ಬೆಂಗಳೂರು: ನಗರಕ್ಕೆ ಆಗಮಿಸಿದ್ದ ನೆದರ್‌ಲ್ಯಾಂಡ್ಸ್ ವಿದೇಶಾಂಗ ಸಚಿವರನ್ನು ಭೇಟಿ ಮಾಡಲು ಯಶವಂತಪುರದ ತ್ಯಾಜ್ಯ ಸಂಸ್ಕರಣೇ ಘಟಕಕ್ಕೆ ಹೊರಟಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಜಿ.ಪದ್ಮಾವತಿ ಅವರಿಗೆ ಪ್ರತಿಭಟನಾಕಾರರು ಘೇರಾವ್ ಹಾಕಿದ ಪರಿಣಾಮ ಮೇಯರ್ ಪೇಚಿಗೆ ಸಿಲುಕಿದ ಘಟನೆ ಸೋಮವಾರ ಮಧ್ಯಾಹ್ನ ಪಾಲಿಕೆ ಆವರಣದಲ್ಲಿ ನಡೆದಿದೆ.
ಯಶವಂತಪುರ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ನೆದರ್‌ಲ್ಯಾಂಡ್ಸ್‌ನ ವಿದೇಶಾಂಗ ಸಚಿವರನ್ನು ಎನ್‌ಜಿಒ ಆಹ್ವಾನಿಸಿತ್ತು. ನೆದರ್‌ಲ್ಯಾಂಡ್ಸ್ ಸಚಿವರು ಆಗಮಿಸಲಿದುದ್ದರಿಂದ ಬಿಬಿಎಂಪಿ ಮೇಯರ್ ಪದ್ಮಾವತಿ ಅವರನ್ನು ಸ್ವಾಗತಿಸಲು ಅಲ್ಲಿಗೆ ತೆರಳಲು ಸಿದ್ಧತೆ ಮಾಡಿಕೊಂಡಿದ್ದರು. ನಿಗದಿಯಂತೆ ಮಧ್ಯಾಹ್ನ 1 ಗಂಟೆಗೆ ಬಿಬಿಎಂಪಿ ಕೇಂದ್ರ ಕಚೇರಿಯಿಂದ ತೆರಳಲು ಮುಂದಾಗಿದ್ದರು.
ಈ ವೇಳೆ ಮನೆಗಳು ಶಿಥಿಲಗೊಂಡು ಅಪಾಯದ ಸ್ಥಿತಯಲ್ಲಿದ್ದು, ಮನೆಗಳನ್ನು ನಿರ್ಮಿಸಿಕೊಡಿ ಎಂದು ಒತ್ತಾಯಿಸಿ 250ಕ್ಕೂ ಹೆಚ್ಚು ಮಂದಿ ಪಾಲಿಕೆ ಕೇಂದ್ರ ಕಚೇರಿಯ ಪ್ರವೇಶ ದ್ವಾರದಲ್ಲಿ ಪ್ರತಿಭಟನೆ ನಡೆಸಿದರು. ಇದೇ ವೇಳೆ ನೆದರ್‌ಲ್ಯಾಂಡ್ ಸಚಿವರನ್ನು ಆಹ್ವಾನಿಸಲು ಹೊರಟ ಮೇಯರ್‌ಗೆ ಘೇರಾವ್ ಹಾಕಿದರು. ಪರಿಣಾಮ ಯಶವಂತಪುರಕ್ಕೆ ತೆರಳಲು ಸಾಧ್ಯವಾಗಲಿಲ್ಲ.
ಪ್ರತಿಭಟನಾ ನಿರತರನ್ನು ಸಮಾಧಾನಗೊಳಿಸುವ ವೇಳೆ ಸಮಯ 3 ಗಂಟೆಯಾಗಿತ್ತು. ಆ ವೇಳೆಗಾಗಲೇ ನೆದರ್‌ಲ್ಯಾಂಡ್ಸ್ ಸಚಿವ ಬರ್ಟ್ ಕಿಂಯೋಡ್ರಿಪ್ ತಾವೇ ಘಟಕಕ್ಕೆ ತೆರಳಿ ಘಟಕವನ್ನು ವೀಕ್ಷಿಸಿದರಲ್ಲದೆ, ತಾವೇ ತ್ಯಾಜ್ಯ ವಿಂಗಡಣೆ ಮಾಡುವ ಮೂಲಕ ತ್ಯಾಜ್ಯ ವಿಂಗಡಣೆಯ ಕುರಿತು ಜಾಗೃತಿ ಮೂಡಿಸಿದರು. ಜತೆಗೆ ಅಲ್ಲಿಂದ ಅವರು ವಾಪಾಸ್ಸಾದ ಹಿನ್ನೆಲೆಯಲ್ಲಿ ಮೇಯರ್ ಅವರು ನೆದರ್‌ಲ್ಯಾಂಡ್ ವಿದೇಶಾಂಗ ಸಚಿವರು ಉಳಿದುಕೊಂಡಿದ್ದ ಖಾಸಗಿ ಹೋಟೆಲ್‌ಗೆ ಹೋಗಿ ತಮ್ಮನ್ನು ಸ್ವಾಗತಿಸಲು ಬರದೇ ಇದ್ದುದಕ್ಕಾಗಿ ವಿಷಾದ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಮೇಯರ್ ಅವರಿಗೆ ಬರ್ಟ್ ಅವರು ತ್ಯಾಜ್ಯ ಸಂಸ್ಕರಣೆ ಹಾಗೂ ವಿಲೇವಾರಿಗೆ ಸಂಬಂಧಿಸಿದಂತೆ ಹಲವು ಸಲಹೆಗಳನ್ನು ನೀಡಿದ್ದು, ಹೆಚ್ಚಿನ ಮಾಹಿತಿಯನ್ನು ಇ-ಮೇಲ್ ಮೂಲಕ ಕಳುಹಿಸುವುದಾಗಿ ಮೇಯರ್ ಅವರ ಇ-ಮೇಲ್ ಐಡಿ ಪಡೆದಿದ್ದಾರೆ.
ನೆದರ್‌ಲ್ಯಾಂಡ್‌ನ ಸಚಿವ ಬರ್ಟ್ ಕಿಂಯೋಡ್ರಿಪ್ ಅವರನ್ನು ಸ್ವಾಗತಿಸಲು ಮುಂದಾದಾಗ ಪ್ರತಿಭಟನಾಕಾರರು ಘೇರಾವ್ ಹಾಕಿದರು. ಹೀಗಾಗಿ ಅಲ್ಲಿಂದ ಹೊರಡಲು ತಡವಾಯಿತು. ಈ ಹಿನ್ನೆಲೆಯಲ್ಲಿ ಅವರು ಉಳಿದುಕೊಂಡಿದ್ದ ಹೋಟೆಲ್‌ಗೇ ಹೋಗಿ ವಿಷಾದ ವ್ಯಕ್ತಪಡಿಸಿದ್ದೇನೆ.
-ಜಿ. ಪದ್ಮಾವತಿ, ಮೇಯರ್