ಕಲಬುರಗಿ: ಅಫಜಲಪುರ ತಾಲೂಕಿನ ರೈತರು ಹೊಲಗಳು ಮತ್ತು ತೋಟದ ಮನೆಗಳಿಗೆ ನಿರಂತರವಾಗಿ ಸಿಂಗಲ್ ಫೇಸ್ ವಿದ್ಯುತ್ ಸರಬರಾಜು ಮಾಡಬೇಕೆಂದು ಒತ್ತಾಯಿಸಿ ಜೆಡಿಎಸ್ ಮುಖಂಡರು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಲಾಯಿತು.
ಸಮರ್ಪಕ ವಿದ್ಯುತ್ ಪೂರೈಕೆ ಬಗ್ಗೆ ಹಲವಾರು ಬಾರಿ ರಸ್ತೆ ತಡೆ, ಉಪವಾಸ ಸತ್ಯಾಗ್ರಹದ ಮೂಲಕ ಸರ್ಕಾರಕ್ಕೆ ಮನವಿ ಮಾಡಿದ್ದರೂ ಕೂಡ ತಾಲೂಕಿನ ರೈತರ ಬೇಡಿಕೆ ಮಾತ್ರ ಈಡೇರಿಲ್ಲ ಎಂದು ಪಕ್ಷದ ಜಿಲ್ಲಾ ಕಾರ್ಯದರ್ಶಿ ರಾಜಕುಮಾರ ಬಡದಾಳ ಅಸಮಾಧಾನ ವ್ಯಕ್ತಪಡಿಸಿದರು.
ಹೊಲಗಳಲ್ಲಿ ವಸತಿ ಇರುವಂತಹ ರೈತರು ವಿದ್ಯುತ್ ಸಮಸ್ಯೆಯಿಂದ ಸಂಕಷ್ಟ ಎದುರಿಸುವಂತೆ ಆಗಿದೆ. ರಾತ್ರಿ ವೇಳೆ ವಿಷ ಜಂತುಗಳು ಭಯದಿಂದ ನೀರು ಹರಿಸುವುದು ಕಷ್ಟವಾಗುತ್ತಿದೆ. ಎಣ್ಣೆ ಸಿಂಪರಣೆ ಮಾಡಲು ಬ್ಯಾಟರಿಗಳ ಚಾರ್ಜಿಂಗ್ ಮಾಡಲು ತೊಂದರೆ ಉಂಟಾಗುತ್ತಿದೆ. ಅಲ್ಲದೇ, ತೋಟದ ಮನೆಗಳಲ್ಲಿ ಮಕ್ಕಳ ವಿದ್ಯಾಭ್ಯಾಸ ಹಾಗೂ ಆನ್‌ಲೈನ್ ಕ್ಲಾಸ್‌ಗಳಿಗೂ ಸಮಸ್ಯೆ ಎದುರಾತ್ತಿದೆ. ಆದ್ದರಿಂದ ಸಿಂಗಲ್ ಫೇಸ್ ವಿದ್ಯುತ್ ಪೂರೈಕೆ ಮಾಡಬೇಕೆಂದು ಒತ್ತಾಯಿಸಿದರು.
ತಾಲೂಕಿನಲ್ಲಿ ಭೀಮಾ ಏತ ನೀರಾವರಿ ಕಾಮಗಾರಿಗೆ ರೈತರ ಜಮೀನುಗಳನ್ನು ಸ್ವಾಧೀನ ಪಡಿಸಿಕೊಂಡು ರೈತರಿಗೆ ಇನ್ನೂ ಪರಿಹಾರ ಕೊಟ್ಟಿಲ್ಲ. ಇದರಿಂದ ರೈತ ಭೂಮಿ ಕಳೆದುಕೊಂಡು ಕಂಗಾಲಾಗಿದ್ದಾರೆ. ಇತ್ತ ಜಮೀನು ಇರದೇ, ಅತ್ತ ಹಣ ಬಾರದೆ ರೈತರು ಸರ್ಕಾರದ ವಿರುದ್ಧ ರೋಸಿ ಹೋಗಿದ್ದಾರೆ ಎಂದು ದೂರಿದರು.
ಅಫಜಲಪುರ ತಾಲೂಕಿನಲ್ಲಿರುವ ರೇಣುಕಾ ಮತ್ತು ಕೆಪಿಆರ್ ಸಕ್ಕರೆ ಕಾರ್ಖಾನೆಗಳಲ್ಲಿ ಶೇ.80ರಷ್ಟು ಉದ್ಯೋಗಗಳನ್ನು ಸ್ಥಳೀಯರಿಗೆ ನೀಡಬೇಕು. ಕಾರ್ಖಾನೆಗಳಲ್ಲಿ ಪ್ರಾರಂಭಿಸುವಾಗಲೇ ಸರ್ಕಾರ ಸ್ಥಳೀಯರಿಗೆ ಶೇ.80ರಷ್ಟು ಉದ್ಯೋಗ ಕಲ್ಪಿಸಬೇಕೆಂದು ಪರವಾನಿಗೆ ನೀಡಿದೆ. ಆದರೆ, ಕಾರ್ಖಾನೆ ಮಾಲೀಕರು ಸರ್ಕಾರದ ನಿಯಮ ಗಾಳಿಗೆ ತೋರಿ ತಮ್ಮ ಮನ ಬಂದಂತೆ ವರ್ತಿಸುತ್ತಿದ್ದಾರೆ. ಎರಡೂ ಸಕ್ಕರೆ ಕಾರ್ಖಾನೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಕಲ್ಪಿಸಲು ಕ್ರಮ ವಹಿಸಬೇಕೆಂದು ಮನವಿ ಸಲ್ಲಿಸಿದರು.
ಮುಖಂಡರಾದ ಹಣಮಂತರಾವ ಬಿರೇದಾರ, ಸಾಗರ ರಾಠೊಡ, ಖಲೀಲ್ ಚೌಧರಿ, ಬೈಲಪ್ಪ ಪಟ್ಟೇದಾರ, ಸಿದ್ದಯ್ಯಪ್ಪ ಪೂಜಾರಿ, ಸಿದ್ದು ವಿಭೂತಳ್ಳಿ, ಅಸ್ಲಾಂ, ಕಾಶಿನಾಥ ಗಾಯಕವಾಡ, ಲಕ್ಷ್ಮಣ ಜೇವರ್ಗಿ ಸೇರಿದಂತೆ ಇದ್ದರು.