ನರಗುಂದ: ತಾಲೂಕಿನ ಭೈರನಹಟ್ಟಿ ಗ್ರಾಮದಲ್ಲಿ ಸರಣಿ ಅಪಘಾತದಿಂದ ಬೇಸತ್ತ ಗ್ರಾಮಸ್ಥರು ವೇಗ ನಿಯಂತ್ರಕ ಅಳವಡಿಸಲು ಆಗ್ರಹಿಸಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕೈಗೆತ್ತಿಕೊಂಡ ಗುತ್ತಿಗೆದಾರರ ಏಜೆನ್ಸಿಯ ಟಿಪ್ಪರ್ ತಡೆದು ಬುಧವಾರ ಪ್ರತಿಭಟನೆ ನಡೆಸಿದರು.
ಬುಧವಾರ ಬೆಳಗ್ಗೆ ಭೈರನಹಟ್ಟಿ ಗ್ರಾಮಸ್ಥರು ನಂ. 218ರ ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕೈಗೆತ್ತಿಕೊಂಡ ರಾಜದೀಪ ಬಿಲ್ಡ್‌ಕಾನ್ ಏಜೆನ್ಸಿಗೆ ಸೇರಿದ ಟಿಪ್ಪರ್‌ಗಳನ್ನು ತಡೆದು ನಿಲ್ಲಿಸಿದರು. ಮೂರು ಗಂಟೆಗಳ ಕಾಲ ಟಿಪ್ಪರ್‌ಗಳ ಓಡಾಟಕ್ಕೆ ತಡೆವೊಡ್ಡಿದ ಗ್ರಾಮಸ್ಥರು ಕೂಡಲೇ ಹೆದ್ದಾರಿಯಲ್ಲಿ ವೇಗ ನಿಯಂತ್ರಕ ಅಳವಡಿಸಲು ಪಟ್ಟು ಹಿಡಿದರು.
ಎರಡು ಅಪಘಾತ: ಮಂಗಳವಾರ ರಾತ್ರಿ 8ಕ್ಕೆ ಗ್ರಾಮ ಪಂಚಾಯತ್ ಮುಂಭಾಗದಲ್ಲಿ ಹೆದ್ದಾರಿಯನ್ನು ದಾಟುವಾಗ ವೇಗದಿಂದ ಬಂದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಗ್ರಾಮದ ಗಂಗವ್ವ ಶಂಕ್ರಪ್ಪ ನರಸಾಪೂರ ಗಂಭೀರ ಗಾಯಗೊಂಡಿದ್ದರು. ಬಳಿಕ ನರಗುಂದ ತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಕಿಮ್ಸ್‌ಗೆ ದಾಖಲಿಸಲಾಯಿತು. ತಲೆ ಮತ್ತು ಕೈಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ.
ಈ ಘಟನೆ ಮಾಸುವ ಮುನ್ನವೇ ಬುಧವಾರ ಬೆಳಗ್ಗೆ ಒತ್ತುಗಾಡಿಯಲ್ಲಿ ಕೆರೆಯಿಂದ ನೀರು ತರುವ ಸಂದರ್ಭದಲ್ಲಿ ಅದೇ ಸ್ಥಳದಲ್ಲಿ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಗ್ರಾಮದ ರಮೇಶ ಪುಲಕೇಶಿ ಐನಾಪುರ ಎಂಬುವರು ಗಂಭೀರ ಗಾಯಗೊಂಡಿದ್ದಾರೆ. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಬೂದೇಶ ಅವರ ಕಾಲು ಒತ್ತುಗಾಡಿಯಲ್ಲಿ ಸಿಲುಕಿ ಕಾಲಿನ ಮೂಳೆಗಳು ಮುರಿದು ಹುಬ್ಬಳ್ಳಿ ಕಿಮ್ಸ್‌ಗೆ ದಾಖಲಾಗಿದ್ದಾರೆ. ಘಟನೆ ಪರಿಣಾಮ ಕೂಡಲೇ ರೋಡ್ ಬ್ರೇಕರ್ ಹಾಕಲು ಆಗ್ರಹಿಸಿ ಗ್ರಾಮಸ್ಥರು ಗುತ್ತಿಗೆದಾರರ ಸುಮಾರು 20ಕ್ಕೂ ಹೆಚ್ಚು ಟಿಪ್ಪರ್‌ಗಳನ್ನು ಅಡ್ಡಗಟ್ಟಿ ನಿಲ್ಲಿಸಿದರು.
ಗುತ್ತಿಗೆದಾರರು ಬರುವವರೆಗೂ ಟಿಪ್ಪರ್ ಓಡಾಟಕ್ಕೆ ಅವಕಾಶ ಕೊಡುವುದಿಲ್ಲ ಎಂದು ಪಟ್ಟು ಹಿಡಿದರು. ಬಳಿಕ ಏಜನ್ಸಿ ಅಧಿಕಾರಿಗಳು ಸ್ಥಳಕ್ಕಾಗಮಿಸಿ ರೋಡ್ ಬ್ರೇಕರ್ ಅಳವಡಿಸುವ ಭರವಸೆ ನೀಡಿದ ಬಳಿಕ ಗ್ರಾಮಸ್ಥರು ಪಟ್ಟು ಸಡಿಲಿಸಿದರು. ಸಂಜೆ ಹೆದ್ದಾರಿಯಲ್ಲಿ ದೊರೆಸ್ವಾಮಿ ಮಠ, ಬಸ್ ನಿಲ್ದಾಣ, ಪ್ರಾಥಮಿಕ ಶಾಲೆ, ಗ್ರಾಪಂ ಮತ್ತು ಕೆರೆಯ ಬಳಿ ಸೇರಿ ಐದು ಬ್ರೇಕರ್ ಅಳವಡಿಸಲಾಯಿತು.