ಕಲಬುರಗಿ: ಪಿಎಸ್ಐ ನೇಮಕಾತಿಯ ಪರೀಕ್ಷೆಯಲ್ಲಿ ಬಿಜೆಪಿಯ ಅನೇಕರು ಭಾಗಿಯಾಗಿದ್ದರಿಂದ ತಪ್ಪಿತಸ್ಥರೆಲ್ಲರಿಗೂ ಶಿಕ್ಷೆಯಾಗಲು ಪ್ರಕರಣ ಹೈಕೋರ್ಟಿನ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆಯಾಗಬೇಕೆಂದು ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಡಾ. ಶರಣಪ್ರಕಾಶ ಪಾಟೀಲ್ ಆಗ್ರಹಿಸಿದರು.
ಪಕ್ಷದ ಕಚೇರಿಯಲ್ಲಿ ಕರೆಯಲಾದ ಸುದ್ದಿಗೋಷ್ಢಿಯಲ್ಲಿ ಮಾತನಾಡಿದ ಅವರು, ಪರೀಕ್ಷೆ ಅಕ್ರಮದ ರೂವಾರಿ ದಿವ್ಯಾ ಹಾಗರಗಿ ಬಿಜೆಪಿ ನಾಯಕಿಯಾಗಿದ್ದರಿಂದ ಇಲ್ಲಿಯವರೆಗೂ ಬಂಧಿಸುತ್ತಿಲ್ಲ. ತನಿಖೆ ದಾರಿ ತಪ್ಪಿಸುವ ಕಾರ್ಯ ನಡೆಯುತ್ತಿರುವುದರಿಂದ ಹಾಗೂ ಪ್ರಮುಖವಾಗಿ ನೊಂದ ಅಭ್ಯರ್ಥಿಗಳಿಗೆ ನ್ಯಾಯ ದೊರಕುವಂತಾಗಲು ನ್ಯಾಯಮೂರ್ತಿಗಳ ನೇತೃತ್ವದ ತನಿಖೆಯೇ ಪರಿಹಾರವಾಗಿದೆ ಎಂದರು.
ಮೊದಲನೆಯದಾಗಿ ದಿವ್ಯಾ ಹಾಗರಗಿಗೆ ಸೇರಿರುವ ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಗೆ ಪರೀಕ್ಷೆ ಕೇಂದ್ರ ನೀಡುವಲ್ಲಿಯೂ ಲೋಪವಾಗಿದೆ. ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಪರೀಕ್ಷಾ ಕೇಂದ್ರ ನೀಡಲಾಗಿದೆ. ಪರೀಕ್ಷೆ ದಿನದಂದು ಸಿಸಿ ಕ್ಯಾಮರಾ ಅಳಿಸಿ ಹಾಕಲಾಗಿದೆ. ಇದನ್ನೆಲ್ಲ ನೋಡಿದರೆ ಅಕ್ರಮ ವನ್ನು ಅತ್ಯಂತ ವ್ಯವಸ್ಥತೆಯಿಂದ ಮಾಡಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಂಡು ಬರುತ್ತದೆ. ಇದರಲ್ಲಿ ಬಿಜೆಪಿ ಮುಖಂಡರು, ಅಧಿಕಾರಿಗಳೆಲ್ಲರೂ ಭಾಗಿಯಾಗಿದ್ದಾರೆ. ಮೊದಲು ಗೃಹ ಸಚಿವರು ಪರೀಕ್ಷೆಯಲ್ಲಿ ಯಾವುದೇ ಅಕ್ರಮ ಆಗಿಲ್ಲವೆಂದು ಸದನದಲ್ಲಿ ಹೇಳಿದ್ದರು. ಆದರೆ ಮಾಧ್ಯಮಗಳಲ್ಲಿ ವರದಿ ಪ್ರಕಟವಾದ ನಂತರ ಸಿಐಡಿ ವಹಿಸಲಾಗಿದೆ. ಆದರೆ ಸಿಐಡಿ, ಸಿಐಟಿಯು ಗೃಹ ಸಚಿವರ ಅಡಿಯಲ್ಲಿ ಬರುವುದರಿಂದ ನಿಷ್ಪಕ್ಷಪಾತ ತನಿಖೆ ಅನುಮಾನವಾಗಿದೆ. ಏಕೆಂದರೆ ಪಿಎಸ್ಐ ನೇಮಕಾತಿ ಪರೀಕ್ಷೆಅಕ್ರಮದ ರೂವಾರಿ ದಿವ್ಯಾ ಹಾಗರಗಿ ಅವರ ಮನೆಗೆ ಗೃಹ ಸಚಿವರು ಹೋಗಿ ಉಪಹಾರ ಸೇವಿಸಿ ಬಂದಿದ್ದಾರೆ. ಇದನ್ನೆಲ್ಲಾ ನೋಡಿದರೆ ತನಿಖೆಯೂ ಹಾದಿತಪ್ಪುವ ಸಾಧ್ಯತೆಗಳಿವೆ ಆದ್ದರಿಂದ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ಗಳು ಇಲ್ಲವೇ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಉನ್ನತ ಮಟ್ಟದ ತನಿಖೆ ನಡೆಯಬೇಕೆಂಬುದು ಕಾಂಗ್ರೆಸ್ ನ ನಿಲುವಾಗಿದೆ ಎಂದರು.
ಪಿಎಸ್ಐ ಪರೀಕ್ಷೆಯ ಅಕ್ರಮಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕಿಯಾಗಿರುವ ದಿವ್ಯಾ ರಾಜೇಶ ಹಾಗರಗಿ ಅವರನ್ನು ಈ ಕೂಡಲೇ ಬಂಧಿಸದಿದ್ದರೆ ಇದೇ ಏ. 22 ನಗರಕ್ಕೆ ಆಗಮಿಸುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕಾಂಗ್ರೆಸ್ ಪಕ್ಷದಿಂದ ಮುತ್ತಿಗೆ ಹಾಕುವುದಾಗಿ ಪಾಟೀಲ್ ಇದೇ ಸಂದರ್ಭದಲ್ಲಿ ಪ್ರಕಟಿಸಿದರು.
Related Articles
ನಾಚಿಕೆ ಈತನ ಸಂಗತಿ: ದಿವ್ಯಾ ಹಾಗರಗಿ ಭಾರತೀಯ ಜನತಾ ಪಕ್ಷದ ಹಿಂದಿನ ಮಹಿಳಾ ಘಟಕದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರಲ್ಲದೇ ಪ್ರಸಕ್ತವಾಗಿ ಸಂಸದರ ಅಧ್ಯಕ್ಣತೆಯ ದಿಶಾ ಸಮಿತಿ ಸದಸ್ಯರಾಗಿ ಹಾಗೂ ಕರ್ನಾಟಕ ನರ್ಸಿಂಗ್ ಕೌನ್ಸಿಲ್ ಸದಸ್ಯರಾಗಿದ್ದಾರೆ. ಹೀಗಿದ್ದರೂ ಬಿಜೆಪಿ ಮುಖಂಡರು ಹಾಗೂ ಪಕ್ಷಕ್ಕೆ ಏನು ಸಂಬಂಧವಿಲ್ಲ ಎಂದು ಹೇಳುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಶರಣಪ್ರಕಾಶ್ ಪಾಟೀಲ್ ವಾಗ್ದಾಳಿ ನಡೆಸಿದರು.
40% ಸಾಲುತ್ತಿಲ್ಲ: ವಿವಿಧ ಕಾಮಗಾರಿಗಳಲ್ಲಿ 40 ಪರ್ಸೆಂಟೇಜ್ ಸಾಲದಿರುವುದರಿಂದ ಬಿಜೆಪಿ ನಾಯಕರು ಈ ರೀತಿ ಅಕ್ರಮ ಪರೀಕ್ಷೆಗಳ ಮೂಲಕ ಹಣ ಮಾಡುತ್ತಿದ್ದಾರೆ . ಅಷ್ಟೇ ಏಕೆ ದೇವಸ್ಥಾನದ ಕಾಮಗಾರಿಗಳಲ್ಲೂ ನೇರವಾಗಿ ಕಮೀಷನ್ ಪಡೆಯಲಾಗುತ್ತಿದೆ. ದಿಂಗಾಲೇಶ್ವರ ಸ್ವಾಮಿಗಳೇ ನೇರವಾಗಿ ಹೇಳಿದ್ದಾರೆ. ಇದನ್ನೆಲ್ಲ ನೋಡಿದರೆ ಬಿಜೆಪಿ ಸರ್ಕಾರವು ಭ್ರಷ್ಟಾಚಾರದ ಬ್ರಹ್ಮಾಂಡವನ್ನೇ ರೂಪಿಸಿರುವುದು ಎಲ್ಲರಿಗೆ ಮನವರಿಕೆಯಾಗಿದೆ ಎಂದರು.
ಆರ್ ಎಸ್ ಎಸ್ ಬಾಯ್ಬಿಡಲಿ: ಮಾತೆತ್ತಿದರೆ ನೀತಿಪಾಠ ಹೇಳುವ ಹಾಗೂ ಬಿಜೆಪಿ ಪರ ಪ್ರಚಾರ ಮಾಡುವ ಆರ್ ಎಸ್ಎಸ್ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಅದರಲ್ಲೂ ಪಿಎಸ್ಐ ಪರೀಕ್ಷೆಯ ಅಕ್ರಮದ ಬಗ್ಗೆ ಚಕಾರವೆತ್ತದಿರುವುದು ನಿಜಕ್ಕೂ ಆತ್ಮಾವಲೋಕನ ಮಾಡಿಕೊಡುಳ್ಳುವಂತಿದೆ. ಇನ್ನು ಮುಂದೆಯಾದರೂ ಆರ್ ಎಸ್ಎಸ್ ಅಕ್ರಮಗಳ ಬಗ್ಗೆ ಬಾಯಿ ಬಿಡುವ ಮೂಲಕ ತನ್ನ ನೈತಿಕತೆ ಪ್ರದರ್ಶಿಸಲಿ ಎಂದು ಡಾ. ಶರಣಪ್ರಕಾಶ್ ಪಾಟೀಲ್ ಆಗ್ರಹಿಸಿದರು.
ಪರೀಕ್ಷಾ ಪದ್ಧತಿ ಬದಲಾಗಲಿ: ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಈಗ ನಡೆಯುತ್ತಿರುವ ಪರೀಕ್ಷೆ ಪದ್ಧತಿಯು ಬದಲಾಗಬೇಕು. ಓಎಂಆರ್ ಸೀಟು ಬದಲು ಕಂಪ್ಯೂಟರ್ ಕರಣದಲ್ಲಿ ಪರೀಕ್ಷೆ ನಡೆಯುವಂತಾಗಬೇಕು. ವೈದ್ಯಕೀಯ ಪರೀಕ್ಷೆ ನಡೆಯುವ ನಿಟ್ಟಿನಲ್ಲಿ ಈ ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯಬೇಕು. ಹೀಗಾದಲ್ಲಿ ಮಾತ್ರ ಅಕ್ರಮ ತಡೆಯಲು ಸಾಧ್ಯ. ಅದರ ಜೊತೆಗೆ ಪರೀಕ್ಷೆಗಳನ್ನು ಕೆಪಿಎಸ್ಸಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮೂಲಕವೇ ನಡೆಯಬೇಕು. ಒಟ್ಟಾರೆ ಕಂಪ್ಯೂಟರೀಕರಣದಿಂದ ಪರೀಕ್ಷೆ ನಡೆಯಬೇಕು ಎಂದು ಶರಣಪ್ರಕಾಶ್ ಪಾಟೀಲ್ ಆಗ್ರಹಿಸಿದರು.
ಸಿಎಂ ರಾಜೀನಾಮೆ ನೀಡಲಿ: ಪಿಎಸ್ಐ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾದ ಸಮಯದಲ್ಲಿ ಮುಖ್ಯಮಂತ್ರಿಗಳ ಆಗಿರುವ ಬಸವರಾಜ ಬೊಮ್ಮಾಯಿ ಅವರೇ ಗೃಹ ಸಚಿವರಾಗಿದ್ದರು. ಗೃಹ ಸಚಿವರಾಗಿದ್ದ ಅವರ ಅವಧಿಯಲ್ಲಿ ದಿವ್ಯಾ ಹಾಗರಗಿ ಒಡೆತನಕ್ಕೆ ಸೇರಿರುವ ಜ್ಞಾನಜ್ಯೋತಿ ಶಾಲೆಗೆ ಪರೀಕ್ಷಾ ಕೇಂದ್ರ ಮಂಜೂರಾಗಿದ್ದರಿಂರ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು