ಮದ್ದೂರು: ಕುಡಿಯುವ ನೀರು ಸಮಸ್ಯೆ ಎದುರಾಗದಂತೆ ಅಧಿಕಾರಿಗಳು ಅಗತ್ಯ ಕ್ರಮ ವಹಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ ತಿಳಿಸಿದರು. ಕೋವಿಡ್ ತಡೆ ಸಂಬಂಧದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಕೆಲ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಸರ್ಕಾರದಿಂದ ಬಿಡುಗಡೆಯಾಗಿರುವ ಅನುದಾನ ಸಮರ್ಪಕವಾಗಿ ಬಳಸಿಕೊಂಡು ಕುಡಿಯುವ ನೀರಿನ ಸಮಸ್ಯೆಯಾಗದಂತೆ ಎಚ್ಚರಿಕೆ ವಹಿಸಬೇಕೆಂದು ಸೂಚಿಸಿದರು.
ಜಿಲ್ಲೆಯಲ್ಲಿ ಈಗಾಗಲೇ ಕೋವಿಡ್ ನಿಯಂತ್ರಣಕ್ಕೆ ಬಂದಿದ್ದು ಸಾರ್ವಜನಿಕರು ಮತ್ತಷ್ಟು ಜಾಗೃತಿ ವಹಿಸಿದಲ್ಲಿ ಸಂಪೂರ್ಣ ನಿರ್ಮೂಲನೆ ಸಾಧ್ಯವಾಗುತ್ತದೆ ಎಂದರು. ತಾಲೂಕಲ್ಲಿ ಕೆಲ ನ್ಯಾಯಬೆಲೆ ಅಂಗಡಿಗಳು ಪಡಿತರದಾರರಿಂದ ಹಣ ಪಡೆಯುತ್ತಿರುವುದು ತಮ್ಮ ಗಮನಕ್ಕೆ ಬಂದಿದೆ. ಅಂತಹ ಅಂಗಡಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದೆಂದು ಎಚ್ಚರಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಆಹಾರ ಶಿರಸ್ತೇದಾರ್ ರಾಜು, ಪಡಿತರ ಚೀಟಿದಾರರಿಂದ ಹಣ ವಸೂಲಿ ಮಾಡುತ್ತಿರುವ ನ್ಯಾಯಬೆಲೆ ಅಂಗಡಿಗಳಿಗೆ ನೋಟಿಸ್ ಜಾರಿ ಮಾಡಿದ್ದು, ಈಗಾಗಲೇ ತಾಲೂಕಿನ ಹಳ್ಳಿಕೆರೆ, ತೊಪ್ಪನಹಳ್ಳಿ ನ್ಯಾಯಬೆಲೆ ಅಂಗಡಿಗಳನ್ನು ಅಮಾನತುಗೊಳಿಸಿದ್ದು ಮೇ ತಿಂಗಳ ಆಹಾರ ಪದಾರ್ಥ ವಿತರಿಸಲು ಕ್ರಮ ವಹಿಸಿರುವುದಾಗಿ ಸಚಿವರಿಗೆ ವಿವರಿಸಿದರು.
ತಾಲೂಕಿನ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಸುನೀಲ್ ಸೋಮನಹಳ್ಳಿ ಜಿಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಹಾಳಾಗಿರುವ ಶುದ್ಧ ನೀರಿನ ಘಟಕಗಳನ್ನು ವಾರದೊಳಗೆ ದುರಸ್ತಿಗೊಳಿಸುವ ಜತೆಗೆ ಅಗತ್ಯವಿರುವೆಡೆ ಕೊಳವೆ ಬಾವಿ ಕೊರೆಸಲು ಅಧಿಕಾರಿಗಳಿಗ ಸೂಚಿಸಿದರು. ಈ ವೇಳೆ ಎಎಸ್ಪಿ ಶೋಭಾರಾಣಿ, ತಹಶೀಲ್ದಾರ್ ವಿಜಯಕುಮಾರ್, ತಾಪಂ ಇಒ ಮುನಿರಾಜು, ಡಾ.ಆಶಾಲತಾ, ಮಹದೇವು, ಶಾಂತರಾಜು ಇತರರಿದ್ದರು.