Advertisement

ಆರೋಗ್ಯ ಕ್ಷೇತ್ರ ಬಲಪಡಿಸಲು ಒತ್ತಾಯಿಸಿ ಪ್ರತಿಭಟನೆ

12:32 PM Jul 24, 2020 | Suhan S |

ಬಳ್ಳಾರಿ: ಸಾರ್ವಜನಿಕ ಆರೋಗ್ಯ ಕ್ಷೇತ್ರವನ್ನು ಬಲಪಡಿಸಬೇಕೆಂದು ಒತ್ತಾಯಿಸಿ ನಗರದ ತಹಸೀಲ್ದಾರ್‌ ಕಚೇರಿ ಎದುರು ಅಖೀಲ ಭಾರತ ಜನವಾದಿ ಮಹಿಳಾ ಸಂಘಟನೆ ವತಿಯಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.

Advertisement

ದೇಶಾದ್ಯಂತ ಕೋವಿಡ್‌ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಜನಸಾಮಾನ್ಯರು, ಮಹಿಳೆಯರು ತೀವ್ರ ತೊಂದರೆಗೆ ಒಳಗಾಗಿದ್ದಾರೆ. ಕೋವಿಡ್‌ ಬಾಧೆಯ ಜೊತೆಗೆ ಕೊವಿಡೇತರ ಸಮಸ್ಯೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಈಗ ಸರ್ಕಾರವು ಗಂಭೀರವಾದ ಕ್ರಮಗಳನ್ನು ಕೈಗೊಳ್ಳದಿದ್ದರೆ ಬಹು ಸಂಖ್ಯಾತ ಮಹಿಳೆಯರು ತೀವ್ರವಾದ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಅಖೀಲ ಭಾರತ ಜನವಾದಿ ಮಹಿಳಾ ಸಂಘಟನೆಯು ಜುಲೈ 23ರಂದು ರಾಷ್ಟ್ರೀಯ ಬೇಡಿಕೆ ದಿನವನ್ನಾಗಿ ಆಚರಿಸುತ್ತಿದೆ ಎಂದು ಸಂಘಟನೆಯ ಅಧ್ಯಕ್ಷ ಚಂದ್ರಕುಮಾರಿ ತಿಳಿಸಿದ್ದಾರೆ.

ಕೋವಿಡ್‌ ಚಿಕಿತ್ಸೆಗಳನ್ನು ಉಚಿತವಾಗಿ ಸಾರ್ವತ್ರಿಕವಾಗಿ ನೀಡಬೇಕು. ಕೋವಿಡೇತರ ಆರೋಗ್ಯದ ಸಮಸ್ಯೆಗಳ ಚಿಕಿತ್ಸೆಗೆ ಪರ್ಯಾಯ ವ್ಯವಸ್ಥೆ ಮಾಡಬೇಕು. ಕೋವಿಡ್‌ ಚಿಕಿತ್ಸೆ ನಿರಾಕರಿಸುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಮಕೈಗೊಳ್ಳಬೇಕು. ಪ್ರದೇಶವಾರು ವೈದ್ಯಕೀಯ ಸೌಲಭ್ಯಕ್ಕಾಗಿ ಸಂಚಾರಿ ಆರೋಗ್ಯ ವ್ಯವಸ್ಥೆ ಕಲ್ಪಿಸಬೇಕು. ವೈದ್ಯಕೀಯ ಸಿಬ್ಬಂದಿಗಳು ಮತ್ತು ಮುಂಚೂಣಿಯ ಕೋವಿಡ್‌ ವಾರಿಯರ್ಸ್ ಗಳಿಗೆ ಸುರಕ್ಷಾ ಸೌಲಭ್ಯ ನೀಡಬೇಕು.

ಆಶಾ, ಅಂಗನವಾಡಿ ಸಿಬ್ಬಂದಿಗಳಿಗೆ ಸೂಕ್ತ ವ್ಯವಸ್ಥೆ ಮತ್ತು ವಿಶೇಷ ವೇತನ ನೀಡಬೇಕು. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ವೈದ್ಯಕೀಯ ಸಿಬ್ಬಂದಿ ನೇಮಕ ಮಾಡಬೇಕು. ಗರ್ಭಿಣಿ, ಬಾಣಂತಿಯರು ಮಕ್ಕಳ ಪಾಲನೆಗೆ ಅಗತ್ಯವಾದ ಮಾತೃಶ್ರೀ ಯೋಜನೆಯನ್ನು ಮುಂದುವರೆಸಬೇಕು. ಮಹಿಳೆಯರ ಹೆರಿಗೆ ಸಂಬಂಧಿತ ಸಮಸ್ಯೆಗಳಿಗೆ ಪ್ರತ್ಯೇಕ ಅಂಬ್ಯುಲೆನ್ಸ್‌ ವ್ಯವಸ್ಥೆ ಮಾಡಬೇಕು. ಸುರಕ್ಷಿತ ಸಂಚಾರಿ ಕೋವಿಡ್‌ ಟೆಸ್ಟ್‌ ವ್ಯವಸ್ಥೆ ಮಾಡಬೇಕು. ಸುರಕ್ಷಾ ಕ್ರಮಗಳನ್ನು ಅನುಸರಿಸಿ ಪೌಷ್ಟಿಕ ಆಹಾರ ಪೂರೈಕೆ ಮಾಡಬೇಕು ಎಂದವರು ಒತ್ತಾಯಿಸಿದರು.  ಬಳಿಕ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಸಂಘಟನೆಯ ಸದಸ್ಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next