ದಾವಣಗೆರೆ: ಸರ್ಕಾರಿ ಹಾಸ್ಟೆಲ್‌ಗಳ ಸಮಸ್ಯೆ ಬಗೆಹರಿಸಿ ವಿದ್ಯಾರ್ಥಿಸ್ನೇಹಿ ವಾತಾವರಣ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿ ಗುರುವಾರ ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ) ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ರಾಜ್ಯದಲ್ಲಿ ಶಿಕ್ಷಣದ ಪ್ರಮುಖ ಭಾಗವಾಗಿರುವ ಸರ್ಕಾರಿ ಹಾಸ್ಟೆಲ್‌ಗಳ ಸ್ಥಿತಿ ಶೋಚನೀಯವಾಗಿದೆ. ಬಡ ಮತ್ತು ಪ್ರತಿಭಾವಂತ ವಿದ್ಯಾಸಕ್ತ ವಿದ್ಯಾರ್ಥಿ ಸಮುದಾಯಕ್ಕೆ ಅನ್ನ, ವಸತಿ ಒದಗಿಸುವ ಉದ್ದೇಶದ ಹಾಸ್ಟೆಲ್‌ಗಳು ಅಧ್ವಾನ ಸ್ಥಿತಿಯಲ್ಲಿವೆ. ಅನೇಕ ಹಾಸ್ಟೆಲ್‌ಗಳಲ್ಲಿ ಅತ್ಯಗತ್ಯ ಮೂಲಭೂತ ಸೌಲಭ್ಯಗಳೇ ಇಲ್ಲದೆ ವಿದ್ಯಾರ್ಥಿ, ವಿದ್ಯಾರ್ಥಿನಿಯರು ತೀವ್ರ ಸಮಸ್ಯೆ ಅನುಭವಿಸುವಂತಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.
ಕೆಲವಾರು ಸರ್ಕಾರಿ ಹಾಸ್ಟೆಲ್‌ಗಳಿಗೆ ಸ್ವಂತ ಕಟ್ಟಡ ಇಲ್ಲದ ಕಾರಣಕ್ಕೆ ಕಿಷ್ಕಿಂಧೆಯಂತಹ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಆದರೆ, ಅಂತಹ ಕಡೆ ಒಂದೇ ಒಂದು ಮೂಲಭೂತ ಸೌಲಭ್ಯಗಳೇ ಇರುವುದಿಲ್ಲ. ಓದಬೇಕು ಎಂಬ ಕಾರಣಕ್ಕೆ ಅನೇಕ ವಿದ್ಯಾರ್ಥಿಗಳು ಅನಿವಾರ್ಯವಾಗಿ ಪರಿಸ್ಥಿತಿಗೆ ಹೊಂದಿಕೊಂಡು ಹೋಗುತ್ತಿದ್ದಾರೆ. ಅದನ್ನೇ ಬಂಡವಾಳವನ್ನಾಗಿ ಮಾಡಿಕೊಂಡಿರುವ ಸರ್ಕಾರ, ಹಾಸ್ಟೆಲ್‌ಗಳಲ್ಲಿ ಯಾವುದೇ ಸೌಲಭ್ಯ ಒದಗಿಸುವುದಕ್ಕೆ ಮುಂದಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ಹಾಸ್ಟೆಲ್‌ಗಳಿಗಾಗಿಯೇ ಕೋಟ್ಯಾಂತರ ರೂಪಾಯಿ ವೆಚ್ಚ ಮಾಡುತ್ತಿದೆ. ಆದರೆ, ಅನೇಕ ಕಡೆ ವಿದ್ಯಾರ್ಥಿಗಳಿಗೆ ಪೌಷ್ಟಿಕ ಆಹಾರ ದೊರೆಯುತ್ತಿಲ್ಲ. ಕುಡಿಯುವ ನೀರಿಲ್ಲ. ಶೌಚಾಲಯ ಇಲ್ಲವಾದರೂ ಕೋಟಿಗಟ್ಟಲೆ ಹಣ ಖರ್ಚಾಗುತ್ತಲೇ ಇರುತ್ತದೆ. ಮಕ್ಕಳಿಗೆ ನೀಡಲಿಕ್ಕೆ ಖರೀದಿಸಿರುವಂತಹ ಹಾಸಿಗೆ-ದಿಂಬು ಅನೇಕಾನೇಕ ಹಾಸ್ಟೆಲ್‌ಗಳನ್ನು ತಲುಪಿಯೇ ಇಲ್ಲ. ವಿದ್ಯಾರ್ಥಿನಿಯರ ಹಾಸ್ಟೆಲ್‌ಗಳಲ್ಲಿ ಪುರುಷ ವಾರ್ಡನ್ ಇರುವುದನ್ನ ನೋಡಿದರೆ ಸರ್ಕಾರ ವಿದ್ಯಾರ್ಥಿನಿಯರ ಹಿತರಕ್ಷಣೆಗೆ ಎಷ್ಟು ಗಮನ ನೀಡುತ್ತದೆ ಎಂಬುದು ಗೊತ್ತಾಗುತ್ತದೆ ಎಂದು ದೂರಿದರು. ಎಲ್ಲಾ ಹಾಸ್ಟೆಲ್‌ಗಳಿಗೆ ಸ್ವಂತ ಕಟ್ಟಡ, ಅಗತ್ಯ ಮೂಲಭೂತ ಸೌಲಭ್ಯ, ಆಹಾರ ವೆಚ್ಚ 1,400 ರಿಂದ 2 ಸಾವಿರಕ್ಕೆ ಹೆಚ್ಚಳ, ವಿದ್ಯಾರ್ಥಿ ಸಂಖ್ಯೆಗೆ ಅನುಗುಣವಾಗಿ ಹೊಸ ಹಾಸ್ಟೆಲ್‌ಗಳ ಪ್ರಾರಂಭ ಒಳಗೊಂಡಂತೆ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿ ಉಪ ವಿಭಾಗಾಧಿಕಾರಿ ಕಚೇರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಎಬಿವಿಪಿ ನಗರ ಕಾರ್ಯದರ್ಶಿ ರಾಕೇಶ್, ಜನಾರ್ದನ್, ಪ್ರದೀಪ್, ಶಶಾಂಕ್, ರಾಮು, ಯೋಗಾನಂದ್ ಇತರರು ಇದ್ದರು.