Advertisement
ನ್ಯಾಯವಾದಿ ದಿನಕರ ಶೆಟ್ಟಿ ಅವರು ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು. ಕಾವ್ಯಾ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನಗಳು ನಡೆಯುತ್ತಿವೆ. ಅದಕ್ಕೆ ಅವಕಾಶ ನೀಡದೆ, ಪಾರದರ್ಶಕ ತನಿಖೆ ನಡೆಸಿ ಪ್ರಕರಣದ ಸತ್ಯಾಂಶವನ್ನು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.
ಪ್ರಸ್ತುತ ಎಸಿಪಿ ರಾಜೇಂದ್ರ ಅವರ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಯುತ್ತಿದೆ. ಆದರೆ ತನಿಖೆಯ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡಲಾಗುತ್ತಿಲ್ಲ. ಇದರಿಂದ ತನಿಖೆಯ ಬಗ್ಗೆ ವಿಶ್ವಾಸ ಇಲ್ಲದಂತಾಗಿದೆ ಎಂದವರು ತಿಳಿಸಿದರು.
ಹೆತ್ತವರೇ ತಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂದರೂ ತನಿಖೆಯ ದಾರಿ ತಪ್ಪಿಸುವ ಪ್ರಯತ್ನಗಳು ನಡೆಯುತ್ತಿವೆ. ಕಾವ್ಯಾ ಸಾವಿನ ಬಗ್ಗೆ ಹಲವಾರು ಅನುಮಾನಗಳಿರುವುದರಿಂದ ಸೂಕ್ತ ತನಿಖೆ ನಡೆಯಬೇಕು ಎಂದರು.
ಸುನಿಲ್ ಕುಮಾರ್ ಬಜಾಲ್ ಮಾತನಾಡಿ, ತನಿಖೆಯನ್ನು ರಾಜ್ಯದ ನಿಷ್ಠಾವಂತ ಪೊಲೀಸ್ ಅಧಿಕಾರಿಯ ನೇತೃತ್ವದ ವಿಶೇಷ ತನಿಖಾ ತಂಡದ ಮೂಲಕ ನಡೆಸಬೇಕೆಂದು ಈಗಾಗಲೇ ಸರಕಾರದ ಗಮನವನ್ನು ಸೆಳೆಯಲಾಗಿದೆ ಎಂದು ತಿಳಿಸಿದರು. ಪ್ರಕರಣಕ್ಕೆ ಸಂಬಂಧಿಸಿ ಒಬ್ಬರ ಮೇಲೆ ಕೊಲೆ ಆರೋಪ ಹಾಗೂ ಇತರ ನಾಲ್ವರ ಮೇಲೆ ಸಾಕ್ಷ್ಯ ನಾಶದ ದೂರನ್ನು ನೀಡಲಾಗಿದೆ. ಅಶೋಕ್ ಎಂಬವರಿಂದ ಕಾವ್ಯಾ ಹೆತ್ತವರನ್ನು ಬಾಯಿ ಮುಚ್ಚಿಸುವ ಯತ್ನವೂ ನಡೆದಿದೆ. ಕಾವ್ಯಾ ಮೃತದೇಹದ ಮರಣೋತ್ತರ ಪರೀಕ್ಷೆ ಸಂದರ್ಭ ವೀಡಿಯೋ ರೆಕಾರ್ಡಿಂಗ್ ಕೂಡ ಮಾಡಲಾಗಿಲ್ಲ. ಆದ್ದರಿಂದ ಈ ಇಬ್ಬರು ವ್ಯಕ್ತಿಗಳ ಜತೆ ದೂರಿನಲ್ಲಿ ತಿಳಿಸಿರುವ ನಾಲ್ಕು ಮಂದಿಯ ಬಗ್ಗೆಯೂ ಕಸ್ಟಡಿ ತನಿಖೆ ನಡೆಸಬೇಕು ಎಂದು ರಾಬರ್ಟ್ ರೊಸಾರಿಯೊ ಆಗ್ರಹಿಸಿದರು.
Related Articles
ಕಾವ್ಯಾ ತಂದೆ ಲೋಕೇಶ್, ಸಮಿತಿಯ ಮುಖಂಡರಾದ ರಘುವೀರ್ ಸೂಟರ್‌ಪೇಟೆ, ರಘು ಎಕ್ಕಾರು, ಅನಿಲ್‌ದಾಸ್, ದೀಪಕ್ ಕೋಟ್ಯಾನ್, ಯಶವಂತ ಪೂಜಾರಿ, ಪ್ರಜ್ವಲ್ ಪೂಜಾರಿ, ದೀಪಕ್, ನಿತಿನ್ ಕುತ್ತಾರ್, ಸಂತೋಷ್ ಕುಮಾರ್ ಬಜಾಲ್, ರೋಶನ್ ಮೊದಲಾದವರು ಉಪಸ್ಥಿತರಿದ್ದರು.
Advertisement
ಮಗಳಿಗೆ ನ್ಯಾಯ ಕೊಡಿಸಿ“ನನ್ನ ಮಗಳಿಗೆ ಆದ ಅನ್ಯಾಯ ಯಾವ ಮಕ್ಕಳಿಗೂ ಆಗಬಾರದು. ಅವಳನ್ನು ಕೊಲೆ ಮಾಡಲಾಗಿದೆ. ಇದೀಗ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ. ನನ್ನ ಮಗಳಿಗೆ ನ್ಯಾಯ ಕೊಡಿಸಿ’ ಎಂದು ಕಾವ್ಯಾ ತಾಯಿ ಬೇಬಿ ಪೂಜಾರಿ ಪತ್ರಕರ್ತರ ಮುಂದೆ ಕಣ್ಣೀರಿಟ್ಟರು.