ಮಂಗಳೂರು: ಪೊಲೀಸರ ಮೇಲೆ ಲೋಕಾಯುಕ್ತಕ್ಕೆ ದೂರು ನೀಡಿ ಭ್ರಷ್ಟಾಚಾರ ಆರೋಪ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ದಾಖಲೆ ಮತ್ತು ನಿಖರ, ಪ್ರಾಮಾಣಿಕ ಮಾಹಿತಿಯೊಂದಿಗೆ ದೂರು ನೀಡಿದಲ್ಲಿ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆಲೋಕ್ ಕುಮಾರ್ ಹೇಳಿದ್ದಾರೆ.
ಗುರುವಾರ ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪೊಲೀಸರು ಭ್ರಷ್ಟಾಚಾರ ನಡೆಸುತ್ತಿದ್ದಾರೆ ಎಂದು ಆರೋಪಿಸುವವರು ಎಲ್ಲಿ, ಯಾರಿಂದ ಹೇಗೆ ಹಣ ಪಡೆದಿದ್ದಾರೆ ಎಂದು ನಿರ್ದಿಷ್ಟ ಪ್ರಕರಣಗಳಿದ್ದರೆ ದಾಖಲೆ ಸಹಿತ ದೂರು ನೀಡಲಿ, ಪರಿಶೀಲಿಸಲಾಗುವುದು ಎಂದರು.
ಉಳ್ಳಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರಿನ ಪ್ರತಿ ನೋಡಿಲ್ಲ. ಲೋಕಾಯುಕ್ತ ಇಲಾಖೆ ಅದರ ತನಿಖೆ ನಡೆಸಿ ವರದಿ ನೀಡುವಂತೆ ಪೊಲೀಸ್ ಆಯುಕ್ತರಿಗೆ ನಿರ್ದೇಶನ ನೀಡಿದ್ದಾರೆ. ಪ್ರಕರಣದ ತನಿಖೆ ನಡೆಸುವಂತೆ ನೋಟಿಸ್‌ನಲ್ಲಿ ನನ್ನ ಹೆಸರನ್ನು ಉಲ್ಲೇಖೀಸಿದ್ದರೆ ನಾನು ವಿಚಾರಣೆ ನಡೆಸಿ ಕ್ರಮ ಕೈಗೊಳ್ಳುತ್ತಿದ್ದೆ ಎಂದರು.
ಮೊಹಲ್ಲಾ, ಯೂತ್ ಕಮಿಟಿ ಪರಿಣಾಮಕಾರಿ ಅನುಷ್ಠಾನ ಆಗಿಲ್ಲ:
ಮಂಗಳೂರು ನಗರ ಪೊಲೀಸ್ ವ್ಯಾಪ್ತಿಯಲ್ಲಿ ಸುರತ್ಕಲ್, ಬಂದರು, ಉಳ್ಳಾಲ, ಕಾವೂರು, ದ.ಕ. ಪೊಲೀಸ್ ವ್ಯಾಪ್ತಿಯಲ್ಲಿ ಬಂಟ್ವಾಳ, ಪುಂಜಾಲಕಟ್ಟೆ, ಪುತ್ತೂರು, ಬೆಳ್ತಂಗಡಿ ಕೋಮು ಸೂಕ್ಷ್ಮ ಠಾಣೆಗಳು. ಇಂಥ ಕಡೆಗಳಲ್ಲಿ ಮೊಹಲ್ಲಾ ಕಮಿಟಿ ಮತ್ತು ಯೂತ್ ಕಮಿಟಿ ಸಭೆಗಳನ್ನು ಕಾಲಕಾಲಕ್ಕೆ ಪರಿಣಾಮಕಾರಿಯಾಗಿ ಆಯೋಜಿಸಲು ಸೂಚಿಸಲಾಗಿತ್ತು. ಆದರೆ ಇದು ಜಿಲ್ಲೆಯಲ್ಲಿ ನಿರೀಕ್ಷಿಸಿದಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದ ಅವರು, ಸಮಾಜದೊಂದಿಗೆ ಪೊಲೀಸರಿಗೆ ನೇರವಾದ ಸಂಪರ್ಕ ಇರಬೇಕು ಎನ್ನುವ ದೃಷ್ಟಿಯಿಂದ ಇದನ್ನು ಮಾಡಲಾಗಿದೆ ಎಂದರು.
10ಕ್ಕೂ ಅಧಿಕ ದೂರು:
ದ.ಕ. ಜಿಲ್ಲಾ ಪೊಲೀಸ್ ವ್ಯಾಪ್ತಿಯಿಂದ 10ಕ್ಕೂ ಅಧಿಕ ದೂರುಗಳನ್ನು ಜನರು ಹೇಳಿಕೊಂಡಿದ್ದಾರೆ. ಅವುಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಇಂಥ ಕುಂದು ಕೊರತೆ ಸಭೆಗಳನ್ನು ಇತರ ಜಿಲ್ಲೆಗಳಲ್ಲೂ ಆಯೋಜಿಸಲಾಗುವುದು ಎಂದರು.
ಇಂದು ಕಮಿಷನರೆಟ್ ವ್ಯಾಪ್ತಿ ಸಭೆ:
ಮಂಗಳೂರಿನ ಪಶ್ಚಿಮ ವಲಯ ಪೊಲೀಸ್ ಕಚೇರಿ ಯಲ್ಲಿ ಪಶ್ಚಿಮ ವಲಯ ಜಿಲ್ಲೆಗಳ ಪೊಲೀಸ್ ಪ್ರಗತಿ ಪರಿಶೀಲನೆ ಮತ್ತು ಸಾರ್ವಜನಿಕರ ಕುಂದು ಕೊರತೆ ಸಭೆ ನಡೆಸಿದರು. ಹಿರಿಯ ಪೊಲೀಸ್ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಫೆ. 10ರಂದು ಬೆಳಗ್ಗೆ 11 ಗಂಟೆಗೆ ಕಮಿಷನರೆಟ್ ವ್ಯಾಪ್ತಿಯ ಸಾರ್ವಜನಿಕರ ಕುಂದುಕೊರತೆ ಸಭೆ ನಡೆಸುವುದಾಗಿ ಎಡಿಜಿಪಿ ತಿಳಿಸಿದ್ದಾರೆ.
ಪಶ್ಚಿಮ ವಲಯ ಐಜಿಪಿ ಡಾ| ಚಂದ್ರಗುಪ್ತ, ಎಸ್‌ಪಿ ವಿಕ್ರಮ್ ಅಮಟೆ ಇದ್ದರು.