ಕಾರವಾರ: ರಾಜ್ಯದಲ್ಲಿ ಪೆಟ್ರೋಲ್ ಬೆಲೆ 100 ರೂಪಾಯಿ ಗಡಿ ದಾಟಿದ್ದನ್ನ ವಿರೋಧಿಸಿ ಕಾರವಾರದಲ್ಲಿ ಸೋಮವಾರ ವಿಧಾನಪರಿಷತ್ ಸದಸ್ಯ, ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್ ನೇತೃತ್ವದಲ್ಲಿ ಕಾಂಗ್ರೆಸ್ಸಿಗರು ಪ್ರತಿಭಟನೆ ನಡೆಸಿದರು.
ಜಿಲ್ಲಾ ಕಾಂಗ್ರೆಸ್ ಘಟಕದ ವತಿಯಿಂದ ಕಾರವಾರದ ಸುಭಾಷ ವೃತ್ತದಲ್ಲಿ ಪೆಟ್ರೋಲ್ ಬಂಕ್ ಎದುರು ಪೆಟ್ರೋಲ್ 100 ನಾಟೌಟ್, ಆಟ ಇನ್ನೂ ನಡೆಯುತ್ತಿದೆ ಎನ್ನುವ ಬ್ಯಾನರ್ ಹಿಡಿದು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
2014 ರಿಂದ 2021ರ ವರೆಗೆ ಪ್ರಧಾನಿ ನರೇಂದ್ರಮೋದಿ ನೇತೃತ್ವದ ಬಿಜೆಪಿ ಸರ್ಕಾರ ಪೆಟ್ರೋಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಯನ್ನ ಗಗನಕ್ಕೆ ಏರಿಸಿರುವುದರ ಕುರಿತು ಖಂಡನೆ ವ್ಯಕ್ತಪಡಿಸಿದ್ದು ಬೆಲೆಗಳನ್ನ ಇಳಿಕೆ ಮಾಡಬೇಕು ಎಂದು ಒತ್ತಾಯಿಸಿದರು.
ಇನ್ನು ಕೊರೊನಾ ಕಾರಣದಿಂದ ಬೆಲೆ ಏರಿಕೆ ಸಂಭವಿಸುತ್ತಿದೆ ಎಂದು ಬಿಜೆಪಿ ಸಮರ್ಥಿಸಿಕೊಳ್ಳುತ್ತಿರುವುದರ ಕುರಿತು ಕಿಡಿ ಕಾರಿದ ಹರಿಪ್ರಸಾದ್, ಬಿಜೆಪಿಯ ಅಂಧಭಕ್ತರಿಗೆ ಬಡವರ ನೋವಿನ ಅರಿವಿಲ್ಲ. ಇಂತಹವರಿಂದ ಜಾಸ್ತಿ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಟೀಕಿಸಿದರು. ಶೋಭಾ ಕರಂದ್ಲಾಜೆ,ಮಾಳವಿಕಾ ಈಗ ಎಲ್ಲಿ ಹೋದರು? ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ೫ ರೂ.ಪೆಟ್ರೋಲ್ ದರ ಹೆಚ್ಚಾದರೂ ಬೀದಿಗಿಳಿಯುತ್ತಿದ್ದವರು ಎಲ್ಲಿ ಹೋಗಿದ್ದಾರೆ ಎಂದು ಪ್ರಶ್ನಿಸಿದರು. ಬಿಜೆಪಿ ಈಗ ಎಲ್ಲಿದೆ. ಏನು ಮಾಡುತ್ತಿದೆ.ಇವರು ಜನರಿಗೆ ಹೇಗೆ ಮುಖ ತೋರಿಸುತ್ತಾರೆ ಎಂದರು.
ಭೀಮಣ್ಣ ನಾಯ್ಕ ಮಾತಾನಾಡಿ,ಬಿಜೆಪಿ ಜನರನ್ನು ಸುಲಿಯುವ ಸರ್ಕಾರ . ಇವರು ಅದೇಗೆ ಜನರ ಮತ ಕೇಳಲು ಮನೆ ಬಾಗಿಲಿಗೆ ಹೋಗ್ತಾರೆ ಎಂಬುದು ಪ್ರಶ್ನೆ .ಪ್ರಧಾನಿ ಮಾತನಾಡಬೇಕಾದ ವಿಷಯದಲ್ಲಿ ಮೌನಿಬಾಬಾ ಆಗ್ತಾರೆ. ಬೇಡದ ವಿಷಯದಲ್ಲಿ ದೊಡ್ಡರೀಲ್ ಬಿಡ್ತಾರೆ. ಇಂತಹ ದುರ್ಬಲ ಪ್ರಧಾನಿಯನ್ನು ಭಾರತಮಾತೆ ಕಂಡಿರಲಿಲ್ಲ ಎಂದರು.
ದೇಶವನ್ನು ದಶಕದ ಕಾಲಹಿಂದಕ್ಕೆ ತಳ್ಳಿದ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ. ಬಡವರು ಬದುಕುವ ಸ್ಥಿತಿಯಿಲ್ಲ.ದುಡಿಯುವ ಕೂಲಿ ಸಹ ಕಸಿದ ಬಿಜೆಪಿ ಸರ್ಕಾರಕ್ಕೆ ಜನ ಶಾಪ ಹಾಕುತ್ತಿದ್ದಾರೆ ಎಂದು ಟೀಕಿಸಿದರು. ಮಾಜಿ ಶಾಸಕ ಸೈಕ್, ನಗರಸಭೆಯ ಮಾಜಿ ಅಧ್ಯಕ್ಷ ಎಂ.ಇ.ಶೇಖ್, ಸುಜಾತ ಗಾಂವ್ಕರ್ ಇದ್ದರು.