Advertisement

ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ-ಧರಣಿ

05:53 PM Mar 04, 2022 | Shwetha M |

ವಿಜಯಪುರ: ತಮ್ಮನ್ನು ಸರ್ಕಾರಿ ನೌಕರರೆಂದು ಪ್ರಸಕ್ತ ಬಜೆಟ್‌ನಲ್ಲಿ ರಾಜ್ಯ ಸರ್ಕಾರ ಘೋಷಿಸುವ ಜೊತೆಗೆ ತಮ್ಮ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್‌ ಪ್ರತಿಭಟನೆ ನಡೆಸಿ, ಧರಣಿ ನಡೆಸಿದರು.

Advertisement

ಕರ್ನಾಟಕ ರಾಜ್ಯ ಸಂಯುಕ್ತ ಅಂಗನವಾಡಿ ಕಾರ್ಯಕರ್ತರ ಸಂಘಟನೆ ನೇತೃತ್ವದಲ್ಲಿ ಗುರುವಾರ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಅಂಗನವಾಡಿ ನೌಕರರು, ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಧರಣಿ ನಡೆಸಿದರು.

ತಮ್ಮನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು, ತಮ್ಮ ಗೌರವಧನ ಹೆಚ್ಚಿಸಬೇಕು. ಈ ಬೇಡಿಕೆ ಪ್ರಸಕ್ತ ಬಜೆಟ್‌ನಲ್ಲೇ ಘೋಷಿಸಬೇಕು ಎಂದು ಮನವಿ ಸಲ್ಲಿಸಿದರು.

ಎಐಯುಟಿಯುಸಿ ನಾಯಕಿ ಎಂ. ಉಮಾದೇವಿ ಮಾತನಾಡಿ, ರಾಜ್ಯದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಅತ್ಯಂತ ಕಡಿಮೆ ಗೌರವಧನದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಬೆಲೆ ಏರಿಕೆ ಪ್ರಸಕ್ತ ಸಂದರ್ಭದಲ್ಲಿ ಕಡಿಮೆ ಗೌರವಧನದಲ್ಲಿ ಕುಟುಂಬ ನಿರ್ವಹಣೆ ಅಸಾಧ್ಯ. ಹೀಗಾಗಿ ರಾಜ್ಯ ಸರ್ಕಾರದ ಸಿ-ಡಿ ದರ್ಜೆ ನೌಕರರಿಗೆ ಸರಿಸಮನಾಗಿ ಗೌರವಧನ ಅಥವಾ ವೇತನ ನೀಡಬೇಕು. ಈ ಬೇಡಿಕೆ ಮಾ.4ರಂದು ರಾಜ್ಯ ಸರ್ಕಾರ ಮಂಡಿಸುವ ಬಜೆಟ್‌ನಲ್ಲಿ ಘೋಷಣೆ ಆಗಬೇಕು ಎಂದು ಬೇಡಿಕೆ ಮಂಡಿಸಿದರು.

ಅಂಗನವಾಡಿ ನೌಕರರು ಗಂಭೀರ ಕಾಯಿಲೆಗಳ ಚಿಕಿತ್ಸೆಗಳಿಗೆ ಇರುವ ಕ್ಷೇಮಾಭಿವೃದ್ಧಿ ನಿಧಿಯಲ್ಲಿ ಸಲ್ಲಿಸಲಾದ ಪ್ರಕರಣಗಳಿಗೆ ಸಹಾಯಧನ ಸರಿಯಾಗಿ ನೀಡಬೇಕು. ಸಲ್ಲಿಕೆಯಾಗಿರುವ ಎಲ್ಲ ಅರ್ಜಿ ಕೂಡಲೇ ವಿಲೇವಾರಿ ಮಾಡಿ ಸಹಾಯಧನ ನೀಡಬೇಕು. ಈಗಿರುವ ಮರು ಪಾವತಿ ಸಹಾಯಧನ 20 ಸಾವಿರದಿಂದ ಕನಿಷ್ಟ 50 ಸಾವಿರ ರೂ.ಗೆ ಹೆಚ್ಚಿಸಬೇಕು ಎಂದರು.

Advertisement

ಅಂಗನವಾಡಿ ನೌಕರರ ಸಂಘದ ಜಿಲ್ಲಾ ಮುಖಂಡರಾದ ಲಕ್ಷ್ಮೀ ಲಕ್ಷಾನಟ್ಟಿ, ಜಿಲ್ಲಾ ಕಾರ್ಯದರ್ಶಿ ನಿಂಗಮ್ಮ ಮಠ ಮಾತನಾಡಿ, ಮಾಸಿಕ ಸಭೆಯೂ ಸೇರಿದಂತೆ ಮಾತೃ ಇಲಾಖೆ, ಜಿಲ್ಲಾಧಿಕಾರಿ, ಜಿಪಂ-ತಾಪಂ, ತಹಶೀಲ್ದಾರ್‌ ಕಚೇರಿಗಳ ಅಧಿಕಾರಿಗಳ ಸಭೆ, ಇಲಾಖೆ ಕಚೇರಿ ಕೆಲಸಕ್ಕೆ ಬರುವ ಕಾರ್ಯಕರ್ತೆ-ಸಹಾಯಕಿಯರಿಗೆ ಕಡ್ಡಾಯವಾಗಿ ಪ್ರಯಾಣ ಭತ್ಯೆ ಮತ್ತು ದಿನ ಭತ್ಯೆ ನೀಡುವಂತೆ ಬೇಡಿಕೆ ಸಲ್ಲಿಸಿದರು.

ಪ್ರಯಾಣ ಹಾಗೂ ದಿನಭತ್ಯೆ ಕನಿಷ್ಟ 500 ರೂ.ಗೆ ಹೆಚ್ಚಿಸಬೇಕು. ಮೂಲ ಮತ್ತು ಪರಿಷ್ಕೃತ ಐಸಿಡಿಎಸ್‌ ಯೋಜನೆಯಂತೆ ಅಂಗನವಾಡಿ ಕೇಂದ್ರಗಳ ಪರಿಕಲ್ಪನೆ ಮತ್ತು ಅಲ್ಲಿ ಕೆಲಸ ಮಾಡುವ ನೌಕರರ ಸೇವಾ ಹಿತಾಸಕ್ತಿಗೆ ಧಕ್ಕೆ ತರುವ ಯಾವುದೇ ಯೋಜನೆ ತರುವುದನ್ನು ನಿಲ್ಲಿಸಿ ಎಂದು ಮನವಿ ಮಾಡಿದರು.

ಈ ವೇಳೆ ಗುರುಬಾಯಿ ಮಲ್ಲನಗೌಡರ, ಮಹಾದೇವಿ ನಾಗೂಡ, ಶಾಂತಾ ಕಟ್ಟಾರೆ, ಬಸಮ್ಮ ಹಿರೇಮಠ, ಕಲಾವತಿ ಪಾದಗಟ್ಟಿ, ಯಲ್ಲಮ್ಮ ಜಟ್ಟಂಗಿ, ಸಾವಿತ್ರಿ ನಾಗರತ್ತಿ, ರೆಣುಕಾ ಹಡಪದ, ಉಷಾ ಕುಲಕರ್ಣಿ, ರೇಖಾ ಪತ್ತಾರ, ಭಾರತಿ ಅಂಗನಗೌಡ, ರೇಣುಕಾ ಕರ್ಜಗಿ, ಕಾಶಿಬಾಯಿ ಕುಂಬಾರ, ತಾಯಕ್ಕ ಬೂದಿಹಾಳ, ಸವಿತಾ ತೇರದಾಳ, ಗಂಗುಬಾಯಿ ಪೂಜಾರಿ, ವಿಮಲಾ ಬುಷೆಟ್ಟಿ, ಶೋಭಾ ಪತ್ತಾರ, ಗುರುದೇವಿ ಮೂಡಲಗಿ ಸೇರಿದಂತೆ ಇತರರಿದ್ದರು.

ಹಣದುಬ್ಬರ ಮತ್ತು ಬೆಲೆ ಏರಿಕೆ ಗಮನದಲ್ಲಿ ಇರಿಸಿಕೊಂಡು ಅಂಗನವಾಡಿ ಕೇಂದ್ರಗಳ ಪ್ರಭಾರ ಭತ್ಯೆ ಹಣ, ಬಾಡಿಗೆ ದರ, ಮೊಟ್ಟೆ ದರ, ಸಾದಿಲ್ವಾರು ಹಣ, ಫ್ಲೆಕ್ಸಿ ಫಂಡ್‌ ಅನುದಾನ ಇತ್ಯಾದಿ ದರ ಹೆಚ್ಚಿಸಿ. ಕಾರ್ಯಕರ್ತೆಯರಿಗೆ 25 ಸಾವಿರ ರೂ. ಹಾಗೂ ಸಹಾಯಕಿಯರಿಗೆ 21 ಸಾವಿರ ರೂ. ಮಾಸಿಕ ವೇತನ/ಗೌರವ ಧನ ನೀಡಬೇಕು. -ಎಂ. ಉಮಾದೇವಿ, ಎಐಯುಟಿಯುಸಿ ನಾಯಕಿ

Advertisement

Udayavani is now on Telegram. Click here to join our channel and stay updated with the latest news.

Next