Advertisement

ಆಹಾರ ಕಲಬೆರಕೆಗೆ “ಅತ್ಯುಗ್ರ ಶಿಕ್ಷೆ’ನೀಡಿ

06:00 AM Sep 05, 2018 | Team Udayavani |

ಬೆಂಗಳೂರು: ಆಹಾರ ಕಲಬೆರಕೆ ಹಾಗೂ ಹಾನಿಕಾರಕ ಪದಾರ್ಥಗಳ ಮಾರಾಟಕ್ಕೆ “ಅತ್ಯುಗ್ರ ಶಿಕ್ಷೆ’ ನಿಗದಿಪಡಿಸುವಂತೆ ರಾಜ್ಯ ಕಾನೂನು ಆಯೋಗ
ವರದಿ ನೀಡಿದೆ. ಅದರಂತೆ, ಕಲಬೆರಕೆ ಮತ್ತು ಹಾನಿಕಾರಕ ಆಹಾರ ಪದಾರ್ಥಗಳ ಸೇವನೆಯಿಂದ ಪ್ರಾಣ ಹಾನಿ ಸಂಭವಿಸಿದರೆ, ಅಂತಹ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯನ್ನು ಜೀವಾವಧಿಗೆ ಪರಿವರ್ತಿಸುವ ಮತ್ತು 10 ಲಕ್ಷ ರೂ.ದಂಡ ವಿಧಿಸಲು ಅವಕಾಶವಾಗುವಂತೆ ಕಾನೂನಿಗೆ ತಿದ್ದುಪಡಿ ತರುವಂತೆ ಸರ್ಕಾರಕ್ಕೆ ಅದು ಶಿಫಾರಸು ಮಾಡಿದೆ.

Advertisement

ತಕ್ಷಣದ ಆರ್ಥಿಕ ಲಾಭಕ್ಕಾಗಿ ವ್ಯಕ್ತಿಗಳ ಆರೋಗ್ಯದ ಜತೆ ಚೆಲ್ಲಾಟವಾಡುವ ಆಹಾರ ಕಲಬೆರಕೆ ಹಾಗೂ ಹಾನಿಕಾರಕ ಪದಾರ್ಥ ಅಥವಾ ಪಾನೀಯಗಳ ಮಾರಾಟ ಜಾಲದ ಹೆಡೆಮುರಿ ಕಟ್ಟಲು ಕಠಿಣ ಕಾನೂನು ಮತ್ತು ಶಿಕ್ಷೆಯ ಅಗತ್ಯವಿದೆ. ಹಾಗಾಗಿ, ಈಗಿರುವ ಕಾನೂನಿಗೆ ತಿದ್ದುಪಡಿ ತರುವ ಅವಶ್ಯಕತೆಯಿದೆ, ಇದಕ್ಕಾಗಿ ಐಪಿಸಿ ಕಲಂ 272 ಮತ್ತು 273ಕ್ಕೆ ಅಗತ್ಯ ತಿದ್ದುಪಡಿ ತರುವಂತೆ ಕಾನೂನು ಆಯೋಗ ಹೇಳಿದೆ. ಈಚೆಗೆ ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ತನ್ನ 50ನೇ ವರದಿಯಲ್ಲಿ ಆಯೋಗವು, “ಮಾರಾಟದ ಉದ್ದೇಶದಿಂದ ಆಹಾರ ಅಥವಾ ಪಾನೀಯ ಪದಾರ್ಥಗಳಲ್ಲಿ ಕಲಬೆರಕೆ ಮಾಡಿದರೆ ಶಿಕ್ಷೆ ವಿಧಿಸುವ ಐಪಿಸಿ ಕಲಂ 272 ಹಾಗೂ ಹಾನಿಕಾರಕ ಆಹಾರ ಪದಾರ್ಥಗಳು ಅಥವಾ ಪಾನೀಯಗಳ ಮಾರಾಟ ಮಾಡಿದರೆ ಶಿಕ್ಷೆಗೊಳಪಡಿಸುವ ಐಪಿಸಿ ಕಲಂ 273ಗೆ ತಿದ್ದುಪಡಿಗಳನ್ನು ಸೂಚಿಸಿದೆ.

ಈಗಿರುವ ಕಾನೂನಿನಲ್ಲಿ ಆಹಾರ ಕಲಬೆರಕೆ ಮತ್ತು ಹಾನಿಕಾರಕ ಪದಾರ್ಥಗಳ ಮಾರಾಟಕ್ಕೆ ಒಂದೇ ರೀತಿಯ ಶಿಕ್ಷೆಯಿದೆ. ಅಲ್ಲದೆ, ಆ ಶಿಕ್ಷೆ ಮತ್ತು ದಂಡದ  ಪ್ರಮಾಣ ತೀರಾ ಕಡಿಮೆಯಾಗಿದೆ. ಹಾಗಾಗಿ, ಕಲಬೆರಕೆ ಆಹಾರ ಪದಾರ್ಥಗಳು ಅಥವಾ ಪಾನೀಯಗಳ ಸೇವನೆಯಿಂದ ಆಗುವ ಹಾನಿಯ ಪ್ರಮಾಣ ಮತ್ತು ತೀವ್ರತೆ ಆಧರಿಸಿ ಶಿಕ್ಷೆಯ ಅವಧಿ ಹಾಗೂ ದಂಡದ ಪ್ರಮಾಣ ನಿಗದಿಪಡಿಸುವಂತೆ ವರದಿಯಲ್ಲಿ ಹೇಳಲಾಗಿದೆ. ಮಾರಾಟದ ಉದ್ದೇಶದಿಂದ ಆಹಾರ ಪದಾರ್ಥ ಅಥವಾ ಪಾನೀಯಗಳಲ್ಲಿ ಕಲಬೆರಕೆ ಮಾಡಿದರೆ ಹಾಗೂ ಹಾನಿಕಾರಕ ಆಹಾರ ಪದಾರ್ಥಗಳು ಅಥವಾ ಪಾನೀಯಗಳನ್ನು ಮಾರಾಟ ಮಾಡಿದರೆ ಈಗಿರುವ ಕಾನೂನಿನಲ್ಲಿ ಐಪಿಸಿ ಕಲಂ 272 ಮತ್ತು 273 ಪ್ರಕಾರ 6 ತಿಂಗಳಿಗೆ ವಿಸ್ತರಿಸಬಹುದಾದ
ಶಿಕ್ಷೆ ಹಾಗೂ 1 ಸಾವಿರ ರೂ.ವರೆಗೆ ವಿಸ್ತರಿಸಬಹುದಾದ ದಂಡ ವಿಧಿಸಲು ಅವಕಾಶವಿದೆ. ಆದರೆ, ಆಹಾರ ಕಲಬೆರಕೆಯ ಈಗಿನ ಗಂಭೀರತೆ ಪರಿಗಣಿಸಿದರೆ ಈ ಶಿಕ್ಷೆ ಮತ್ತು ದಂಡ ಯಾವ ಲೆಕ್ಕಕ್ಕೂ ಇಲ್ಲ. ಕಠಿಣ ಶಿಕ್ಷೆ ಇಲ್ಲದಿದ್ದರೆ ವ್ಯಕ್ತಿಗಳ ಆರೋಗ್ಯ, ಪ್ರಾಣ ಮತ್ತು ಸಮಾಜದ ಸ್ವಾಸ್ಥ್ಯಕ್ಕೆ ಮಾರಕವಾಗಿರುವ ಆಹಾರ ಕಲಬೆರಕೆ ಮಾರಾಟ ಜಾಲಕ್ಕೆ ಕಡಿವಾಣ ಹಾಕಲು ಸಾಧ್ಯವಿಲ್ಲ ಎಂದು ಆಯೋಗವು ಅಭಿಪ್ರಾಯಪಟ್ಟಿದೆ.

ಆಯೋಗದ ಶಿಫಾರಸುಗಳು 
ಮಾರಾಟದ ಉದ್ದೇಶದಿಂದ ಆಹಾರ ಪದಾರ್ಥಗಳು ಅಥವಾ ಪಾನೀಯಗಳಲ್ಲಿ ಕಲಬೆರಕೆ ಮಾಡಿದರೆ ಶಿಕ್ಷೆ ವಿಧಿಸುವ ಐಪಿಸಿ ಕಲಂ 272ಗೆ
ತಿದ್ದುಪಡಿ ತಂದು, ಯಾವುದೇ ಹಾನಿ ಅಥವಾ ಗಾಯ ಉಂಟು ಮಾಡದ ಆಹಾರ ಕಲಬೆರಕೆ ಪ್ರಕರಣಗಳಲ್ಲಿ 6 ತಿಂಗಳು ಶಿಕ್ಷೆ ಹಾಗೂ 1 ಲಕ್ಷ
ರೂ.ದಂಡ ವಿಧಿಸಬೇಕು. 

ಗಂಭೀರ ಸ್ವರೂಪವಲ್ಲದ ಗಾಯ ಅಥವಾ ಹಾನಿ ಉಂಟಾದ ಪ್ರಕರಣಗಳಲ್ಲಿ ಒಂದು ವರ್ಷ ಶಿಕ್ಷೆ ಹಾಗೂ ಮೂರು ಲಕ್ಷ ರೂ.ದಂಡ, ಗಂಭೀರ
ಸ್ವರೂಪದ ಗಾಯ ಅಥವಾ ಹಾನಿ ಉಂಟಾದ ಪ್ರಕರಣಗಳಲ್ಲಿ 6 ವರ್ಷ ಶಿಕ್ಷೆ ಹಾಗೂ 5 ಲಕ್ಷ ರೂ.ದಂಡ, ಪ್ರಾಣ ಹಾನಿ ಸಂಭವಿಸಿದ ಪ್ರಕರಣಗಳಲ್ಲಿ ಏಳು ವರ್ಷದಿಂದ ಜೀವಾವಧಿವರೆಗೆ ಪರಿವರ್ತಿಸಬಹುದಾದ ಶಿಕ್ಷೆ ಹಾಗೂ 10 ಲಕ್ಷ ರೂ. ಗೆ ಕಡಿಮೆ ಇಲ್ಲದಂತೆ ದಂಡ ವಿಧಿಸಬೇಕು.

Advertisement

ಅದೇ ರೀತಿ ಹಾನಿಕಾರಕ ಪದಾರ್ಥಗಳ ಮತ್ತು ಪಾನೀಯಗಳ ಮಾರಾಟಕ್ಕೂ ಇದೇ ಶಿಕ್ಷೆ ಅನ್ವಯವಾಗಲು ಐಪಿಸಿ ಕಲಂ 273ಗೆ ತಿದ್ದುಪಡಿ
ತರಬೇಕು.

ಆಹಾರ ಕಲಬೆರಕೆಯಿಂದ ಆಗುತ್ತಿರುವ ಅನಾಹುತಗಳನ್ನು ಪರಿಗಣಿಸಿ ಮತ್ತು ಇದಕ್ಕೆ ಕಠಿಣ ಶಿಕ್ಷೆ ನಿಗದಿಯಾಗಬೇಕು ಎಂದು ಕೇಳಿ ಬರುತ್ತಿದ್ದ ಬೇಡಿಕೆಗಳನ್ನು ಪರಿಗಣಿಸಿ ಸಮಾಜದ ಬಗೆಗಿನ ಕಾಳಜಿಯಿಂದ ಆಯೋಗವು ಸ್ವಯಂ ಪ್ರೇರಿತವಾಗಿ ಅಧ್ಯಯನ ನಡೆಸಿ ಸೂಕ್ತ ಕಾನೂನು ತಿದ್ದುಪಡಿಗಳನ್ನು ತರುವಂತೆ ಶಿಫಾರಸು ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಅದನ್ನು ಒಪ್ಪುವುದು, ಬಿಡುವುದು ಸರ್ಕಾರಕ್ಕೆ ಬಿಟ್ಟ ವಿಚಾರ.
● ನ್ಯಾ. ಎಸ್‌.ಆರ್‌. ನಾಯಕ್‌, ಅಧ್ಯಕ್ಷರು, ರಾಜ್ಯ ಕಾನೂನು ಆಯೋಗ.

ರಫೀಕ್ ಅಹ್ಮದ್

Advertisement

Udayavani is now on Telegram. Click here to join our channel and stay updated with the latest news.

Next