ಮೈಸೂರು: ನಗರದ ಕೆಆರ್‌ಎಸ್ ರಸ್ತೆಯ ಒಂಟಿಕೊಪ್ಪಲ್ ಪೆಟ್ರೋಲ್ ಬಂಕ್‌ನ ಮಹರ್ಷಿ ವಾಲ್ಮೀಕಿ ವೃತ್ತದಲ್ಲಿ ಅಳವಡಿಸಿರುವ ನಾಮಫಲಕ ಸರಿಪಡಿಸುವಂತೆ ಆಗ್ರಹಿಸಿ ಪಡುವಾರಹಳ್ಳಿ ಶ್ರೀಗಂಧ ಯುವಕರ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದರು.
ವಾಲ್ಮೀಕಿ ರಸ್ತೆಯ ಜಂಕ್ಷನ್‌ನಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ವಾಲ್ಮೀಕಿ ರಸ್ತೆಗೆ ಹಾಕಲಾಗಿರುವ ನಾಮಫಲಕ ಹಾಳಾಗಿ ಬಿದ್ದಿದ್ದರು, ಹೊಸ ನಾಮಫಲಕ ಅಳವಡಿಸದೇ ನಗರಪಾಲಿಕೆ ನಿರ್ಲಕ್ಷ್ಯವಹಿಸಿರುವುದು ಖಂಡನೀಯ.
ಹಿಂದು ಧರ್ಮದ ಪವಿತ್ರಗ್ರಂಥ ರಾಮಾಯಣ ರಚಿಸಿರುವ ಮಹಿರ್ಷಿ ವಾಲ್ಮೀಕಿ ಅವರ ನಾಮಫಲಕ ಮುರಿದು ಬಿದ್ದು, ಹಲವು ದಿನಗಳೇ ಕಳೆದಿವೆ. ಆದರೂ ನಾಮಫಲಕವನ್ನು ಸರಿಪಡಿಸಲು ಅಥವಾ ಹೊಸ ನಾಮಫಲಕ ಅಳವಡಿಸಲು ಪಾಲಿಕೆ ಆಸಕ್ತಿ ತೋರುತ್ತಿಲ್ಲ.
ಪಾಲಿಕೆ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತು ಮುರಿದು ಬಿದ್ದಿರುವ ನಾಮಫಲಕವನ್ನು ತೆರವುಗೊಳಿಸಿ, ಹೊಸದಾಗಿ ಮಹರ್ಷಿ ವಾಲ್ಮೀಕಿ ಹೆಸರಿನ ನಾಮಫಲಕ ಅಳವಡಿಸಬೇಕು, ಇಲ್ಲವಾದಲ್ಲಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ವಕೀಲ ರಾಮಕೃಷ್ಣ, ರಾಜ್ಯ ನಾಯಕರ ವೇದಿಕೆ ಅಧ್ಯಕ್ಷ ದ್ಯಾವಪ್ಪ ನಾಯಕ, ಚಿಕ್ಕವೆಂಕಟ, ಶಿವಪ್ರಕಾಶ್, ಮಹೇಶ್, ಜಿ.ಎಂ.ದಿವಾಕರ, ಚಿಕ್ಕಅರಸನಾಯಕ, ಬಸವರಾಜು ಮತ್ತಿತರರು ಪಾಲ್ಗೊಂಡಿದ್ದರು.