Advertisement

ಪಾಲಿಕೆ ಆವರಣದಲ್ಲಿ ಕಸ ಸುರಿದು ಪ್ರತಿಭಟನೆ

05:27 PM Dec 29, 2021 | Team Udayavani |

ಹುಬ್ಬಳ್ಳಿ: ಹು-ಧಾ ಮಹಾನಗರ ಸ್ಮಾರ್ಟ್‌ ಸಿಟಿ ಅಲ್ಲ, ಕಸದ ರಾಶಿಯ ಸಿಟಿಯಾಗಿ ಮಾರ್ಪಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಮಹಾನಗರ ಜಿಲ್ಲಾ ಕಾಂಗ್ರೆಸ್‌ ಘಟಕದ ಕಾರ್ಯಕರ್ತರು ಪಾಲಿಕೆ ಆವರಣದಲ್ಲಿ ಕಸ ಸುರಿದು ಪ್ರತಿಭಟನೆ ನಡೆಸಿದರು.

Advertisement

ನಗರದಲ್ಲಿ ಹಲವು ವರ್ಷಗಳಿಂದ ಆಡಳಿತ ನಡೆಸುತ್ತ ಬಂದಿರುವ ಬಿಜೆಪಿ ಯಾವುದೇ ಅಭಿವೃದ್ಧಿ ಕಾರ್ಯ ಮಾಡದೆ ಕೇವಲ ಪ್ರಚಾರ ಕಾರ್ಯ ನಡೆಸುವ ಮೂಲಕ ಮಹಾನಗರವನ್ನು ಹಾಳು ಕೊಂಪೆಯನ್ನಾಗಿ ಮಾಡಿರುವುದು ದುರದೃಷ್ಟದ ಸಂಗತಿಯಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ರಾಜ್ಯ ಕಾರ್ಯಕಾರಿಣಿ ನಡೆಯುತ್ತಿದ್ದು, ಇದರಿಂದ ಅವಳಿನಗರದ ಬಹುತೇಕ ರಸ್ತೆಗಳಿಗೆ ತೇಪೆ ಭಾಗ್ಯ ಲಭಿಸಿದೆ. ಆದರೆ ಉಳಿದೆಡೆ ತ್ಯಾಜ್ಯ ರಾಶಿ ಬಿದ್ದಿದ್ದರೂ ಯಾರೊಬ್ಬರ ಕಣ್ಣಿಗೆ ಕಾಣುತ್ತಿಲ್ಲ. ಜನಸಾಮಾನ್ಯರ ಕೆಲಸ ಮಾಡಬೇಕಾಗಿದ್ದ ಪಾಲಿಕೆ ಅಧಿಕಾರಿಗಳು ಬಿಜೆಪಿ ಏಜೆಂಟರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.

ನಂತರ ಮಾತನಾಡಿದ ಪಾಲಿಕೆ ಜಂಟಿ ಆಯುಕ್ತ ಅಜೀಜ್‌ ದೇಸಾಯಿ, ಹಿಂದೆ ಅವಳಿನಗರದಲ್ಲಿ 67 ವಾರ್ಡ್‌ಗಳಿತ್ತು. ಜನಸಂಖ್ಯೆ ಆಧಾರದ ಮೇಲೆ ಸಿಬ್ಬಂದಿ ನೇಮಕ ಮಾಡಲಾಗಿತ್ತು. ಆದರೆ ಇದೀಗ ವಾರ್ಡ್‌ಗಳ ಸಂಖ್ಯೆ 82ಕ್ಕೆ ಹೆಚ್ಚಳವಾಗಿದ್ದು, ಈ ಕುರಿತು ಪಾಲಿಕೆ ಸದಸ್ಯರ ಜೊತೆ ಚರ್ಚಿಸಿ ಕಾರ್ಮಿಕರನ್ನು ನಿಯೋಜಿಸಲಾಗುವು ದು ಎಂದು ಹೇಳಿದರು.

ಇದಕ್ಕೆ ಸಮ್ಮತಿ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಕೂಡಲೇ ಎಲ್ಲ ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದರೆ ದಿನಕ್ಕೊಂಡು ವಾರ್ಡ್‌ನಿಂದ ಮಹಾನಗರ ಪಾಲಿಕೆಗೆ ಕಸ ತಂದು ಸುರಿದು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.

Advertisement

ಪಾಲಿಕೆ ಸದಸ್ಯರಾದ ನಿರಂಜನ ಹಿರೇಮಠ, ಆರೀಫ್‌ ಭದ್ರಾಪುರ, ಸುವರ್ಣಾ ಕಲ್ಲಕುಂಟ್ಲಾ, ಸಂದೀಲ್‌ ಕುಮಾರ, ಮುಸ್ತಾಕ್‌ ಮುದಗಲ್‌, ಪ್ರಕಾಶ ಕುರಹಟ್ಟಿ, ಇಕ್ಬಾಲ್‌ ನವಲೂರ, ಶಂಕರ ಹೊಸಮನಿ, ಡಾ| ಮಯೂರ ಮೋರೆ, ಮುಖಂಡರಾದ ನಾಗರಾಜ ಗೌರಿ, ಶರೀಫ್‌ ಗರಗದ, ಈರಣ್ಣ ಹಿರೇಹಾಳ, ದೀಪಾ ಗೌರಿ, ಬಸವರಾಜ ಕಿತ್ತೂರ, ದಾನಪ್ಪ ಕಬ್ಬೇರ, ಜ್ಯೋತಿ ವಾಲಿಕಾರ, ಬಾಳಮ್ಮ ಜಂಗನವರ, ಪ್ರೀತಿ ಜೈನ ಇನ್ನಿತರರಿದ್ದರು.

ಕಸದ ರಾಶಿ ಮೇಲೆ ಮೋದಿ ಕಟೌಟ್‌
ಬೆಳಗ್ಗೆ 11:30ರ ಸುಮಾರಿಗೆ ಎರಡು ಟ್ರಾಕ್ಟರ್‌ ಕಸದೊಂದಿಗೆ ಪಾಲಿಕೆ ಆವರಣಕ್ಕೆ ಬಂದ ಕಾಂಗ್ರೆಸ್‌ ಕಾರ್ಯಕರ್ತರನ್ನು ಪೊಲೀಸರು ಪ್ರವೇಶ ದ್ವಾರದಲ್ಲಿಯೇ ತಡೆದಾಗ ವಾಗ್ವಾದ ನಡೆಯಿತು. ಆವರಣದಲ್ಲಿ ಪ್ರತಿಭಟನೆಯಷ್ಟೇ ಮಾಡುತ್ತೇವೆ ಎಂದು ಒಳ ಪ್ರವೇಶ ಮಾಡಿ, ಕೆಲಹೊತ್ತು ಬಿಜೆಪಿ ಮತ್ತು ಪಾಲಿಕೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ನಂತರ ಒಂದು ಟ್ರಾಕ್ಟರ್‌ ಕಸವನ್ನು ಪಾಲಿಕೆ ಆವರಣದಲ್ಲಿ ಸುರಿಯುವ ಮೂಲಕ ಪ್ರತಿಭಟನೆ ತೀವ್ರಗೊಳಿಸಿದರು. ಕಸದ ರಾಶಿ ಮೇಲೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕಟೌಟ್‌ ಇಟ್ಟು ಆಕ್ರೋಶ ವ್ಯಕ್ತಪಡಿಸಿದರು.

ಕಸ ವಿಲೇವಾರಿಗೆ ಪಾಲಿಕೆಗೆ ಹಲವು ಬಾರಿ ಮನವಿ ಮಾಡಲಾಗಿದೆ. ಪೌರಕಾರ್ಮಿಕರು ಬಿಜೆಪಿ ಕಾರ್ಯಕಾರಿಣಿ ಹಿನ್ನೆಲೆಯಲ್ಲಿ ಗೋಕುಲ ರಸ್ತೆ ಪ್ರದೇಶದ ಸ್ವತ್ಛತೆಯಲ್ಲಿ ತೊಡಗಿಕೊಂಡಿದ್ದಾರೆ. ಎಲ್ಲ ವಾರ್ಡ್‌ಗಳಲ್ಲಿ ಸ್ವಚ್ಛತೆ ನಡೆಸುತ್ತೇವೆ ಎಂದು ಭರವಸೆ ನೀಡಬೇಕು. ಇಲ್ಲದಿದ್ದರೆ ಪಾಲಿಕೆ ಆಯುಕ್ತರ ಮನೆ ಎದುರು ಕಸ ಚೆಲ್ಲಿ ಪ್ರತಿಭಟನೆ ನಡೆಸಲಾಗುವುದು.
ರಜತ್‌ ಉಳ್ಳಾಗಡ್ಡಿ,
ವಿದ್ಯಾನಗರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ

ನಗರದ ಬಹುತೇಕ ಪ್ರದೇಶ ತ್ಯಾಜ್ಯದಿಂದ ತುಂಬಿದೆ. ಬಿಜೆಪಿ ಸದಸ್ಯರ ವಾರ್ಡ್‌ಗಳಲ್ಲಿ ಮಾತ್ರ ಪೌರಕಾರ್ಮಿಕರು ಸರಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಕಾಂಗ್ರೆಸ್‌ ಸದಸ್ಯರ ವಾರ್ಡ್‌ಗಳನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದ್ದಾರೆ. ನಾಲ್ಕು ತಿಂಗಳು ಗತಿಸಿದರೂ ಪಾಲಿಕೆ ಸದಸ್ಯರಿಗೆ ಅಧಿಕಾರ ನೀಡದೇ ಅನ್ಯಾಯ ಮಾಡುತ್ತಿದ್ದಾರೆ.
∙ಅಲ್ತಾಫ್‌ಹುಸೇನ ಹಳ್ಳೂರ,
ಕಾಂಗ್ರೆಸ್‌ ಮಹಾನಗರ ಜಿಲ್ಲಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next