Advertisement

ವಿಧಾನ ಮಂಡಲ ಅಧಿವೇಶನ: ಅವಧಿಗೆ ಮೊದಲೇ ಬರ್ಖಾಸ್ತು

01:48 AM Feb 15, 2019 | |

ಬೆಂಗಳೂರು: ಶಾಸಕ ಪ್ರೀತಂ ಗೌಡ ನಿವಾಸದ ಮೇಲಿನ ದಾಳಿ ಖಂಡಿಸಿ ಬಿಜೆಪಿ ಸದಸ್ಯರು ವಿಧಾನಮಂಡಲದ ಉಭಯ ಸದನಗಳಲ್ಲಿ ಗುರುವಾರವೂ ಪ್ರತಿಭಟನೆ ಮುಂದುವರಿಸಿದ್ದರಿಂದ ಕೆಲವೇ ನಿಮಿಷಗಳಲ್ಲಿ  ರಾಜ್ಯಪಾಲರ ಭಾಷಣಕ್ಕೆ ವಂದನೆ, ಪೂರಕ ಅಂದಾಜುಗಳಿಗೆ ಒಪ್ಪಿಗೆ, ಲೇಖಾನುದಾನ, ಧನ ಮಸೂದೆಗಳಿಗೆ ಸರಕಾರ ಉಭಯ ಸದನಗಳ ಅಂಗೀಕಾರ ಪಡೆದುಕೊಂಡ ಬಳಿಕ ಸದನ ಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು.

Advertisement

ಶುಕ್ರವಾರದವರೆಗೆ ನಿಗದಿಯಾಗಿದ್ದ ಅಧಿವೇಶನ ಒಂದು ದಿನ ಮುಂಚೆಯೇ ಮೊಟಕುಗೊಂಡಿತು. ಏಳು ದಿನಗಳ ಅಧಿವೇಶನದಲ್ಲಿ ರಾಜ್ಯದ ಬರ ಸಹಿತ  ಯಾವುದೇ ವಿಚಾರಗಳ ಬಗ್ಗೆ ಪ್ರಸ್ತಾವವೇ ಆಗದೆ ರಾಜ್ಯಪಾಲರ ಭಾಷಣ, ಬಜೆಟ್‌ ಮಂಡನೆ, ಆಪರೇಷನ್‌ ಆಡಿಯೋ ವಿಚಾರದಲ್ಲಿನ ಆರೋಪ-ಪ್ರತ್ಯಾರೋಪಕ್ಕೆ ಸೀಮಿತವಾಯಿತು. ರಾಜ್ಯಪಾಲರ ಭಾಷಣದ ಮೇಲೂ ಚರ್ಚೆಯಾಗಲಿಲ್ಲ, 2.34 ಲ. ಕೋ. ರೂ. ಮೊತ್ತದ ಬಜೆಟ್‌ ಮೇಲೂ ಚರ್ಚೆಯಾಗಲಿಲ್ಲ.

ಗದ್ದಲ
ವಿಧಾನಸಭೆಯಲ್ಲಿ ಪ್ರೀತಂ ಗೌಡ ನಿವಾಸದ ಮೇಲಿನ ದಾಳಿ ಮತ್ತು ಬಿಜೆಪಿ ಕಾರ್ಯಕರ್ತನಿಗೆ ಗಂಭೀರ ಗಾಯಗೊಂಡಿರುವ ಪ್ರಕರಣ ಖಂಡಿಸಿ ವಿಪಕ್ಷ ಸದಸ್ಯರು ಪ್ರತಿಭಟನೆ ನಡೆಸಿದರು.

ಇದರ ನಡುವೆಯೇ  ಮುಖ್ಯಮಂತ್ರಿ ಎಚ್‌. ಡಿ. ಕುಮಾರಸ್ವಾಮಿ, ಪ್ರಸಕ್ತ ಹಣಕಾಸು ವರ್ಷಕ್ಕೆ ಸಂಬಂಧಪಟ್ಟಂತೆ ಹೆಚ್ಚುವರಿಯಾಗಿ 14,581.43 ಕೋ. ರೂ. ಮೊತ್ತಕ್ಕೆ ಪೂರಕ ಅಂದಾಜು (ಎರಡನೇ ಕಂತು) ಮಂಡಿಸಿ ಅನುಮೋದನೆ ಪಡೆದರು.

ಅನಂತರ 2019-2020ನೇ ಸಾಲಿನ ಹಣಕಾಸು ವರ್ಷದ ಆರಂಭಿಕ ಮೂರು ತಿಂಗಳಿಗೆ 80,168 ಕೋ. ರೂ. ಲೇಖಾನುದಾನದ “2019ನೇ ಸಾಲಿನ ಕರ್ನಾಟಕ ಧನವಿನಿಯೋಗ (ಲೇಖಾನುದಾನ) ಮಸೂದೆಗೂ ಅಂಗೀಕಾರ ಪಡೆದರು. ಅನಂತರ ಮಧ್ಯಾಹ್ನದವರೆಗೂ ಸದನ ಮುಂದೂಡಿದ ಸ್ಪೀಕರ್‌ ರಮೇಶ್‌ ಕುಮಾರ್‌, ಭೋಜನ ವಿರಾಮದ ಬಳಿಕವೂ ಪ್ರತಿಭಟನೆ ಮುಂದುವರಿದಿದ್ದರಿಂದ ಸದನ ಅನಿರ್ದಿಷ್ಟಾವಧಿಗೆ ಮುಂದೂಡಿದರು.

Advertisement

ಅತ್ತ ವಿಧಾನ ಪರಿಷತ್‌ನಲ್ಲೂ ಗದ್ದಲ- ಪ್ರತಿಭಟನೆ ನಡುವೆ ಪೂರಕ ಅಂದಾಜು, ಧನವಿನಿಯೋಗ ಮಸೂದೆಗೆ ಅಂಗೀಕಾರ ಪಡೆದು ಸಭಾಪತಿ ಪ್ರತಾಪ್‌ ಚಂದ್ರ ಶೆಟ್ಟಿ ಸದನವನ್ನು ಅನಿರ್ದಿಷ್ಟ  ಕಾಲ ಮುಂದೂಡಿದರು.

Advertisement

Udayavani is now on Telegram. Click here to join our channel and stay updated with the latest news.

Next