲ್‌ಗೆ ಹಣ ವರ್ಗಾವಣೆಯಾಗಿದೆ ಎನ್ನಲಾದ ಬ್ಯಾಂಕ್ ಮಾಹಿತಿ ಸೇರಿ ವಿವಿಧ ಸಾಕ್ಷ್ಯಗಳನ್ನು ಸಂಗ್ರಹಿಸಿರುವ ಸಿಐಡಿ, ಅವುಗಳ ಆಧಾರದ ಮೇಲೆ ವಿಚಾರಣೆ ಮುಂದುವರಿಸಿದೆ. ಅಗತ್ಯ ಬಿದ್ದಲ್ಲಿ ಡಿವೈಎಸ್ಪಿ ಶಾಂತಕುಮಾರ್‌ನನ್ನು ಮತ್ತೂಮ್ಮೆ ಪೊಲೀಸ್ ಕಸ್ಟಡಿಗೆ ಪಡೆದುಕೊಂಡು ಅಮೃತ್‌ಪೌಲ್ ಮತ್ತು ಶಾಂತಕುಮಾರ್‌ರ ಮುಖಾಮುಖೀ ವಿಚಾರಣೆ ನಡೆಸಲಾಗುತ್ತದೆ ಎಂದು ಸಿಐಡಿ ಮೂಲಗಳು ತಿಳಿಸಿವೆ.
ಡೀಲ್ ಹಣಕ್ಕಾಗಿ ಶೋಧ
ಪಿಎಸ್‌ಐ ನೇಮಕಾತಿ ಪ್ರಕರಣದಲ್ಲಿ ಸುಮಾರು 300 ಕೋಟಿ ರೂ. ಗೂ ಅಧಿಕ ಡೀಲ್ ನಡೆದಿರುವುದ ಸಿಐಡಿ ತನಿಖೆಯಲ್ಲಿ ಸಾಬೀತಾಗಿದೆ. ಹೀಗಾಗಿ ಹಣ ಯಾರಿಂದ ಯಾರಿಗೆಲ್ಲ ಹೋಗಿದೆ ಎಂಬ ಬಗ್ಗೆ ಶೋಧಿಸಲು ತನಿಖಾ ತಂಡ ಸಿದ್ದತೆ ನಡೆಸಿದೆ. ಈಗಾಗಲೇ ಕೆಲವೊಂದು ಮಾಹಿತಿ ಸಂಗ್ರಹಿಸಿದ್ದು, ಪ್ರಭಾವಿ ರಾಜಕೀಯ ಮುಖಂಡರು, ಪೊಲೀಸ್ ಅಧಿಕಾರಿಗಳು, ಮಧ್ಯವರ್ತಿಗಳಿಗೆ ರವಾನೆಯಾಗಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬೇಕಿದೆ ಎಂದು ಹೇಳಲಾಗಿದೆ.