Advertisement
ಸುಪ್ರೀಂ ಕೋರ್ಟ್ ಸೂಚನೆ ಮೇರೆಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್.ರಾಜು ಶಾಸಕರ ಭದ್ರತೆ ವಿಚಾರ ಕುರಿತು ಶುಕ್ರವಾರ ಕಾನೂನು ಸುವ್ಯವಸ್ಥೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಕಮಲ್ ಪಂತ್, ಕೆಎಸ್‌ಆರ್‌ಪಿ ಎಡಿಜಿಪಿ ಭಾಸ್ಕರ್ ರಾವ್, ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಹಾಗೂ ಇತರೆ ಅಧಿಕಾರಿಗಳ ಜತೆ ತುರ್ತು ಸಭೆ ನಡೆಸಿದ್ದು, ಯಾವುದೇ ಸಂದರ್ಭದಲ್ಲಿಯೂ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸುವಂತೆ ಸೂಚಿಸಿದ್ದಾರೆ.
Related Articles
Advertisement
ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್‌ಗೆ ಹೈದರಾಬಾದ್‌ನಿಂದ ಆಗಮಿಸುವ ವಿಪಕ್ಷಗಳ ಶಾಸಕರಿಗೆ ವಿಧಾನಸೌಧಕ್ಕೆ ಬರುವವರೆಗೆ ಸೂಕ್ತ ಭದ್ರತೆಯ ಹೊಣೆ ನೀಡಲಾಗಿದೆ. ಹೈದಾರಾಬಾದ್‌ನಿಂದ ಶಾಸಕರು ನಗರ ಪ್ರವೇಶಿಸುತ್ತಿದ್ದಂತೆ ಭಾರಿ ಭದ್ರತೆಯಲ್ಲಿ ವಿಧಾನಸೌಧಕ್ಕೆ ಕರೆತರಲಾಗುವುದು.
ಈ ಹಿನ್ನೆಲೆಯಲ್ಲಿ ಬಿ.ಕೆ.ಸಿಂಗ್, ಕೇಂದ್ರ ವಿಭಾಗದ ಡಿಸಿಪಿ ಚಂದ್ರಗುಪ್ತಾ ಜತೆ ವಿಧಾನಸೌಧ ಪರಿಶೀಲಿಸಿದ್ದು, ಎಲ್ಲೆಡೆ ಸಿಸಿಟಿವಿ ಕ್ಯಾಮೆರಾ ಅಳವಡಿಸುವಂತೆ ಸೂಚಿಸಿದ್ದಾರೆ. ಜತೆಗೆ ಶನಿವಾರ ವಿಧಾನಸೌಧಕ್ಕೆ ಮಾಧ್ಯಮ ಪ್ರತಿನಿಧಿಗಳು ಹಾಗೂ ಶಾಸಕರ ಆಪ್ತ ಸಹಾಯಕರನ್ನು ಹೊರತು ಪಡಿಸಿ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಕ್ಕೆ ಸೂಚಿಸಿದ್ದಾರೆ.
ಬೆಳಗ್ಗೆ 6 ಗಂಟೆಗೇ ನಿಷೇಧಾಜ್ಞೆ ಜಾರಿ: ಶನಿವಾರ ಸಂಜೆಯೊಳಗೆ ಬಿಜೆಪಿ ಪಕ್ಷಕ್ಕೆ ಬಹುಮತ ಸಾಬೀತು ಪಡಿಸಲು ಸುಪ್ರೀಂ ಕೋರ್ಟ್ ಸೂಚಿಸಿರುವ ಹಿನ್ನೆಲೆಯಲ್ಲಿ ಮೇ 19ರಂದು ಬೆಳಗ್ಗೆ 6 ಗಂಟೆಯಿಂದ ತಡರಾತ್ರಿ 12 ಗಂಟೆವರೆಗೆ ವಿಧಾನಸೌಧ ಸುತ್ತಮುತ್ತ 2 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ನಗರ ಪೊಲೀಸ್ ಆಯುಕ್ತ ಟಿ.ಸುನಿಲ್ ಕುಮಾರ್ ಆದೇಶಿಸಿದ್ದಾರೆ. ಆದೇಶದಂತೆ ಗುಂಪು ಗುಂಪಾಗಿ ನಿಲ್ಲುವುದು, ಮಾರಕಾಸ್ತ್ರಗಳನ್ನು ಹಿಡಿದು ಓಡಾಡುವುದು, ಸ್ಫೋಟಕ ವಸ್ತುಗಳನ್ನು ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ.