Advertisement

ಶಶಿಕಲಾ ಐಷಾರಾಮಿ ಜೀವನಕ್ಕೆ ಪಿಎಸ್‌ಐ ದಲ್ಲಾಳಿ

06:45 AM Jul 25, 2017 | Team Udayavani |

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಡೆದಿರುವ ಅಕ್ರಮಗಳು ಬಹಿರಂಗಗೊಂಡು ಆ ಬಗ್ಗೆ ತನಿಖೆ ನಡೆಯುತ್ತಿರುವ ಬೆನ್ನಲ್ಲೇ ಅಕ್ರಮಗಳ ಮತ್ತಷ್ಟು ಮಾಹಿತಿಗಳು ಬಹಿರಂಗಗೊಳ್ಳುತ್ತಿವೆ. ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಆಪೆ¤ ಶಶಿಕಲಾ ನಟರಾಜನ್‌ಗೆ ಐಷಾರಾಮಿ ಸೌಲಭ್ಯ ಕಲ್ಪಿಸಲು ಜೈಲಿನ ಭದ್ರತೆಗೆ ನಿಯೋಜನೆಗೊಂಡಿರುವ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ವಿಭಾಗದ ಸಬ್‌ ಇನ್‌ಸ್ಪೆಕ್ಟರ್‌ ಗಜರಾಜ ಮಾಕನೂರು ಮಧ್ಯಸ್ಥಿಕೆ ವಹಿಸಿದ್ದರು ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.

Advertisement

ಈ ಕುರಿತಂತೆ ಜೈಲಿನ ಅಧಿಕಾರಿಗಳು ಮತ್ತು ಸಿಬ್ಬಂದಿ ಈ ಹಿಂದೆಯೇ ಕಾರಾಗೃಹ ಇಲಾಖೆ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಅಲ್ಲದೆ, ಗಜರಾಜ ಮಾಕನೂರು ನಡೆಸಿರುವ ಅಕ್ರಮಗಳ ಬಗ್ಗೆ ಸಿಐಡಿ ತನಿಖೆ ನಡೆಸುವಂತೆಯೂ ಜೈಲಿನ ಸಿಬ್ಬಂದಿ ಆಗ್ರಹಿಸಿದ್ದಾರೆ.

ಪಿಎಸ್‌ಐ ಗಜರಾಜ ಮಾಕನೂರು ಅವರು ಶಶಿಕಲಾ ನಟರಾಜನ್‌ ಜೈಲಿಗೆ ಬಂದ ನಂತರ ಆಕೆಗೆ ಐಷಾರಾಮಿ ಸೌಲಭ್ಯ ಕಲ್ಪಿಸಲು ಮಧ್ಯವರ್ತಿಯಾಗಿ ಕೆಲಸ ಮಾಡಿದ್ದು, ಶಶಿಕಲಾರನ್ನು ಭೇಟಿಯಾಗಲು ಬರುವ ತಮಿಳುನಾಡಿನ ರಾಜಕೀಯ ಮುಖಂಡರು, ಶಾಸಕರು, ಸಂಸದರು ಹಾಗೂ ಉದ್ಯಮಿಗಳಿಗೆ ಜೈಲಿನ ನಿಯಮಗಳನ್ನು ಉಲ್ಲಂ ಸಿ ಭೇಟಿಗೆ ಅವಕಾಶ ನೀಡುತ್ತಿದ್ದರು. ಸಂದರ್ಶಕರ ಪುಸ್ತಕದಲ್ಲಿ ಹೆಸರು, ವಿಳಾಸ ನೋಂದಾಯಿಸದೆ ನೇರವಾಗಿ ಒಳಗೆ ಹೋಗಲು ಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಎಲ್ಲರಿಗೂ ಅವಕಾಶ ಕೊಡಿಸುತ್ತಿದ್ದರು ಎಂದು ಆರೋಪಿಸಲಾಗಿದೆ.

ನಾಲ್ಕೈದು ಸಿಮ್‌ಗಳ ಬಳಕೆ: ಶಶಿಕಲಾರ ಸಹೋದರನ ಪುತ್ರ ದಿನಕರನ್‌, ಇಳವರಸಿ ಪುತ್ರ ವಿವೇಕ್‌, ಎಐಎಡಿಎಂಕೆ ಕರ್ನಾಟಕ ಘಟಕದ ಕಾರ್ಯದರ್ಶಿ ಪುಗಳೇಂದಿ ಮತ್ತು ಸೆಂದಿಲ್‌ ಎಂಬುವರು ಪ್ರತಿ ನಿತ್ಯ ಸಂಜೆ 7 ಗಂಟೆ ಸುಮಾರಿಗೆ ಜೈಲಿಗೆ ಭೇಟಿ ನೀಡುತ್ತಾರೆ. ಇವರನ್ನು ಸಂಪರ್ಕಿಸುವ ಸಲುವಾಗಿಯೇ ಗಜರಾಜ ಮಾಕನೂರು ನಾಲ್ಕೈದು ಸಿಮ್ ಕಾರ್ಡ್‌ ಮತ್ತು ಮೂರು ಮೊಬೈಲ್‌ ಗಳನ್ನು ಬಳಸುತ್ತಿದ್ದಾರೆ. ಅಲ್ಲದೆ, ಹೊಸೂರು ಶಾಸಕ ಕೂಡ ಶಶಿಕಲಾ ನಟರಾಜನ್‌ಗೆ ಅಗತ್ಯ ವಸ್ತುಗಳನ್ನು ಪೂರೈಸಲು ಗಜರಾಜನನ್ನು ಬಳಸಿಕೊಳ್ಳುತ್ತಿದ್ದರು. ಶಶಿಕಲಾಗೆ ಜೈಲಿನ ಒಳಗೆ ಪ್ರತ್ಯೇಕ ಕೊಠಡಿಯನ್ನು ಈತನೇ ನಿಗದಿ ಮಾಡಿಕೊಟ್ಟಿದ್ದು, ಇಲ್ಲಿ ಒಂದು ಎಲ್‌ಇಡಿ ಟಿವಿ, ಹವಾನಿಯಂತ್ರಿತ ಯಂತ್ರ, ಮಂಚ ಒದಗಿಸಲಾಗಿತ್ತು. ಪ್ರಮುಖವಾಗಿ ತಮಿಳುನಾಡು ಶೈಲಿಯ ಅಡುಗೆ ಮಾಡಿಕೊಳ್ಳಲು ಗ್ಯಾಸ್‌ ಇಂಡಕ್ಷನ್‌ ಸ್ಟೌವ್‌, ರೆμÅಜರೇಟರ್‌ ವ್ಯವಸ್ಥೆ ಕಲ್ಪಿಸಿಕೊಡಲಾಗಿದೆ.

ಜೈಲಿನ ಮುಖ್ಯಅಧೀಕ್ಷಕರ ಪಕ್ಕದ ಕೊಠಡಿಯಲ್ಲೇ ಶಶಿಕಲಾ ನಟರಾಜನ್‌ಗೆ ತನ್ನ ಸಂಬಂಧಿಕರು, ರಾಜಕೀಯ ಮುಖಂಡರನ್ನು ಭೇಟಿಯಾಗಲು ಇವರೇ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Advertisement

ಆ್ಯಂಬುಲೆನ್ಸ್‌ ಬಳಕೆ!: ಈ ಮಧ್ಯೆ ಎರಡು ದಿನಕ್ಕೊಮ್ಮೆ ಜೈಲಿನೊಳಗೆ ಶಶಿಕಲಾ ಮತ್ತಿತರರಿಗಾಗಿ ಪ್ರತ್ಯೇಕವಾಗಿ
ಅಡುಗೆಗೆ ಬೇಕಾದ ದಿನಸಿ, ತರಕಾರಿಗಳನ್ನು ಸಾಗಿಸುವ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಮಾಡಲಾಗಿದೆ.

ಹೊಸೂರು ಶಾಸಕ ತನ್ನ ಮನೆಯಿಂದ ತಯಾರಿಸಿದ ವಿಶೇಷ ಅಡುಗೆ ಮತ್ತು ಇತರ ವಸ್ತುಗಳನ್ನು ಕಳುಹಿಸಿಕೊಡುತ್ತಿದ್ದು, ಅವುಗಳನ್ನು ಯಾವುದೇ ತಪಾಸಣೆ ಇಲ್ಲದೆ ಒಳಗೆ ತರಲು ಜೈಲು ಆ್ಯಂಬುಲೆನ್ಸ್‌ ಅನ್ನು ಬಳಸುತ್ತಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ. ಕೆಎ-42 ಜಿ-919 ಮತ್ತು ಕೆಎ-42 ಜಿ-799 ಈ ಎರಡು ನಂಬರ್‌ನ ಆ್ಯಂಬುಲೆನ್ಸ್‌ ಗಳ ಮೂಲಕ ವಸ್ತುಗಳನ್ನು ಒಳಗೆ ಸಾಗಿಸುತ್ತಿದ್ದರು ಎನ್ನಲಾಗಿದೆ.

ಪಿಎಸ್‌ಐ “ಗಜರಾಜ’ ಆಸ್ತಿ: ಇಂತಹ ನಿಯಮ ಬಾಹಿರ ಕೆಲಸ ಮಾಡಲು ಪಿಎಸ್‌ಐ ಗಜರಾಜ ಲಕ್ಷಾಂತರ ರೂ.ಲಂಚ ಪಡೆದಿದ್ದು, ಬನ್ನೇರುಘಟ್ಟ ಮುಖ್ಯರಸ್ತೆಯಲ್ಲಿ ದಿನಕರನ್‌ ಕಡೆಯಿಂದ 30×40 ಸುತ್ತಳತೆಯ ನಿವೇಶನ ಖರೀದಿಸಿದ್ದಾರೆ. ಅಲ್ಲದೆ, ಹಾವೇರಿ ಜಿಲ್ಲೆ, ರಾಣಿಬೆನ್ನೂರು ತಾಲೂಕಿನ ನಾಗೇನಹಳ್ಳಿಯಲ್ಲಿ ಎರಡು ಅಂತಸ್ತಿನ ಮನೆ ನಿರ್ಮಿಸುತ್ತಿದ್ದು, ಬೆಂಗಳೂರಿನಲ್ಲಿ ಎರಡು ಕಾರುಗಳನ್ನು ಖರೀದಿಸಿದ್ದಾರೆ. ಅದು ಬೇನಾಮಿ ಹೆಸರಿನಲ್ಲಿ ಖರೀದಿಸಿದ್ದು, ಎಲೆಕ್ಟ್ರಾನಿಕ್‌ ಸಿಟಿ ಹತ್ತಿರದ ಕಂಪನಿಗಳಿಗೆ ಬಾಡಿಗೆಗೆ ನೀಡಿದ್ದಾರೆ. ತಮಗೆ ಬರುವ ಎಲ್ಲ ಹಣವನ್ನು ಆನ್‌ಲೈನ್‌ ಮೂಲಕ ತನ್ನ ಸ್ನೇಹಿತರು,
ಸಂಬಂಧಿಗಳ ಖಾತೆಗೆ ವರ್ಗಾಯಿಸಿಕೊಂಡು ವ್ಯವಹಾರ ನಡೆಸುತ್ತಾರೆ ಎಂದು ಆರೋಪಿಸಲಾಗಿದೆ.

ಬಡೇರಿಯಾ, ಜಯಚಂದ್ರಗೂ ಐಷಾರಾಮಿ ಜೀವನ: ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಇತ್ತೀಚೆಗೆ ಜೈಲು ಸೇರಿದ್ದ ಹಿರಿಯ ಐಎಎಸ್‌ ಅಧಿಕಾರಿ ಗಂಗಾರಾಮ್‌ ಬಡೇರಿಯಾ, ಬ್ಲ್ಯಾಕ್‌ ಆ್ಯಂಡ್‌ ವೈಟ್‌ ದಂಧೆಯಲ್ಲಿ ಭಾಗಿಯಾಗಿ ಜೈಲುಪಾಲಾದ ಅಧಿಕಾರಿ ಜಯಚಂದ್ರ, ನಟ ದೊಡ್ಡಣ್ಣ ಅಳಿಯ ವೀರೇಂದ್ರ ಮಾತ್ರವಲ್ಲದೆ, ಫ್ಲ್ಯಾಟ್‌ ಕೊಡುತ್ತೇನೆಂದು ಸಾವಿರಾರು ಮಂದಿಗೆ ಕೋಟ್ಯಂತರ ರೂ. ವಂಚಿಸಿದ ರಿಯಲ್‌ ಎಸ್ಟೇಟ್‌ ಮಾಲೀಕ ಸಚಿನ್‌ ನಾಯಕ್‌, ಪತ್ನಿ ದಿಶಾಚೌಧರಿಗೂ ಜೈಲಿನಲ್ಲಿ ವಿಶೇಷ ಆತಿಥ್ಯ ಕಲ್ಪಿಸಲಾಗುತ್ತಿದ್ದು, ಇವರಿಗೂ ಗಜರಾಜ ನೆರವಾಗಿದ್ದಾನೆ ಎಂದು ಆರೋಪಿಸಲಾಗಿದೆ.

ಆನೇಕಲ್‌ನಲ್ಲಿ ಪಾರ್ಟಿ: ಜೈಲಿನಲ್ಲಿ ಅಕ್ರಮಗಳಿಗೆ ದಾರಿ ಮಾಡಿಕೊಡುವ ಗಜರಾಜ ವಾರಾಂತ್ಯದಲ್ಲಿ ಆನೇಕಲ್‌ ಬಳಿಯಿರುವ ತಮಿಳುನಾಡಿನ ಎಂಎಲ್‌ಎ ಒಬ್ಬರ ರೆಸಾರ್ಟ್‌ನಲ್ಲಿ ಸ್ನೇಹಿತರೊಂದಿಗೆ ಸೇರಿಕೊಂಡು ಭರ್ಜರಿ ಪಾರ್ಟಿ ಮಾಡುತ್ತಾರೆ. ಒಮ್ಮೊಮ್ಮೆ ಮುಖ್ಯಅಧೀಕ್ಷಕ ಕೃಷ್ಣಕುಮಾರ್‌ ಕೂಡ ಈ ಪಾರ್ಟಿಯಲ್ಲಿ ಭಾಗವಹಿಸುತ್ತಿದ್ದರು ಎಂದು ದೂರಲಾಗಿದೆ.

ಕೃಷ್ಣಕುಮಾರ್‌, ಗಜರಾಜ ಆಪ್ತ
ಕೈದಿಗಳಿಗೆ ನೆರವಾಗುತ್ತಿರುವ ಪಿಎಸ್‌ಐ ಗಜರಾಜ ಮಾಕನೂರು ಮತ್ತು ಜೈಲಿನ ಈ ಹಿಂದಿನ ಮುಖ್ಯಅಧೀಕ್ಷಕ ಕೃಷ್ಣಕುಮಾರ್‌ ಆಪ್ತರಾಗಿದ್ದು, ಇಲ್ಲಿನ ಅಕ್ರಮಗಳ ಬಗ್ಗೆ ಯಾರನ್ನೂ ಪ್ರಶ್ನಿಸುವಂತಿಲ್ಲ. ಒಂದು ವೇಳೆ ಆಕ್ಷೇಪಿಸಿದರೆ ಕೃಷ್ಣಕುಮಾರ್‌ ಮೂಲಕ ಸಿಬ್ಬಂದಿಗೆ ನಿಂದಿಸುತ್ತಾರೆ. ಅಲ್ಲದೆ, ಆ ಸಿಬ್ಬಂದಿ ಪಾಳಿಯನ್ನು ಬದಲಿಸುವಷ್ಟು ಗಜರಾಜ ಪ್ರಭಾವ ಶಾಲಿಯಾಗಿದ್ದಾರೆ. ಈತನ ಎಲ್ಲ ಅಕ್ರಮಗಳು ಮುಖ್ಯಅಧೀಕ್ಷಕ ಕೃಷ್ಣಕುಮಾರ್‌ಗೆ ಗೊತ್ತಿದ್ದರೂ ಯಾವುದೇ ಕ್ರಮಕೈಗೊಂಡಿಲ್ಲ. ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡಬೇಕಿದ್ದ ಗಜರಾಜ ಸದಾ ಕೃಷ್ಣಕುಮಾರ್‌ ಕಚೇರಿಯಲ್ಲೇ ಕುಳಿತುಕೊಳ್ಳುತ್ತಿದ್ದ ಎಂದೂ ಆರೋಪಿಸಲಾಗಿದೆ.

ಪರಮೇಶ್ವರ್‌ ಆಪ್ತನ ಸಹಾಯ
ಗೃಹ ಸಚಿವರ ಆಪ್ತ ಎನ್ನಲಾದ ಆಸ್ಟ್ರೇಲಿಯಾ ಪ್ರಕಾಶ್‌ ಜತೆ ನಿರಂತರ ಸಂಪರ್ಕದಲ್ಲಿರುವ ಗಜರಾಜ ಮಾಕನೂರು, ಪ್ರಕಾಶ್‌ ಸೂಚನೆಯಂತೆ ಜೈಲಿನಲ್ಲಿ ನಡೆದುಕೊಳ್ಳುತ್ತಾರೆ. ಜೈಲಿನಲ್ಲಿ ಪ್ರಕಾಶ್‌ ಯಾರನ್ನಾದರೂ ಭೇಟಿಯಾಗಲು ಬಯಸಿದರೆ ಯಾವುದೇ ಅಡ್ಡಿ ಇಲ್ಲದೆ ಒಳಗಡೆ ತಾನೇ ಕರೆದೊಯ್ದು ಭೇಟಿ ಮಾಡಿಸುತ್ತಾರೆ. ಶಶಿಕಲಾ ನಟರಾಜನ್‌ ಅವರಿಗೆ ಐಷಾರಾಮಿ ಸೌಲಭ್ಯ ಕಲ್ಪಿಸಲು ಆಸ್ಟ್ರೇಲಿಯಾ ಪ್ರಕಾಶ್‌ ಪ್ರಮುಖ ಪಾತ್ರವಹಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next