ಮಂಡ್ಯ: ಕಳೆದ ಆರು ತಿಂಗಳಿನಿಂದ ವೇತನ ಪಾವತಿಸಿಲ್ಲ ಎಂದು ಆರೋಪಿಸಿ ಆರೋಗ್ಯ ಕೇಂದ್ರಗಳ ಹೊರಗುತ್ತಿಗೆ ನೌಕರರು ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾಯಿಸಿದ ಜಿಲ್ಲೆಯ ವಿವಿಧ ಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ದುಡಿಯುತ್ತಿರುವ ಹೊರಗುತ್ತಿಗೆ ಡಿ ಗ್ರೂಪ್ ನೌಕರರು ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದರು.
ಮಂಡ್ಯ ವಿಭಾಗದ ಮದ್ದೂರು, ಮಳವಳ್ಳಿ ಹಾಗೂ ಮಂಡ್ಯ, ಕೆ.ಆರ್.ಪೇಟೆ, ಪಾಂಡವಪುರ, ಶ್ರೀರಂಗಪಟ್ಟಣ ತಾಲೂಕಿನ ವಿವಿಧ ಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ 300ಕ್ಕೂ ಹೆಚ್ಚು ಡಿ ಗ್ರೂಪ್ ನೌಕರರು ಹೊರಗುತ್ತಿಗೆ ಆಧಾರದಲ್ಲಿ ದುಡಿಯುತ್ತಿದ್ದಾರೆ. ಕೊರೊನಾ ಸಂಕಷ್ಟದ ಕಾಲದಲ್ಲಿ ಕುಟುಂಬದ ಹಾಗೂ ವೈಯಕ್ತಿಕ ಬದುಕಿನ ಬಗ್ಗೆ ಆಸ್ಥೆ ತೋರದೆ ಸಾರ್ವಜನಿಕರಿಗಾಗಿ ದುಡಿಯುತ್ತಿರುವ ನೌಕರರಿಗೆ ಕಳೆದ ಆರು ತಿಂಗಳಿನಿಂದ ಸಂಬಂಧಪಟ್ಟ ಏಜೆನ್ಸಿಗಳ ಮಾಲೀಕರು ವೇತನ ನೀಡಿಲ್ಲ. ಇದರಿಂದಾಗಿ ದಿನನಿತ್ಯ ಬದುಕಿಗಾಗಿ ಪರದಾಡುವಂತಾಗಿದೆ ಎಂದು ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ವೇತನ ಪಾವತಿಯಾಗದಿರುವ ಹಿನ್ನೆಲೆಯಲ್ಲಿ ಬಹುತೇಕ ನೌಕರರು ಸಾಲದ ಸುಳಿಗೆ ಸಿಲುಕಿದ್ದಾರೆ. ಈ ಸಂಬಂದ ಮೂಲ ಉದ್ಯೋಗದಾತರಾದ ಆರೋಗ್ಯ ಮತ್ತುಕುಟುಂಬ ಕಲ್ಯಾಣ ಇಲಾಖೆ ತನಗೂ ನೌಕರರಿಗೂ ಯಾವುದೇ ಸಂಬಂಧ ಇಲ್ಲವೆಂಬಂತೆ ಬೇಜವಾಬ್ದಾರಿತನ ತೋರುತ್ತಿದೆ. ಈ ಹಿನ್ನೆಲೆಯಲ್ಲಿ ತಾವು ಮಧ್ಯ ಪ್ರವೇಶಿಸಿ ಕೋವಿಡ್ ವಾರಿಯರ್‌ಗಳಿಗೆ ಬಾಕಿ ಇರುವ ಸಂಬಳ ಹಾಗೂ ಕ್ರಮ ಬದ್ಧವಾಗಿ ಭವಿಷ್ಯ ನಿಧಿ ಪಾವತಿಸುವಂತೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಹೊರಗುತ್ತಿಗೆ ಕಾರ್ಮಿಕರ ಒಕ್ಕೂಟದ ರಾಜ್ಯಾಧ್ಯಕ್ಷ ಎಂ.ಬಿ.ನಾಗಣ್ಣಗೌಡ, ಜಿಲ್ಲಾ ಪದಾಧಿಕಾರಿಗಳಾದ ಅಜಯ್, ಶಿವಾನಂದ, ಪುಟ್ಟರಾಜು, ಮೇಘನಾ, ಯೋಗಾನಂದ ಇತರರು ಭಾಗವಹಿಸಿದ್ದರು.