ಕೊಪ್ಪಳ: ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದ ಕೃಷಿ, ತೋಟಗಾರಿಕೆ ಬೆಳೆ ಹಾನಿ, ಮನೆಗಳ ಹಾನಿ ಹಾಗೂ ಪ್ರಾಣ ಹಾನಿ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ಶೀಘ್ರ ಪರಿಹಾರ ಒದಗಿಸಲು ತಹಶೀಲ್ದಾರ್‌ರು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯ ಕೆ-ಸ್ವಾನ್ ಸಭಾಂಗಣದಲ್ಲಿ ಜಿಲ್ಲಾ ಹಾಗೂ ತಾಲೂಕುಮಟ್ಟದ ಅಧಿಕಾರಿಗಳ ಜೊತೆ ನಡೆಸಿದ ಪ್ರಗತಿ ಪರಿಶೀಲನಾ ಸಭೆಯ ವೀಡಿಯೋ ಸಂವಾದದಲ್ಲಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದ ಹಾನಿಗೊಳಗಾದ ಮನೆಗಳ ಸ್ಥಳ ಮಹಜರು ಮಾಡಿ ನಿಗಮದ ಪೋರ್ಟಲ್‌ನಲ್ಲಿ ಮಾಹಿತಿ ಅಳವಡಿಸಿ, ಪರಿಹಾರ ಒದಗಿಸಬೇಕು. ಕೃಷಿ ಹಾಗೂ ತೋಟಗಾರಿಕೆ ಬೆಳೆಗಳ ಹಾನಿ ಬಗ್ಗೆ ಸಂಬಂಧಿಸಿದ ಇಲಾಖೆಗಳೊಂದಿಗೆ ಜಂಟಿ ಸಮೀಕ್ಷೆ ನಡೆಸಿ ಪರಿಹಾರ ಪೋರ್ಟಲ್‌ನಲ್ಲಿ ಹಾನಿ ಕುರಿತ ದತ್ತಾಂಶ ಅಳವಡಿಸಬೇಕು. ಮಳೆ ಹಾನಿ ಪರಿಹಾರ ಕ್ರಮಗಳಲ್ಲಿ ಪ್ರತಿ ಇಲಾಖೆಗಳ ನಡುವೆ ಸಮನ್ವಯತೆ ಇರಬೇಕು. ಮಾಹಿತಿ ಅಳವಡಿಕೆಗೆ ವಿಳಂಬ ಮಾಡದೇ ಶೀಘ್ರ ಪರಿಹಾರ ಒದಗಿಸಬೇಕು. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.
ಇನ್ನು ಮತದಾರರ ಪಟ್ಟಿಯಲ್ಲಿ ನೋಂದಾಯಿತ ಎಲ್ಲ ಮತದಾರರಿಂದ ಸ್ವಯಂ ಪ್ರೇರಿತವಾಗಿ ಆಧಾರ ಸಂಖ್ಯೆ ಪಡೆದು, ಮತದಾರರ ಗುರುತಿನ ಚೀಟಿಗೆ ಆಧಾರ ಸಂಖ್ಯೆಯನ್ನು ಜೋಡಣೆ ಮಾಡಲು ಸೆ. 4ರಂದು ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಬೂತ್ ಮಟ್ಟದ ಅಧಿಕಾರಿಗಳಿಗೆ ತಹಶೀಲ್ದಾರ್‌ರು ಸೂಕ್ತ ನಿರ್ದೇಶನ ನೀಡಬೇಕು. ಅದರಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಅಭಿಯಾನದಲ್ಲಿ ಪಾಲ್ಗೊಳ್ಳಬೇಕು. ಎಲ್ಲ ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆಗೆ ತೆರಳಿ ಆಧಾರ್ ಜೋಡಣೆ ಕಾರ್ಯ ಕೈಗೊಳ್ಳಬೇಕು. ನೋಡಲ್ ಅಧಿಕಾರಿಗಳು ಇದರ ಮೇಲ್ವಿಚಾರಣೆ ಮಾಡಿ, ಈ ಕಾರ್ಯದಲ್ಲಿ ನಿಗದಿತ ಪ್ರಗತಿ ಸಾಧಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಕೇಂದ್ರ ಸರ್ಕಾರದಿಂದ ಸಹಾಯಧನ ಪಡೆಯುತ್ತಿರುವ ರೈತರು ಬ್ಯಾಂಕ್ ಖಾತೆಗೆ ಇ-ಕೆವೈಸಿ ಮಾಡಿಸಬೇಕು. ಯೋಜನೆಯಡಿ ಜಿಲ್ಲೆಯ 1,55,136 ರೈತರು ಅರ್ಹರಿದ್ದು, ಈಗಾಗಲೇ 75,647 ರೈತರು ಇ-ಕೆವೈಸಿ ಮಾಡಿಸಿದ್ದು, 79,489 ರೈತರು ಬಾಕಿ ಇದ್ದಾರೆ. ಇ-ಕೆವೈಸಿ ಮಾಡಿಸಿದ ರೈತರ ಖಾತೆಗೆ ಮಾತ್ರ ಯೋಜನೆಯ ಕಂತಿನ ಮೊತ್ತ ಜಮೆಯಾಗುವುದರಿಂದ, ರೈತರು ಸಮೀಪದ ರೈತ ಸಂಪರ್ಕ ಕೇಂದ್ರ, ಕಾಮನ್ ಸರ್ವೀಸ್ ಸೆಂಟರ್ ಗಳಲ್ಲಿ ಅಥವಾ ಖಾತೆ ಹೊಂದಿರುವ ಬ್ಯಾಂಕ್ ಗಳಿಗೆ ಭೇಟಿ ನೀಡಿ ತಮ್ಮ ಬ್ಯಾಂಕ್ ಖಾತೆಗೆ ಇ-ಕೆವೈಸಿ ಮಾಡಿಸಿಕೊಳ್ಳಬೇಕು ಅಥವಾ ಸ್ಮಾರ್ಟ್‌ಫೋನ್ ಬಳಸುವ ರೈತರು ಪಿಎಂ ಕಿಸಾನ್ ತಂತ್ರಾಂಶದ ಮುಖಾಂತರ ಸೆ. 7ರೊಳಗೆ ಇ-ಕೆವೈಸಿ ಮಾಡಿಸಕೊಳ್ಳಬೇಕು. ಒಂದು ವೇಳೆ ನಿಗದಿತ ವೇಳೆಯಲ್ಲಿ ರೈತರು ಇ-ಕೆವೈಸಿ ಮಾಡಿಸಿಕೊಳ್ಳದಿದ್ದರೆ ಮುಂದೆ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಸಹಾಯಧನ ಸಂದಾಯವಾಗುವುದಿಲ್ಲ. ಈ ಬಗ್ಗೆ ಮತದಾರರ ಗುರುತಿನ ಚೀಟಿಗೆ ಆಧಾರ್ ಜೋಡಣೆ ಅಭಿಯಾನದಲ್ಲಿ ಜಿಲ್ಲೆಯ ರೈತರಿಗೆ ಜಾಗೃತಿ ಮೂಡಿಸಿ, ಬಾಕಿ ಉಳಿದ ರೈತರ ಇ-ಕೆವೈಸಿ ಕಾರ್ಯವನ್ನು ಪೂರ್ಣಗೊಳಿಸಬೇಕು ಎಂದರು.
ಮುಂಗಾರು ಹಂಗಾಮಿನಲ್ಲಿ ಕೇಂದ್ರ ಸರ್ಕಾರವು ಹೆಸರುಕಾಳು ಖರೀದಿ ಕೇಂದ್ರವನ್ನು ಕೊಪ್ಪಳದ ಟಿಎಪಿಎಂಸಿ, ಹಿರೇಸಿಂಧೋಗಿ ಪಿಎಸಿಎಸ್, ಕುಕನೂರು ಪಿಎಸಿಎಸ್, ಮಸಬಹಂಚಿನಾಳ ಪಿಎಸಿಎಸ್, ಯಲಬುರ್ಗಾ ಟಿಎಪಿಎಂಸಿ, ಕುಷ್ಟಗಿ ತಾಲೂಕಿನ ಹನುಮಸಾಗರ ಪಿಎಸಿಎಸ್ ಹಾಗೂ ತಾವರಗೇರಾದ ಪಿಎಸಿಎಸ್ ಮೆಣೇದಾಳನಲ್ಲಿ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಿದ್ದು, ಅವುಗಳ ಕುರಿತು ಹಾಗೂ ರೈತರ ನೋಂದಣಿ ಬಗ್ಗೆಯೂ ಅರಿವು ಮೂಡಿಸಬೇಕು ಎಂದರು.
ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ವಸತಿ ಯೋಜನೆಗಳಲ್ಲಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆಗೆ ಕ್ರಮ ಕೈಗೊಳ್ಳಬೇಕು. ಫಲಾನುಭವಿಗಳ ಆಯ್ಕೆ, ಹಕ್ಕುಪತ್ರಗಳ ಸೃಜನೆ, ಹಕ್ಕುಪತ್ರಗಳ ವಿತರಣೆಗೆ ಕಾಲಮಿತಿಯಲ್ಲಿ ಕ್ರಮ ವಹಿಸಬೇಕು. ಅಮೃತ ನಿರ್ಮಲ, ನಗರೋತ್ಥಾನ ಯೋಜನೆ ಮುಂತಾದ ಅಭಿವೃದ್ಧಿ ಕಾಮಗಾರಿಗಳಿಗೆ ಕ್ರಿಯಾ ಯೋಜನೆ ಸಿದ್ಧಪಡಿಸಿ, ಅನುಮೋದನೆ ಪಡೆದು ಶೀಘ್ರ ಕಾಮಗಾರಿ ಪೂರ್ಣಗೊಳಿಸಿ. ಉಳಿದಂತೆ ಭೂಮಿ ತಂತ್ರಾಂಶ ಸಮರ್ಪಕ ನಿರ್ವಹಣೆ, ಮಾಹಿತಿ ಅಳವಡಿಕೆ, ಗೋಶಾಲೆಗಳ ನಿರ್ವಹಣೆ, ಸ್ಮಶಾನ ಜಾಗ ಮಂಜೂರಿ ಬಗ್ಗೆ ಅಗತ್ಯ ಕ್ರಮ ಕೈಗೊಂಡು ವರದಿ ಸಲ್ಲಿಸಿ ಎಂದರು.
ಎಡಿಸಿ ಸಾವಿತ್ರಿ ಬಿ. ಕಡಿ, ಎಸಿ ಬಸವಣಪ್ಪ ಕಲಶೆಟ್ಟಿ, ತಹಶೀಲ್ದಾರ್ ವಿಠ್ಠಲ್ ಚೌಗಲಾ ಸೇರಿದಂತೆ ಜಿಲ್ಲಾಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಜಿಲ್ಲೆಯಲ್ಲಿ ಪ್ರತಿಷ್ಠಾಪಿಸಿದ ಗಣೇಶ ಮೂರ್ತಿಗಳ ವಿಸರ್ಜನೆ ಕಾರ್ಯಕ್ರಮ ನಿರ್ವಹಣೆಯಲ್ಲಿ ಕಂದಾಯ, ಪೊಲೀಸ್ ಇಲಾಖೆಗಳೊಂದಿಗೆ ನಗರ ಸ್ಥಳೀಯ ಸಂಸ್ಥೆಯ ಅಧಿಕಾರಿಗಳು, ಗ್ರಾಪಂ ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಕೈಜೋಡಿಸಬೇಕು. ಗಣೇಶ ಮೂರ್ತಿ ವಿಸರ್ಜನಾ ಸ್ಥಳಗಳಲ್ಲಿ ಕ್ರೇನ್, ಬ್ಯಾರಿಕೇಡ್, ಮೆರವಣಿಗೆ ಮಾರ್ಗದಲ್ಲಿ ಹಾಗೂ ವಿಸರ್ಜನಾ ಸ್ಥಳದಲ್ಲಿ ಸೂಕ್ತ ಬೆಳಕಿನ ವ್ಯವಸ್ಥೆ ಕಲ್ಪಿಸಲು ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಯಾವುದೇ ಅವಘಡ, ತೊಂದರೆ ಉಂಟಾಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಸುಗಮ ವಿಸರ್ಜನೆಗೆ ವ್ಯವಸ್ಥೆ ಕಲ್ಪಿಸಬೇಕೆಂದು ಜಿಲ್ಲಾಧಿಕಾರಿ ಸೂಚಿಸಿದರು.