ಬೆಂಗಳೂರು: ಸ್ಮಾರ್ಟ್‌ಸಿಟಿ ಯೋಜನೆ ಅಡಿಯಲ್ಲಿ ವಿವಿಧ ಯೋಜನೆಗಳು ಜಾರಿಯಾಗುವ ವಿಧಾನಸಭಾ ಕ್ಷೇತ್ರದ ಜನಪ್ರತಿನಿಧಿಗಳ ಸಭೆ ಕರೆದು ಮಾಹಿತಿ ನೀಡುವಂತೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಿದರು.
ಬಿಎಂಆರ್‌ಡಿಎ ಸಭಾಂಗಣದಲ್ಲಿ ಸ್ಮಾರ್ಟ್‌ಸಿಟಿ ಯೋಜನೆ ಅನುಷ್ಠಾನದ ಕುರಿತು ಪರಿಶೀಲನಾ ಸಭೆ ನಡೆಸಿದ ಅವರು, ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕೈಗೆತ್ತಿಕೊಳ್ಳುವ ಯೋಜನೆಗಳ ಕುರಿತು ಜನಪ್ರತಿನಿಧಿಗಳಿಗೆ ಮಾಹಿತಿ ಕೊಟ್ಟು, ಅವರಿಂದ ಸಲಹೆಗಳನ್ನು ಪಡೆಯುವಂತೆ ಸೂಚಿಸಿದ್ದಾರೆ.
ಗಾಂಧಿನಗರ ಕ್ಷೇತ್ರದ ಸ್ವತಂತ್ರ ಪಾಳ್ಯ ಕೊಳೆಗೇರಿ, ಶಿವಾಜಿನಗರ ಬಸ್ ನಿಲ್ದಾಣ ಹಾಗೂ ಚಾಮರಾಜಪೇಟೆಯ ಕೆ.ಆರ್.ಮಾರುಕಟ್ಟೆಗಳನ್ನು ಸ್ಮಾರ್ಟ್‌ಸಿಟಿ ಯೋಜನೆಯಡಿ ಅಭಿವೃದ್ಧಿಪಡಿಸಲು ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲಾಗಿದೆ. ಅದರಂತೆ ಮೂರು ಕ್ಷೇತ್ರಗಳ ಜನಪ್ರತಿನಿಧಿಗಳಿಗೆ ಯೋಜನೆಯ ಕುರಿತು ಮಾಹಿತಿ ನೀಡಲು ಬಿಬಿಎಂಪಿ ಆಯುಕ್ತರು ಬುಧವಾರ ಸಭೆ ಕರೆದಿದ್ದಾರೆ.
ಈಗಾಗಲೇ ಕೇಂದ್ರ ಸರ್ಕಾರದ ಸ್ಮಾರ್ಟ್‌ಸಿಟಿ ಯೋಜನೆ ಜಾರಿಗೊಳಿಸಲು ಸರ್ಕಾರ ವಿಶೇಷ ಉದ್ದೇಶಿತ ವಾಹನ (ಎಸ್‌ಪಿವಿ) ರಚಿಸಿದ್ದು, ಇತ್ತೀಚೆಗೆ ಎಸ್‌ಪಿವಿಯ ವ್ಯವಸ್ಥಾಪಕ ನಿರ್ದೇಶಕರಾಗಿ ಬಿಬಿಎಂಪಿ ಆಯುಕ್ತರನ್ನು ಆಯ್ಕೆ ಮಾಡಿ ನಗರಾಭಿವೃದ್ಧಿ ಇಲಾಖೆ ಆದೇಶಿಸಿದೆ. ಅದರಂತೆ ಜನಪ್ರತಿನಿಧಿಗಳ ಸಭೆ ಕರೆದಿರುವ ಆಯುಕ್ತರು, ಅವರಿಂದ ಪಡೆದ ಸಲಹೆಗಳನ್ನು ಆಧರಿಸಿ ಜ.16ರಂದು ಎಸ್‌ಪಿವಿ ಸಭೆ ನಡೆಸಲಿದ್ದು, ಆನಂತರದಲ್ಲಿ ಯೋಜನೆ ಜಾರಿಗೆ ಟೆಂಡರ್ ಆಹ್ವಾನಿಸಲಾಗುತ್ತದೆ.
ಶೀಘ್ರ ಡಿಜಿಟಲ್ ಡೋರ್ ಸಂಖ್ಯೆ ಕೊಡಿ: ಪಾಲಿಕೆಯಿಂದ ನಗರದಲ್ಲಿರುವ ಪ್ರತಿ ಮನೆಗೆ ಡಿಜಿಟಲ್ ಡೋರ್ ಸಂಖ್ಯೆ ಹೇಗೆ ನೀಡಲಾಗುತ್ತದೆ ಎಂಬ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವ ಜಾರ್ಜ್, ಡಿಜಿಟಲ್ ಡೋರ್ ಸಂಖ್ಯೆ ನೀಡುವುದರಿಂದ ಪಾಲಿಕೆಯಲ್ಲಿನ ಆಸ್ತಿಗಳ ಸಮರ್ಪಕ ಮಾಹಿತಿ ದೊರೆಯಲಿದೆ. ಆ ಮೂಲಕ ಆಸ್ತಿ ಸಂಗ್ರಹಕ್ಕೂ ಹೆಚ್ಚು ಅನುಕೂಲವಾಗಲಿದೆ. ಹೀಗಾಗಿ ಕೂಡಲೇ ಯೋಜನೆ ಅನುಷ್ಠಾನಗೊಳಿಸುವಂತೆ ಸೂಚಿಸಿದರು.