Advertisement

ವಿವಿಧ ಬೇಡಿಕೆ ಈಡೇರಿಕೆಗೆ ಪ್ರತಿಭಟನೆ

10:05 PM Jun 10, 2019 | Lakshmi GovindaRaj |

ತಿ.ನರಸೀಪುರ: ನೆನಗುದಿಗೆ ಬಿದ್ದಿರುವ ಉದ್ಯಾನವನ ಕಾಮಗಾರಿಯನ್ನು ಪೂರ್ಣಗೊಳಿಸಿ, ಅಂಬೇಡ್ಕರ್‌ ಪುತ್ಥಳಿ ಹಾಗೂ ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡುವಂತೆ ಆಗ್ರಹಿಸಿ ದಲಿತ ಸಂಘಟನೆಗಳ ಒಕ್ಕೂಟದಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.

Advertisement

ತಾಲೂಕು ಕಚೇರಿ ಮುಂಭಾಗ ಜಮಾವಣೆಗೊಂಡ ಒಕ್ಕೂಟದ ಮುಖಂಡರು ಹಾಗೂ ಕಾರ್ಯಕರ್ತರು, ವರ್ಷಗಳಾದರೂ ಮಿನಿ ವಿಧಾನಸೌಧದ ಮುಂಭಾಗ ಉದ್ಯಾನವನ ಕಾಮಗಾರಿಯನ್ನು ಪೂರ್ಣಗೊಳಿಸಿಲ್ಲ. ಅಂಬೇಡ್ಕರ್‌ ಪುತ್ಥಳಿ ಹಾಗೂ ಸಾರ್ವಜನಿಕ ಶೌಚಾಲಯ ನಿರ್ಮಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದಸಂಸ ಜಿಲ್ಲಾ ಸಂಚಾಲಕ ಆಲಗೂಡು ಶಿವಕುಮಾರ್‌ ಮಾತನಾಡಿ, 2015-16ನೇ ಸಾಲಿನಲ್ಲಿ ಮಿನಿ ವಿಧಾನಸೌಧ ಮುಂಭಾಗದ ಉದ್ಯಾನವನದಲ್ಲಿ ಅಂಬೇಡ್ಕರ್‌ ಪುತ್ಥಳಿ ಹಾಗೂ ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ಸರ್ಕಾರ ಹಣ ಮಂಜೂರು ಮಾಡಿದೆ. ಇದರ ನಿರ್ವಹಣೆ ಹೊಣೆ ಹೊತ್ತ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ. ಇದೇ ರೀತಿ ವಿಳಂಬ ಧೋರಣೆ ಮುಂದುವರಿದರೆ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನಾ ಸ್ಥಳಕ್ಕೆ ಶಾಸಕ ಎಂ.ಅಶ್ವಿ‌ನ್‌ಕುಮಾರ್‌ ಅವರು ತಹಶೀಲ್ದಾರ್‌ ಎನ್‌.ನಾಗಪ್ರಶಾಂತ್‌ ಜೊತೆ ಭೇಟಿ ನೀಡಿ, ಅಹವಾಲು ಆಲಿಸಿದರು. ದಲಿತ ಮುಖಂಡರ ಸಮಿತಿ ರಚನೆ ಮಾಡಿಕೊಂಡು ಪುತ್ಥಳಿ ನಿರ್ಮಾಣ ರೂಪುರೇಷೆ ಸಿದ್ಧಪಡಿಸಿದರೆ ಕೂಡಲೇ ಪುತ್ಥಳಿ ಪ್ರತಿಷ್ಠಾಪಿಸಲಾಗುವುದು ಎಂದು ಶಾಸಕ ಅಶ್ವಿ‌ನ್‌ಕುಮಾರ್‌ ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ದಸಂಸ ತಾಲೂಕು ಸಂಚಾಲಕ ಯಾಚೇನಹಳ್ಳಿ ಸೋಮಶೇಖರ್‌, ಸಂಚಾಲಕ ಯರಗನಹಳ್ಳಿ ಸುರೇಶ್‌, ಸಂಘಟನಾ ಸಂಚಾಲಕರಾದ ವಾಟಾಳು ನಾಗರಾಜು, ಬನ್ನಹಳ್ಳಿ ಬಸವರಾಜು, ಮುಖಂಡರಾದ ಹಿರಿಯೂರು ಸೋಮಣ್ಣ, ಕರೋಹಟ್ಟಿ ನಾಗೇಶ, ಯಾಕನೂರು ಮಹದೇವಸ್ವಾಮಿ, ಟಿ.ಕುಮಾರ್‌, ಶಶಿ, ಮಾವಿನಹಳ್ಳಿ ಶಿವಣ್ಣ, ಲಿಂಗರಾಜು, ವಿರೇಂದ್ರ, ಕಿರಗಸೂರು ರಜನಿ, ಪುಟ್ಟರಾಜು, ರಾಜು, ಸಿದ್ದರಾಜು, ಸುಜ್ಜಲೂರು ಶಿವಯ್ಯ, ರವಿ, ಇಂಡವಾಳು ಹೊನ್ನಯ್ಯ, ಆನಂದ ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next