Advertisement

Bangaladesh illegal immigrants: ಕಾರ್ಮಿಕರ ಮಾಹಿತಿ ಸಂಗ್ರಹ ಆರಂಭಿಸಿದ ಪೊಲೀಸರು

11:43 PM Oct 17, 2024 | Team Udayavani |

ಉಡುಪಿ: ಮಲ್ಪೆಯಲ್ಲಿ 7 ಮಂದಿ ಬಾಂಗ್ಲಾ ಅಕ್ರಮ ವಲಸಿಗರನ್ನು ಪೊಲೀಸರು ಬಂಧಿಸಿದ ಅನಂತರದಲ್ಲಿ ಜಿಲ್ಲಾ ಪೊಲೀಸ್‌ ಇಲಾಖೆ, ಕರಾವಳಿ ಕಾವಲು ಪಡೆ ಭದ್ರತೆಯ ವಿಷಯವಾಗಿ ಇನ್ನಷ್ಟು ಎಚ್ಚೆತ್ತುಕೊಂಡಿವೆ.

Advertisement

ಜಿಲ್ಲೆಯ ವಿವಿಧ ಬಂದರು, ಕಟ್ಟಡ ನಿರ್ಮಾಣ ವಲಯ, ಫಿಶ್‌ಮೀಲ್‌ ಸಹಿತ ಹೊರ ರಾಜ್ಯದ ಕಾರ್ಮಿಕರು ಹೆಚ್ಚೆಚ್ಚು ಕಾರ್ಯನಿರ್ವಹಿಸುವ ಕಡೆಗಳಲ್ಲಿ ತೀವ್ರ ವಿಚಾರಣೆ ಹಾಗೂ ಮಾಹಿತಿ ಸಂಗ್ರಹ ಆರಂಭಿಸಿದ್ದಾರೆ. ಆನ್‌ಲೈನ್‌(ಗೂಗಲ್‌ಫಾರ್ಮೆಟ್‌) ಮೂಲಕ ಇಂತಹ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರ ರಾಜ್ಯದ ಕಾರ್ಮಿಕರ ಮಾಹಿತಿಯನ್ನು ಪಡೆದುಕೊಳ್ಳಲಾಗುತ್ತಿದೆ.

ತಮ್ಮ ವ್ಯಾಪ್ತಿಯ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹೊರ ರಾಜ್ಯದ ಕಾರ್ಮಿಕರ ವಿವರಗಳನ್ನು ತತ್‌ಕ್ಷಣವೇ ಸಲ್ಲಿಸಬೇಕು. ಎಷ್ಟು ಸಮಯದಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಯಾವ ರಾಜ್ಯದಿಂದ ಬಂದಿದ್ದಾರೆ. ಕರೆದುಕೊಂಡು ಬಂದಿರುವ ಏಜೆನ್ಸಿ ಹೀಗೆ ಹಲವು ಮಾಹಿತಿ ಸೇರಿದ ಗೂಗಲ್‌ ಫಾರ್ಮೆಟ್‌ ಭರ್ತಿ ಮಾಡಿ ಕಳುಹಿಸುವಂತೆ ಎಲ್ಲ ಸಂಸ್ಥೆಗಳಿಗೆ ಕರಾವಳಿ ಕಾವಲು ಪಡೆಯಿಂದ ಸಂದೇಶ ರವಾನಿಸಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಇಲಾಖೆಯಲ್ಲಿ ಮಾಹಿತಿಯೇ ಇಲ್ಲ
ಹೊರ ರಾಜ್ಯದ ಕಾರ್ಮಿಕರು ಎಷ್ಟಿದ್ದಾರೆ ಎಂಬ ನಿಖರ ಮಾಹಿತಿ ಕಾರ್ಮಿಕ ಇಲಾಖೆಯಲ್ಲಿ ಇಲ್ಲ. ಕಾರ್ಮಿಕ ಇಲಾಖೆ ಕೂಡ ಈ ಬಗ್ಗೆ ಹೆಚ್ಚು ಗಂಭೀರವಾದಂತಿಲ್ಲ. ಕರ್ನಾಟಕ ಹಾಗೂ ಜಿಲ್ಲೆಯ ಸಂಘಟಿತ, ಅಸಂಘಟಿತ ಕಾರ್ಮಿಕರ ಮಾತ್ರ ಮಾಹಿತಿ ಇಲಾಖೆ ಹೊಂದಿದೆ. ಆದರೆ ಹೊರ ರಾಜ್ಯದ ಎಷ್ಟು ಕಾರ್ಮಿಕರು ಜಿಲ್ಲೆಗೆ ಬರುತ್ತಿದ್ದಾರೆ. ಅದರಲ್ಲಿ ಎಷ್ಟು ಮಂದಿ ಮರಳಿದ್ದಾ, ಬಂದವರು ಎಲ್ಲಿದ್ದಾರೆ ಎಂಬ ಬಗ್ಗೆ ಪೂರ್ಣ ಮಾಹಿತಿ ಇಲಾಖೆಯಲ್ಲಿಲ್ಲ. ಸೇವಾ ಸಿಂಧು ಮೂಲಕ ಅಪ್‌ಲೋಡ್‌ ಮಾಡಲು ಸೂಚಿಸಿ ಸುಮ್ಮನಾಗಿದ್ದಾರೆ. ಆದರೆ ಅಪ್‌ಲೋಡ್‌ ಮಾಡಿದರ ಸಂಖ್ಯೆ ತೀರಾ ಕಡಿಮೆಯಿದೆ.

ಇಬ್ಬರು ಬಾಂಗ್ಲಾ ಪ್ರಜೆಗಳಿಗೆ ನ್ಯಾಯಾಂಗ ಬಂಧನ
ಉಡುಪಿ: ಕಾರ್ಕಳದ ಜೋಡುಕಟ್ಟೆಯಲ್ಲಿ ಬುಧವಾರ ವಶಕ್ಕೆ ಪಡೆಯಲಾಗಿದ್ದ ಇಬ್ಬರು ಬಾಂಗ್ಲಾ ಅಕ್ರಮ ವಲಸಿಗರನ್ನು ಗುರುವಾರ ನ್ಯಾಯಾಧೀಶರ ಎದುರು ಹಾಜರುಪಡಿಸಲಾಗಿದ್ದು, ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Advertisement

ಬಾಂಗ್ಲಾದ ರಾಜ್‌ಶಾಹಿ ಜಿಲ್ಲೆಯ ಮೊಹಮ್ಮದ್‌ ಇಮಾಮ್‌ ಶೇಖ್‌ (21) ಹಾಗೂ ಮೊಹಮ್ಮದ್‌ ರಿಮುಲ್‌ ಇಸ್ಲಾಂ (20) ಬಂಧಿತರು. ಒಂದು ವರ್ಷದಿಂದ ಇವರು ಜಿಲ್ಲೆಯ ವಿವಿಧೆಡೆ ಕಟ್ಟಡ ಕಾರ್ಮಿಕರಾಗಿದ್ದರು ಎನ್ನಲಾಗಿದೆ. ಇವರೊಂದಿಗಿದ್ದ ಮತ್ತೋರ್ವ ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದ್ದು, ಪೊಲೀಸರು ಆತನ ಪತ್ತೆಗೆ ಬಲೆ ಬೀಸಿದ್ದಾರೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ಈ ಕಾರ್ಯಾಚರಣೆ ನಡೆದಿದೆ. ಈ ಹಿಂದೆ ಮಲ್ಪೆಯಲ್ಲಿ ಬಂಧಿಸಲ್ಪಟ್ಟು ಪೊಲೀಸ್‌ ಕಸ್ಟಡಿಯಲ್ಲಿರುವ ಆರೋಪಿಗಳ ವಿಚಾರಣೆಯೂ ತೀವ್ರಗೊಂಡಿದ್ದು, ಅವರ ಮಾಹಿತಿ ಆಧಾರಿತ ಮತ್ತಷ್ಟು ತನಿಖೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಇಂಟೆಲಿಜೆನ್ಸ್‌ ವರದಿ ಸಲ್ಲಿಕೆ
ಈಗಾಗಲೇ ಬಾಂಗ್ಲಾಪ್ರಜೆಗಳ ಬಂಧನ ಸಂಖ್ಯೆ 10ಕ್ಕೇರಿದೆ. ಮತ್ತಷ್ಟು ಪ್ರಜೆಗಳು ಇಲ್ಲಿ ಇರುವ ಸಾಧ್ಯತೆಗಳ ನಿಟ್ಟಿನಲ್ಲಿ ಪೊಲೀಸರು ವಿವಿಧ ರೀತಿಯಲ್ಲಿ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಮುಖ್ಯವಾಗಿ ವಿವಿಧ ಕಾರ್ಖಾನೆಗಳು, ಕಟ್ಟಡ ನಿರ್ಮಾಣ, ಹೊಟೇಲ್‌ಗ‌ಳು, ಸೆಲೂನ್‌ಗಳಲ್ಲಿ ಇವರು ತಂಡೋಪ ತಂಡವಾಗಿ ಕೆಲಸ ಮಾಡುತ್ತಿರುವ ಬಗ್ಗೆ ಇಂಟೆಲಿಜೆನ್ಸ್‌ ಮಾಹಿತಿ ದೊರೆತಿದ್ದು, ಇಲಾಖೆಯ ಕೇಂದ್ರ ಕಚೇರಿಗೆ ಮಾಹಿತಿ ರವಾನಿಸಲಾಗಿದೆ.

ರಾಷ್ಟ್ರೀಯ ಭದ್ರತೆ ಆತಂಕ
ಕರ್ನಾಟಕದ ಕರಾವಳಿಯು ಒಂದರ್ಥದಲ್ಲಿ ದೇಶದ ಗಡಿಭಾಗವೂ ಹೌದು. ಹೀಗಾಗಿಯೇ ಕರಾವಳಿ ತೀರದಲ್ಲಿ ಕರಾವಳಿ ಕಾವಲು ಪಡೆ, ಅನಂತರ ಕೋಸ್ಟ್‌ಗಾರ್ಡ್‌(ರಕ್ಷಣ ಇಲಾಖೆ) ಭದ್ರತೆಯೂ ಇದೆ. ಆದರೆ ಮಲ್ಪೆ ಬಂದರಲಿನಲ್ಲಿ ಕನಿಷ್ಠ ಭದ್ರತೆಯೂ ಇಲ್ಲದೇ ಇರುವುದು ರಾಷ್ಟ್ರೀಯ ಭದ್ರತೆಯ ಬಗ್ಗೆಯೂ ಆತಂಕ ಸೃಷ್ಟಿಸಿದೆ. ಇಲ್ಲಿ ಯಾರು ಬೇಕಾದರೂ ಬರಬಹುದು ಹೋಗಬಹುದು.

ಯಾವ ರಾಜ್ಯದ ಬೋಟ್‌ ಪ್ರವೇಶಿಸಿದರೂ ಪೂರ್ಣ ಪ್ರಮಾಣದಲ್ಲಿ ವಿಚಾರಣೆಯೇ ಇರುವುದಿಲ್ಲ. ಹೀಗಾಗಿ ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದಲೂ ಬಂದರಿನ ಭದ್ರತೆ ಮುಖ್ಯವಾಗಿದೆ ಎಂಬ ಮಾತು ಕೇಳಿ ಬರುತ್ತಿದೆ. ಬಾಂಗ್ಲಾದ ಅಕ್ರಮ ವಲಸಿಗರು ಕಳೆದ 4-5 ವರ್ಷದಿಂದ ಜಿಲ್ಲೆಯಲ್ಲಿ ವಾಸವಿದ್ದು, ಇಲ್ಲಿನ ವಿಳಾಸದ ಪಾಸ್‌ಪೋರ್ಟ್‌ ಪಡೆದಿದ್ದಾರೆ ಎಂದಾದರೆ ಇದು ಗುಪ್ತಚಾರ ಇಲಾಖೆಯ ವೈಫ‌ಲ್ಯವೇ ಆಗಿರಬೇಕು ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ಹೊರ ರಾಜ್ಯದ ಕಾರ್ಮಿಕರ ಮಾಹಿತಿಯನ್ನು ಗೂಗಲ್‌ ಫಾರ್ಮೆಟ್‌ ಮೂಲಕ ಕಳುಹಿಸುವಂತೆ ಈಗಾಗಲೇ ಎಲ್ಲ ಸಂಸ್ಥೆಗಳಿಗೆ ಸೂಚನೆ ನೀಡಿದ್ದೇವೆ. ಬಹುತೇಕ ಕಡೆಗಳಲ್ಲಿ 2-3 ತಿಂಗಳಿಗೆ ಕಾರ್ಮಿಕರು ಬದಲಾಗುತ್ತಿರುತ್ತಾರೆ. ಹೀಗಾಗಿ ನಿಖರ ಮಾಹಿತಿ ಕಲೆ ಹಾಕುವುದು ನಮಗೂ ಸವಾಲಾಗಿದೆ.
-ಮಿಥುನ್‌, ಎಸ್‌ಪಿ, ಕರಾವಳಿ ಕಾವಲು ಪಡೆ

Advertisement

Udayavani is now on Telegram. Click here to join our channel and stay updated with the latest news.

Next