ಹುಬ್ಬಳ್ಳಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸೋಮವಾರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯಿಂದ ಸೋಮವಾರ ಪ್ರತಿಭಟನೆ ನಡೆಸಿ, ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು.
ಕೊರೊನಾ ಸಂದಿಗ್ಧ ಸ್ಥಿತಿಯಲ್ಲಿ ದೇಶದ ಆಸ್ತಿಗಳನ್ನು ಮಾರಾಟ ಮಾಡಲು ಹೋಗುತ್ತಿರುವ ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನಕಾರರು ಹರಿಹಾಯ್ದರು. ಕೇಂದ್ರ ಸರಕಾರ ರೈಲ್ವೆ, ಎಲ್‌ಐಸಿ ಸೇರಿದಂತೆ ಎಲ್ಲವನ್ನೂ ಮಾರಲು ಹೊರಟಿರುವುದನ್ನು ಕೂಡಲೇ ಕೈ ಬಿಡಬೇಕೆಂದು ಒತ್ತಾಯಿಸಿದರು.
ದೇಶದ ಕಾರ್ಮಿಕ ವರ್ಗದ ಜನರ ಬದುಕಿನಲ್ಲಿ ಹಿಂದೆಂದೂ ಕಾಣದ ಬಿರುಗಾಳಿಯನ್ನೆಬ್ಬಿಸಿದೆ. ಲಾಕ್ ಡೌನ್‌ನಿಂದ ದೊಡ್ಡ ಪ್ರಮಾಣದ ಉದ್ಯೋಗ ನಷ್ಟವಾಗಿದೆ. ಇಂಡಿಯನ್ ಎಕಾನಮಿಯ ವರದಿ ಪ್ರಕಾರ ನಗರ ಪ್ರದೇಶದ ನಿರುದ್ಯೋಗ ಪ್ರಮಾಣ ಶೇ.30ಕ್ಕೆ ಏರಿದೆ. ಬೃಹತ್ ಕಾರ್ಪೋರೇಟ್ ಉದ್ಯಮಪತಿಗಳ ಪರ ವಕ್ತಾರನಂತಾಗಿರುವ ಕೇಂದ್ರ ಸರ್ಕಾರ ಬಿಜೆಪಿ ಆಳ್ವಿಕೆಯ ರಾಜ್ಯ ಸರ್ಕಾರಗಳ ಮೂಲಕ ಪ್ರಜಾಪ್ರಭುತ್ವ ವಿರೋ ಧಿ ನೀತಿ ಅನುಸರಿಸುತ್ತಿದೆ. ಸುಗ್ರೀವಾಜ್ಞೆಗಳ ಮೂಲಕ ಕಾರ್ಮಿಕ ವಿರೋಧಿ, ಕಾರ್ಮಿಕ ಕಾನೂನುಗಳ ಬದಲಾವಣೆ, ರೈತ ವಿರೋಧಿ ಭೂ ಸಂಬಂಧಿ ಕಾನೂನುಗಳ ಬದಲಾವಣೆ ತರಲು ಹೊರಟಿದೆ. ದೊಡ್ಡ ದೊಡ್ಡ ಕಾರ್ಖಾನೆಗಳ ಕಾಯಿದೆಯಲ್ಲಿ ತಂದಿರುವ ತಿದ್ದುಪಡಿಗಳು ರಾಜ್ಯದ ಶೇ.50 ಭಾಗ ಸಂಘಟಿತ ವಲಯದ ಕಾರ್ಮಿಕರಿಗೆ ಮೂಲಭೂತ ಹಕ್ಕುಗಳಾದ ಕೆಲಸದ ಅವಧಿ , ಓವರ್ ಟೈಮ್ ಭತ್ಯೆ, ಸುರಕ್ಷತೆ, ಗಳಿಕೆ ರಜೆಯಂತಹ ಸೌಲಭ್ಯಗಳಿಂದ ನಿರಾಕರಿಸಿ ಹೊರದೂಡಿದೆ.
ಕಾರ್ಮಿಕ ಮುಖಂಡರಾದ ಮಹೇಶ ಪತ್ತಾರ, ದೇವಾನಂದ ಜಗಾಪೂರ, ಅಶೋಕ ಬಾರ್ಕಿ, ಗಂಗಾಧರ ಬಡಿಗೇರ, ಬಾಬಾಜಾನ ಮುಧೋಳ, ವಿಜಯ ಗುಂಟ್ರಾಳ, ಗುರುಸಿದ್ದಪ್ಪ ಅಂಬಿಗೇರ, ವಿದ್ಯಾ ನಾಶಿಪುಡಿ, ಗಂಗಮ್ಮ ಹೆಬ್ಬಳ್ಳಿ, ಬಿ.ವಿ.ಕೋರಿಮಠ, ಎಂ.ಎಚ್.ಮುಲ್ಲಾ, ಚಿದಾನಂದ ಸವದತ್ತಿ, ರಮೇಶ ಭೂಸ್ಲೆ, ಹುಲಿಗೆಮ್ಮ ಚಲವಾದಿ, ಶಿವಣ್ಣ ಹುಬ್ಬಳ್ಳಿ, ಪೀತಾಂಬ್ರಪ್ಪ ಬಿಳಾರ, ಅಶ್ರಫ್ ಅಲಿ ಇನ್ನಿತರರಿದ್ದರು.