ಕಲಬುರಗಿ: ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಶಾಲೆಗಳು, ಆಸ್ಪತ್ರೆಗಳು ಮತ್ತು ಜನರಿಗೆ ಶುದ್ಧವಾದ ಕುಡಿವ ನೀರು ಒದಗಿಸಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಮುಖ್ಯಮಂತ್ರಿಗಳಿಗೆ ಕ್ಷೇತ್ರದ ಸಮಸ್ಯೆಗಳನ್ನು ನೇರವಾಗಿ ಗಮನಕ್ಕೆ ತಂದು ಅನುದಾನ ತರಲಾಗುತ್ತಿದೆ ಎಂದು ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕ ಬಸವರಾಜ್ ಮತ್ತಿಮಡು ಹೇಳಿದರು.
ತಾಲೂಕಿನ ವಿ.ಕೆ.ಸಲಗರದಲ್ಲಿ ಸೋಮವಾರ ಒಟ್ಟು 3.80 ಕೋಟಿ ರೂ.ಗಳ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶದ ಮಕ್ಕಳು ಮೆಟ್ರಿಕ್ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ. ಅವರಿಗೆ ಇನ್ನಷ್ಟು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಎಲ್ಲ ಸೌಕರ್ಯ ಇರುವ ಶಾಲೆಗಳು ಮತ್ತು ಶಾಲಾ ಕೊಠಡಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ ದಲಿತರ ಕಾಲೊನಿಯಲ್ಲಿ ಸಿಸಿ ರಸ್ತೆಗಳು, ಚರಂಡಿ ನಿರ್ಮಾಣ ಅಂಗನವಾಡಿ ಕಟ್ಟಡ ನಿರ್ಮಾಣವೂ ಸೇರಿದಂತೆ ನಾನಾ ಕಾಮಗಾರಿಗಳಿಗೆ ಚಾಲನೆ ನೀಡಿದ್ದೇನೆ. ಮುಂದಿನ ದಿನಗಳಲ್ಲಿ ಉತ್ತಮ ಗುಣಮಟ್ಟದ ಕಾಮಗಾರಿಗಳನ್ನು ಮಾಡುವ ಮೂಲಕ ಕ್ಷೇತ್ರದಲ್ಲಿ ಅಭಿವೃದ್ಧಿ ನಾಗಾಲೋಟದಲ್ಲಿ ನಡೆಯಲಿದೆ ಎಂದರು.
ಬಿಜೆಪಿ ಸರಕಾರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಮುಖ್ಯಮಂತ್ರಿ ಬೊಮ್ಮಾಯಿ ಅವರು ಕಲಬುರಗಿ ಜಿಲ್ಲೆಯ ಅಭಿವೃದ್ಧಿ ಕಂಕಣ ಕಟ್ಟಿದ್ದಾರೆ. ಅದರೊಂದಿಗೆ ಕೆಕೆಆರ್‌ಡಿಬಿಯಿಂದಲೂ ಅಭಿವೃದ್ಧಿ ಕೆಲಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಗ್ರಾಮೀಣ ಕ್ಷೇತ್ರದಲ್ಲಿ ಗ್ರಂಥಾಲಯಗಳನ್ನು ಹೆಚ್ಚಳ ಮಾಡುವುದು ಕೂಡ ನಮ್ಮ ಉದ್ದೇಶವಿದೆ. ಯುವಕರಿಗೆ ಆಟ, ಪಾಠದ ಜತೆಯಲ್ಲಿ ಜ್ಞಾನವೂ ಸಿಗಲಿ ಎನ್ನುವುದ ನಮ್ಮ ಆಶಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ| ರಾಜಶೇಖರ್ ಮಾಲಿ, ಬಿಜೆಪಿ ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷ ಸಿದ್ಧಣ್ಣಗೌಡ ಪಾಟೀಲ್ ಧಮ್ಮೂರ, ಗ್ರಾಮೀಣ ಮಂಡಲ ಅಧ್ಯಕ್ಷ ಸಂಗಮೇಶ ವಾಲಿ, ಮಾಜಿ ಜಿ ಪಂ ಅಧ್ಯಕ್ಷರಾದ ಶಿವಪ್ರಭು ಪಾಟೀಲ್, ಗ್ರಾಮೀಣ ಮಂಡಲ ಉಪಾಧ್ಯಕ್ಷ ಸತೀಶ್ ಪಾಟೀಲ್ , ಮಾಜಿ ತಾಪಂ ಉಪಾಧ್ಯಕ್ಷ ದೀಪಕ್ ಸಲಗರ, ವಿಕೆ ಸಲಗರ ಗ್ರಾಪಂ ಅಧ್ಯಕ್ಷ ಖೇಮಲಿಂಗ ಡೂರ, ಬಿಜೆಪಿ ಯುವ ಮುಖಂಡ ಸತೀಶ್ ಸರೋಡೆ, ರಾಜಕುಮಾರ್ ಮಂಠಾಳೆ, ವೀರೂ ಸ್ವಾಮಿ ನರೋಣಾ, ಅನೂಪ ಸಲಗರ , ಸೇರಿದಂತೆ ಅಧಿಕಾರಿಗಳು, ಎಸ್‌ಡಿಎಂಸಿ ಸದಸ್ಯರು, ಗುತ್ತಿಗೆದಾರರು, ಪಕ್ಷದ ಮುಖಂಡರು ಕಾರ್ಯಕರ್ತರು ಗ್ರಾಮಸ್ಥರು ಮತ್ತಿತರರು ಉಪಸ್ಥಿತರಿದ್ದರು.