Advertisement

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

09:45 PM Aug 23, 2019 | Team Udayavani |

ದೇವನಹಳ್ಳಿ: ತಾಲೂಕು ಭೂ ಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಕಾರ್ಯನಿರ್ವಾಹಕ ನೌಕರರ ಸಂಘದಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕಪ್ಪು ಪಟ್ಟಿ ಧರಿಸಿ ನಗರದ ಮಿನಿ ವಿಧಾನಸೌಧದ ಭೂ ಮಾಪನ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಸರ್ವರ್‌ ಸಮಸ್ಯೆಯಿಂದಾಗಿ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಪ್ರತಿ ತಿಂಗಳು 30 ಕಡತಗಳನ್ನು ನೋಡುವಂತೆ ಸರ್ಕಾರ ಆದೇಶ ಮಾಡಿದ್ದು, ಕೂಡಲೇ ಕೈಬಿಡಬೇಕು ಎಂದು ಒತ್ತಾಯಿಸಿದರು.

Advertisement

ತಾಲೂಕು ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಕಾರ್ಯನಿರ್ವಾಹಕ ನೌಕರರ ಸಂಘದ ಅಧ್ಯಕ್ಷ ನಿರಂಜನ್‌ ಆರಾಧ್ಯ ಮಾತನಾಡಿ, ಸೆ.4ರಂದು ಕೇಂದ್ರ ಸಂಘದಿಂದ ನೀಡಿರುವ ಒಂದು ದಿನದ ಬೆಂಗಳೂರು ಚಲೋ, ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತೇವೆ. ಪ್ರತಿ ತಿಂಗಳು 30 ಕಡತಗಳನ್ನು ವಿಲೇವಾರಿ ಮಾಡುವಂತೆ ಸರ್ಕಾರ ಆದೇಶ ನೀಡಿದೆ. ಆದರೆ ಅದನ್ನು 20 ಕಡತಗಳ ವಿಲೇವಾರಿಗೆ ಇಳಿಸಬೇಕು.

ಭೂ ಮಾಪಕರಿಗೆ ಮಾಸಿಕ 30 ಕಡತಗಳ ಗುರಿ ಹೊರಡಿಸಿರುವುದು ಅವೈಜ್ಞಾನಿಕ ಸುತ್ತೋಲೆಯಾಗಿದೆ. 30 ದಿನಗಳಲ್ಲಿ ನಾಲ್ಕು ಭಾನುವಾರ, ಎರಡನೇ ಮತ್ತು ನಾಲ್ಕನೇ ಶನಿವಾರ ಹಾಗೂ ವಿವಿಧ ಸರ್ಕಾರಿ ರಜೆಗಳು ಹೋದರೆ ಕೇವಲ ಸಿಗುವುದು ಕೆಲಸಕ್ಕೆ 23 ದಿವಸಗಳು ಮಾತ್ರ ಸಿಗುತ್ತದೆ. ಅದರಲ್ಲಿ ತಿಂಗಳಲ್ಲಿ 4-5 ದಿವಸ ಕಂಪ್ಯೂಟರ್‌ಗಳಲ್ಲಿ ಸರ್ವರ್‌ ಸಮಸ್ಯೆ ಎದುರಿಸಬೇಕಾಗುತ್ತದೆ.

ಹೊರಗುತ್ತಿಗೆ ಬಂದ ಸಹಾಯಕ ನೇಮಕಾತಿಯನ್ನು ಕೈಬಿಟ್ಟು ಭೂ ಮಾಪಕರ ಹುದ್ದೆಗಳ ಸಂಖ್ಯೆಗೆ ಅನುಗುಣವಾಗಿ ಬಂದು ಜವಾನರ ಕಾಯಂ ಹುದ್ದೆಗಳನ್ನು ಸೃಜಿಸುವುದು ಹಾಗೂ ಕೂಡಲೇ ಅವುಗಳನ್ನು ನೇಮಕ ಮಾಡಬೇಕು. ಇಲಾಖೆಯ ಎಲ್ಲಾ ಕಚೇರಿಗಳಲ್ಲಿ ಸುಗಮ ಆಡಳಿತಕ್ಕೆ ಪೂರಕವಾಗುವಷ್ಟು ಸಂಖ್ಯೆಯಲ್ಲಿ ಕಚೇರಿ ಹಾಗೂ ಫೀಲ್ಡ್‌ ಮಾಪಕರನ್ನು ನಿಯೋಜಿಸಬೇಕು. ಮೇಲಾಧಿಕಾರಿಗಳಿಂದ ಕಿರುಕುಳ ಹಾಗೂ ಮಾನಸಿಕ ಹಿಂಸೆಯನ್ನು ಭೂ ಮಾಪಕರು ಅನುಭವಿಸುತ್ತಿದ್ದಾರೆ.

ಕಳೆದ ತಿಂಗಳಿನಷ್ಟೇ ಉಡುಪಿ ಜಿಲ್ಲೆಯ ಬ್ರಹ್ಮವರದ ಭೂ ಮಾಪನಾಧಿಕಾರಿ ಆತ್ಮಹತ್ಯೆಗೆ ಶರಣಾಗಿದ್ದರು. ತಾಂತ್ರಿಕ ವೇತನ ಶ್ರೇಣಿ ನೀಡುವುದು ಸಮಾನ ವಿದ್ಯಾರ್ಹತೆ ಅನ್ಯ ಇಲಾಖೆಯ ಹುದ್ದೆಯಲ್ಲಿರುವ ಸರ್ಕಾರಿ ನೌಕರರಿಗೆ ನೀಡುತ್ತಿರುವ ವೇತನ ಶ್ರೇಣಿಯನ್ನು ಅಧಿಕಾರಿಗಳಿಗೆ ನೀಡುವಂತೆ ಆಗಬೇಕು ಎಂದು ಒತ್ತಾಯಿಸಿದರು. ತಾಲೂಕು ಪದಾಧಿಕಾರಿಗಳಾದ ಪರಮೇಶ್ವರ್‌, ಜಗದೀಶ್‌, ರವೀಂದ್ರನಾಥ್‌, ಚಂದ್ರಮೌಳಿ, ಚಂದ್ರಶೇಖರ್‌, ಎಂ.ಎನ್‌.ಪ್ರಕಾಶ್‌ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next