Advertisement

ಮೂಲ ಸೌಕರ್ಯಗಳಿಲ್ಲದೆ ಜನ ಜೀವನ ಶೋಚನೀಯ: ಸಂತೋಷ್‌ ಬಜಾಲ್‌

11:51 AM Sep 09, 2018 | Team Udayavani |

ಬೆಂಗ್ರೆ: ಬೆಂಗರೆ ಪ್ರದೇಶದ ಕೆಟ್ಟು ಹೋಗಿರುವ ಮುಖ್ಯ ರಸ್ತೆ ಹಾಗೂ ಎಲ್ಲ ಒಳರಸ್ತೆಗಳ ಡಾಮರು ಕಾಮಗಾರಿಗೆ ಒತ್ತಾಯಿಸಿ ರಸ್ತೆತಡೆ, ಪ್ರತಿಭಟನೆ ನಡೆಯಿತು.

Advertisement

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್‌ ಬಜಾಲ್‌, ಮಹಾನಗರ ಪಾಲಿಕೆ ವ್ಯಾಪ್ತಿಗೊಳ ಪಡುವ ಬೆಂಗರೆ ಪ್ರದೇಶವು ಸುತ್ತಲೂ ನೀರು ಆವರಿಸಿ ಭೌಗೋಳಿಕವಾಗಿ ಸುಂದರವಾಗಿರುವ ಊರು. ಆದರೆ ಇಲ್ಲಿನ ಜನರ ಜೀವನ ಮಾತ್ರ ಬಹಳ ಶೋಚನೀಯವಾಗಿದೆ. ಮೂಲ ಸೌಕರ್ಯಗಳಿಲ್ಲದೆ ವಂಚನೆಗೊಳಗಾಗಿರುವ ಇವರಿಗೆ ಕನಿಷ್ಠ ಓಡಾಡಲು ರಸ್ತೆಯನ್ನೇ ನಿರ್ಮಿಸಲಾಗದ ನಗರ ಪಾಲಿಕೆ ಆಡಳಿತ ಯಾರ ಉದ್ಧಾರಕ್ಕಾಗಿ ಆಡಳಿತ ನಡೆಸುತ್ತಿದೆ, ಬಡವರು ವಾಸಿಸುವ ಊರನ್ನು ಈ ರೀತಿ ಕಡೆಗಣಿಸಿರುವ ಆಡಳಿತದ, ಶಾಸಕರ ಬೇಜವಾಬ್ದಾರಿ ಖಂಡನೀಯ ಎಂದರು.

ಬಡವರೇ ಹೆಚ್ಚಾಗಿ ವಾಸಿಸುವ ಈ ಊರಿನ ಸಮಸ್ಯೆಯನ್ನು ಕೂಡಲೇ ಬಗೆಹರಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ಹೋರಾಟವನ್ನು ಪಾಲಿಕೆ ಮೇಯರ್‌ ಕಚೇರಿಗೆ ಮುತ್ತಿಗೆ ಹಾಕಿ ನಡೆಸಲಾಗುವುದು ಎಂದು ಎಚ್ಚರಿಸಿದರು. ಸಮಸ್ಯೆ ಬಗೆಹರಿಸಲು ನಗರ ಪಾಲಿಕೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಬಂದು ನಮ್ಮ ಮನವಿ ಆಲಿಸಬೇಕು. ಇಲ್ಲದಿದ್ದಲ್ಲಿ ಇಲ್ಲಿಂದ ಕದಡುವುದಿಲ್ಲ ಎಂದು ಎಚ್ಚರಿಸಿದರು.

ತಾತ್ಕಾಲಿಕ ರಿಪೇರಿ ಭರವಸೆ
ಪ್ರತಿಭಟನೆ ಸ್ಥಳಕ್ಕಾಗಮಿಸಿದ ಸುರತ್ಕಲ್‌ ವಲಯ ಆಯುಕ್ತರಾದ ರವಿಶಂಕರ್‌ ಹೋರಾಟಗಾರರ ಸಮಸ್ಯೆಗಳನ್ನು ಆಲಿಸಿ ಮನವಿ ಸ್ವೀಕರಿಸಿದರು. ಕೂಡಲೇ ಕೆಟ್ಟು ಹೋಗಿರುವ ರಸ್ತೆಗೆ ತಾತ್ಕಾಲಿಕ ರಿಪೇರಿ ನಡೆಸಲಾಗುವುದು. ಹಾಗೂ ಶಾಶ್ವತ ರಸ್ತೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.

ಪ್ರತಿಭಟನೆಯಲ್ಲಿ ಡಿವೈಎಫ್‌ಐ ಬೆಂಗರೆ ಗ್ರಾಮ ಸಮಿತಿ ಅಧ್ಯಕ್ಷ ಎ.ಬಿ. ನೌಶಾದ್‌, ಕಾರ್ಯದರ್ಶಿ ಹನೀಫ್‌, ಅಸ್ಲಂ, ಸಮದ್‌, ತಸ್ರಿಪ್‌, ಹಸನ್‌ ಮೋನು, ಯಯ್ನಾ, ಸ್ಥಳೀಯ ರಿಕ್ಷಾ ಯೂನಿಯನ್‌ ಅಧ್ಯಕ್ಷ ಫಾರೂಕ್‌, ಸುಲೈಮಾನ್‌ ಮೊದಲಾದವರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next